ಹೋಳಿ ಸಂಭ್ರಮಕ್ಕೆ ಕರೊನಾ ತಣ್ಣೀರು....!

9-hvr-04
Published on

ಹಾವೇರಿ: ವಿಶ್ವದಾದ್ಯಂತ ಭೀತಿ ಹುಟ್ಟಿಸಿರುವ ಕರೊನಾ ವೈರಸ್ ಹಾವಳಿ ಈ ಬಾರಿ ಜಿಲ್ಲೆಯಲ್ಲಿ ಹೋಳಿ ಹುಣ್ಣಿಮೆಯ ಬಣ್ಣದಾಟದ ಸಂಭ್ರಮವನ್ನು ಕಸಿದುಕೊಂಡಿದೆ.

ಕರೊನಾ ವೈರಸ್ ಜಿಲ್ಲೆಯಲ್ಲಿ ಈವರೆಗೂ ಕಾಣಿಸಿಕೊಳ್ಳದೇ ಇದ್ದರೂ ಅದನ್ನು ತಡೆಯಲು ಕೈಗೊಳ್ಳುತ್ತಿರುವ ಮುಂಜಾಗ್ರತಾ ಕ್ರಮಗಳ ಪರಿಣಾಮ ಮಾತ್ರ ಜೋರಾಗುತ್ತಿದೆ. ಜಿಲ್ಲೆಯಾದ್ಯಂತ ಮಾ. 9ರ ಹೋಳಿಹುಣ್ಣಿಮೆಯಿಂದ ಆಯಾ ಗ್ರಾಮ, ಹೋಬಳಿ, ನಗರ, ಪಟ್ಟಣ ಪ್ರದೇಶಗಳಲ್ಲಿ ಸಂಪ್ರದಾಯಂತೆ ಮಾ. 21ರವರೆಗೆ ರಂಗಿನಾಟ ನಡೆಯುತ್ತಿತ್ತು. ಕರೊನಾ ವೈರಸ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಅದರಂತೆ ಬಣ್ಣದಾಟಕ್ಕೂ ಈ ಬಾರಿ ಅಧಿಕೃತವಾಗಿ ಅಲ್ಲದಿದ್ದರೂ ಮೌಖಿಕವಾಗಿ ಬ್ರೇಕ್ ಹಾಕಿಸಲು ಮುಂದಾಗಿದೆ. ಇದಕ್ಕೆ ಅನೇಕರು ಬೆಂಬಲ ವ್ಯಕ್ತಪಡಿಸಿ ಬಣ್ಣದಾಟವನ್ನು ಕೈಬಿಟ್ಟಿದ್ದಾರೆ.

ಹೋಳಿಹುಣ್ಣಿಮೆ ಆಚರಣೆಗಾಗಿ ಈಗಾಗಲೇ ರತಿ, ಕಾಮಣ್ಣನರನ್ನು ಜಿಲ್ಲೆಯ ವಿವಿಧೆಡೆ ಪ್ರತಿಷ್ಠಾಪಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕೆಲವೆಡೆ ಹೋಳಿಹುಣ್ಣಿಮೆಯ ದಿನದಂದೇ ಬಣ್ಣದಾಟವಿದ್ದರೆ, ಕೆಲವೆಡೆ ಹೋಳಿಹುಣ್ಣಿಮೆ ಮರುದಿನ ಮಂಗಳವಾರ ಬಣ್ಣದಾಟವಿದೆ. ಸವಣೂರ ತಾಲೂಕು ಕುರುಬರಮಲ್ಲೂರ, ಹಾವೇರಿ ತಾಲೂಕು ನಾಗನೂರ ಗ್ರಾಮದಲ್ಲಿ ಮಾ. 9ರಂದು ಬಣ್ಣದಾಟವಿತ್ತು. ಆದರೆ, ಪೊಲೀಸರು ಭಾನುವಾರ ಗ್ರಾಮಕ್ಕೆ ಭೇಟಿ ನೀಡಿ, ಮೌಖಿಕವಾಗಿ ಎಚ್ಚರಿಕೆ ನೀಡಿದ್ದರು. ಅದರಂತೆ ಗ್ರಾಮದಲ್ಲಿ ಗ್ರಾಪಂನಿಂದ ಡಂಗುರ ಸಾರಲಾಗಿತ್ತು. ಹೀಗಾಗಿ ಸೋಮವಾರ ಸಾಂಪ್ರದಾಯಿಕ ಪದ್ಧತಿಯಂತೆ ಚಕ್ಕಡಿಯಲ್ಲಿ ಕಾಮಣ್ಣನ ಮೆರವಣಿಗೆ ನಡೆಸಿ ಕಾಮದಹನ ಮಾಡಿದ್ದೇವೆ ಎಂದು ಗ್ರಾಮಸ್ಥರೊಬ್ಬರು ‘ವಿಜಯವಾಣಿ’ಗೆ ತಿಳಿಸಿದರು.

