

ಕಾರವಾರ: ಬಾಡ ಗ್ರಾಮದ ಕಾಂಚಿಕಾ ಪರಮೇಶ್ವರಿ ಬಂಡಿ ಹಬ್ಬವು ಗುರುವಾರ ಸಂಪನ್ನಗೊಂಡಿತು. ಬೆಳಗ್ಗೆ ಕಾಂಚಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಉಡಿ ತುಂಬುವ ಕಾರ್ಯಕ್ರಮಗಳು ನಡೆದವು. ನಂತರ ಸಾಯಂಕಾಲ ಗಣಪತಿ ದೇವಸ್ಥಾನ ಮಾರ್ಗವಾಗಿ ಗ್ರಾಮ ದೇವರ ಪೀಠಕ್ಕೆ ಕಳಶವನ್ನು ಗುನಗರು ಹೊತ್ತೊಯ್ದು ಪೂಜೆ ಸಲ್ಲಿಸುವುದರೊಂದಿಗೆ ಬಂಡಿ ಹಬ್ಬದ ಧಾರ್ಮಿಕ ವಿಧಿಗಳು ಮುಕ್ತಾಯವಾದವು.
ಬಾಡ ಗ್ರಾಮ ದೇವರಾದ ಮಹಾದೇವ ದೇವರ ಪರಿವಾರ ದೇವರ ಬಂಡಿ ಹಬ್ಬ ಇದಾಗಿದೆ. ಅಕ್ಷಯ ತೃತೀಯಾದಿಂದ ಎಂದರೆ ಮೇ 10 ರಿಂದ ಕಳಶದ ಸಂಚಾರ ಪ್ರಾರಂಭವಾಗಿತ್ತು. ಕನಕಾಂಬರ, ಮಲ್ಲಿಗೆ ಮಾಲೆಯಿಂದ ಅಲಂಕರಿಸಿದ ಸುಂದರ ದೇವಿಯ ಮುಖವಾಡವನ್ನು ಕಳಶದ ಮೇಲಿಟ್ಟು ಅದನ್ನು ಮಡಿಯುಟ್ಟ ಗುನಗರು ಪ್ರತಿ ದಿನ ಮಧ್ಯಾಹ್ನ ಹೊತ್ತು ನಡೆದರೆ, ಅವರೆದುರು ವಾದ್ಯ, ಛತ್ರ, ಚಾಮರ ಹಿಡಿದು ಖಡ್ಗ ಹಿಡಿದ ಪರಿವಾರದವರು ನಡೆದರು.
ಮಹಾದೇವ ದೇವರ ಪರಿವಾರ ದೇವರಾದ ಶೆಬಿ ದೇವಸ್ಥಾನ, ಹೆದ್ದೇವರ ದೇವಸ್ಥಾನ ಮುಂತಾದೆಡೆ ಏಳೂ ದಿನ ಕಳಶ ಪ್ರದಕ್ಷಿಣೆ ನಡೆಯಿತು. ಬುಧವಾರ ಬೆಳಗ್ಗೆ ಗಿಂಡಿ ತುಂಬುವ ಹಾಗೂ ಉಡಿ ತುಂಬುವ ಕಾರ್ಯಗಳು ನಡೆದವು. ಮಧ್ಯಾಹ್ನ ಕಳಶವು ಗ್ರಾಮ ದೇವಸ್ಥಾನದ ಪೀಠಕ್ಕೆ ತೆರಳಿತು. ರಾತ್ರಿ ದೇವರನ್ನು ಹೊತ್ತ ಗುನಗರನ್ನು ಬಾಂಡಿಶಿಟ್ಟಾದ ರಾಟೆಯ ಮೇಲೆ ಕೂರಿಸಿ, ಹರಹರ ಮಹಾದೇವ ಉದ್ಘೋಷದೊಂದಿಗೆ ತಿರುಗಿಸಿ ಪೂಜೆ ಸಲ್ಲಿಸಲಾಯಿತು. ಸಾವಿರಾರು ಜನರು ಈ ಸನ್ನಿವೇಶಕ್ಕೆ ಸಾಕ್ಷಿಯಾದರು. ಮಹಾದೇವ ವಿನಾಯಕ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ, ಸದಸ್ಯರು ಸಹಕರಿಸಿದರು.