Gokarna 35 ವರ್ಷಗಳ ನಂತರ ಮೂಲ ತಾಣ ಭೀಮೇಶ್ವರ ಸನ್ನಿಧಿಗೆ ತೆರಳಿದ ಮಹಾಬಲೇಶ್ವರ

Gokarna
Published on

Gokarna :  ಪುರಾಣ ಖ್ಯಾತ ಆತ್ಮಲಿಂಗ ಸನ್ನಿಧಿ ಶ್ರೀಮಹಾಬಲೇಶ್ವರ ಮಂದಿರದಲ್ಲಿ ಶುಕ್ರವಾರ ವಾರ್ಷಿಕ ಕಾರ್ತಿಕ ಪೌರ್ಣಿಮೆ ನಿಮಿತ್ತ ವಿಶೇಷ ಕಾರ್ಯಕ್ರಮಗಳು ವೈಭವದಿಂದ ನಡೆದವು.ಮಧ್ಯಾನ್ಹ ಶ್ರೀದೇವರ ವಿಶೇಷ ಮೆರವಣಿಗೆ ಮಂದಿರದಿಂದ ಹೊರಟು ಸಹ್ಯಾದ್ರಿ ಪರ್ವತ ತಪ್ಪಲಿನ ಶ್ರೀಜನಾರ್ದನ ದೇವ ಸನ್ನಿಧಿಯ ಭೀಮಕುಂಡಕ್ಕೆ ತೆರಳಿ ವನಭೋಜನದಲ್ಲಿ ಪಾಲ್ಗೊಂಡಿತು.ಈ ಹಿಂದೆ ಭೀಮಕುಂಡದಲ್ಲಿನ ಪುರಾತನ ಶ್ರೀಜನಾರ್ದನ ಮತ್ತು ಶ್ರೀಭೀಮೇಶ್ವರ ಮಂದಿರದಲ್ಲಿ ಶ್ರೀಮಹಾಬಲೇಶ್ವರನಿಗೆ ಅಷ್ಟಾವಧಾನ ಸಹಿತ ವಿಶೇಷ ಸೇವೆ ಸಲ್ಲಿಸಲಾಗುತ್ತಿತ್ತು.ಆದರೆ ಮಂದಿರ ಸಂಪೂರ್ಣವಾಗಿ ಜೀರ್ಣಗೊಂಡು ನೆಲ ಸೇರಿದ ಕಾರಣ ಈ ದಿನ ನಡೆಯುವ ಹೋಮಾದಿ ಸಹಿತ ಎಲ್ಲ ಧಾರ್ಮಿಕ ಕಾರ್ಯಗಳನ್ನು ಹೊರಗಿನ ಪ್ರತ್ಯೇಕ ಸ್ಥಳದಲ್ಲಿ ಕೈಗೊಳ್ಳುತ್ತ ಬರಲಾಗಿತ್ತು.

Gokarnaಯಂಗ್‌ಸ್ಟಾರ್ ಪ್ರಯತ್ನ

ಇಲ್ಲಿನ ಯಂಗ್‌ಸ್ಟಾರ್ ಕ್ಲಬ್ 15 ಲಕ್ಷರೂ.ಗೂ ಅಧಿಕ ವೆಚ್ಚದಲ್ಲಿ ಶ್ರೀಜನಾರ್ದನ ಹಾಗೂ ಶ್ರೀಭೀಮೇಶ್ವರ ಗುಡಿಯನ್ನು ಸುಂದರವಾಗಿ ಜೀರ್ಣೋದ್ಧಾರಗೊಳಿಸಿ ನೂತನವಾಗಿ ನಿರ್ಮಿಸಿತ್ತು.ಈ ಹಿನ್ನೆಲೆಯಲ್ಲಿ ಮೂವತ್ತೈದು ವರ್ಷಗಳ ನಂತರ ಶುಕ್ರವಾರ ಮತ್ತೆ ಮೂಲ ತಾಣ ಭೀಮೇಶ್ವರ ಸನ್ನಿಧಿಗೆ ಬಿಜಯಂಗೈದ ಶ್ರೀದೇವರನ್ನು ಮುಖ್ಯ ಅರ್ಚಕ ವೇ.ಗಣಪತಿ ಗಜಾನನ ಭಟ್ಟ ಹಿರೇ ಆಗಮೋಕ್ತವಾಗಿ ಸ್ವಾಗತಿಸಿದರು.ಮುಖ್ಯ ಅರ್ಚಕ ವೇ.ಅಮೃತೇಶ ಹಿರೇ ಮತ್ತು ಅರ್ಚಕ ಉಪಾಧಿವಂತರ ನೇತೃತ್ವದಲ್ಲಿ ಶಾಸ್ತ್ರೋಕ್ತ ಸೇವೆಗಳೊಂದಿಗೆ ಮಹಾಮಂಗಳಾರತಿ ಸಮರ್ಪಣೆ ನಡೆಯಿತು.ಮಂದಿರ ಸಮಿತಿ ಸದಸ್ಯರಾದ ವೇ.ಸುಬ್ರಹ್ಮಣ್ಯ ಅಡಿ,ವೇ.ಪರಮೇಶ್ವರ ಪ್ರಸಾದ,ಮಹೇಶ ಹಿರೇಗಂಗೆ,ಯAಗ್‌ಸ್ಟಾರ್ ಕ್ಲಬ್ ಅಧ್ಯಕ್ಷ ನಾಗಕುಮಾರ ಗೋಪಿ,ಸದಸ್ಯರಾದ ರವಿ ಸೂರಿ,ಗಣೇಶ ಅಡಿಮುಳೆ,ವೇ.ನಾಗರಾಜ ಜೋಶಿ ಮತ್ತಿತರರಿದ್ದರು.ಸೇವಾದಿಗಳ ತರುಯವಾಯ ಶ್ರೀದೇವರ ಪಲ್ಲಕ್ಕಿ ಮೆರವಣಿಗೆ ಸ್ಥಳೀಯ ಕಟ್ಟಳೆಯಂತೆ ಮಾರ್ಗ ಮಧ್ಯದ ವಿವಿಧ ಕಡೆಗಳಿಗೆ ಭೇಟಿಯಿತ್ತು ಸೇವೆಯನ್ನು ಸ್ವೀಕರಿಸಿತು.ಸಂಜೆ 7ಗಂಟೆಗೆ Gokarna ಕೋಟಿತೀರ್ಥದ ಶ್ರೀಹನುಮಂತೇಶ್ವರ ಗುಡಿಯಿಂದ ಹೊರಟ ಶ್ರೀದೇವರ ಸವಾರಿ ರಥಬೀದಿಯಿಂದ ಕಲಾಮಯ ಬೆಳ್ಳಿ ರಥವನ್ನೇರಿ ವಿಶೇಷವಾದ ವಿವಿಧ ಮಂಗಳವಾದ್ಯಗಳೊಂದಿಗೆ ಭವ್ಯ ಮೆರವಣಿಗೆಯಲ್ಲಿ ಮಂದಿರಕ್ಕೆ ತೆರಳಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net