

ದಾಂಡೇಲಿ: ರಾಜ್ಯದ ಪ್ರತಿಷ್ಠಿತ ಸುಪಾ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಿರುವ ದೃಷ್ಟಿಯಿಂದ ಮುಂಜಾಗ್ರತೆ ಕ್ರಮವಾಗಿ ಡ್ಯಾಮಿನ ಮೂರು ಗೇಟ್ಗಳನ್ನು ಮಂಗಳವಾರ ಮಧ್ಯಾಹ್ನ 12 ಗಂಟೆಗೆ ತೆರೆಯಲಾಯಿತು. ಸುಪಾ ಜಲಾಶಯದ ಒಟ್ಟು ಎತ್ತರ 564 ಮೀ. ಇದ್ದು ಮಂಗಳವಾರದ ನೀರಿನ ಮಟ್ಟ 559.85 ಮೀ ಇದೆ. ಈ ಸುಂದರ ರಮಣಿಯ ದೃಶ್ಯ ನೋಡಲು ಜನರು ತಂಡೋಪತಂಡವಾಗಿ ಆಗಮಿಸಿ ಡ್ಯಾಂನ ಸೌಂದರ್ಯ ಕಣ್ತುಂಬಿಕೊಂಡರು. ಈ ಹಿಂದೆ 2004, 2005, 2019 ಹಾಗೂ 2020ರಲ್ಲಿ ಸೇರಿ ನಾಲ್ಕು ಬಾರಿ ಜಲಾಶಯದ ನೀರು ಹೊರ ಬಿಡಲಾಗಿತ್ತು. ಇದೀಗ 5ನೇ ಬಾರಿ 2024ರಲ್ಲಿ ಮಂಗಳವಾರ ಮಧ್ಯಾಹ್ನ ನೀರು ಹೊರ ಬಿಡಲಾಗಿದೆ.
ಸದ್ಯದ ಹೊರ ಹರಿವು 10 ಸಾವಿರ ಕ್ಯೂಸೆಕ್, ಒಳ ಹರಿವು 24 ಸಾವಿರ ಕ್ಯೂಸೆಕ್ ಜಲಾಶಯದ ಕೆಳ ಬದಿಯ ಎರಡು ವಿದ್ಯುತ್ ಘಟಕಗಳಿಂದ ವಿದ್ಯುತ್ ಉತ್ಪಾದಿಸಿ ನೀರಿನ ಹೊರ ಹರಿವು 4500 ಕ್ಯೂಸೆಕ್ ಇದೆ. ಜಲಾಶಯದ ನೀರು ಹೊರ ಬಿಡುವ ಸಂದರ್ಭದಲ್ಲಿ ಕೆಪಿಸಿ ಉನ್ನತ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.