ಅಧಿಕೃತ ಸೂಚನೆಯಿಲ್ಲ: ಹೆಚ್ಚಿನ ಜನರು ಒಂದೆಡೆ ಸೇರಿದರೆ ಕರೊನಾ ವೈರಸ್ ಹರಡಲಿದೆ ಎಂಬ ಭೀತಿಯಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರಿಗೆ ಆರೋಗ್ಯ ಇಲಾಖೆ ಕೆಲ ನಿರ್ಬಂಧಗಳನ್ನು ಜಿಲ್ಲಾಡಳಿತಕ್ಕೆ ಸೂಚಿಸಿದೆ. ಅದರಂತೆ ಹಿರಿಯ ಅಧಿಕಾರಿಗಳು ರ್ಚಚಿಸಿ ಸಾಧ್ಯವಾದಷ್ಟು ರೋಗ ಹರಡುವಿಕೆ ನಿಯಂತ್ರಿಸಲು ಮೌಖಿಕವಾಗಿ ಇಂತಹ ಕ್ರಮಗಳಿಗೆ ಮುಂದಾಗಿದೆ. ಬಣ್ಣದಾಟದ ಸಮಯದಲ್ಲಿ ನೈಸರ್ಗಿಕ ಬಣ್ಣದ ಜೊತೆಗೆ ಆಯಿಲ್​ಪೇಂಟ್ ಬಳಸುವುದು, ತತ್ತಿಗಳನ್ನು ತಲೆ ಮೇಲೆ ಒಡೆಯುವುದು ಸೇರಿ ಅನೇಕ ಕೃತ್ಯಗಳನ್ನು ನಡೆಸುವುದು ಸಾಮಾನ್ಯ. ವಿಷಕಾರಿ ಬಣ್ಣವು ಮನುಷ್ಯನ ಹೊಟ್ಟೆ ಸೇರಿದರೆ ಅಪಾಯವಾಗುವ ಸಾಧ್ಯತೆಗಳು ಹೆಚ್ಚಿವೆ. ಹೀಗಾಗಿ ಜನರಿಗೆ ಜಾಗೃತಿಗಾಗಿ ಕೆಲ ಮೌಖಿಕ ಸೂಚನೆಗಳನ್ನು ನೀಡಲಾಗಿದೆ. ಬಣ್ಣದಾಟಕ್ಕೆ ನಿರ್ಬಂಧ ಹಾಕಿಲ್ಲ. ನೈಸರ್ಗಿಕ ಬಣ್ಣ ಉಪಯೋಗಿಸಿ ಬಣ್ಣದಾಟ ಆಡಿದರೆ ಎಲ್ಲರಿಗೂ ಒಳ್ಳೆಯದು ಎಂದು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರತಿವರ್ಷದಂತೆ ಈ ಬಾರಿಯೂ ಹೋಳಿಹಬ್ಬದ ಅಂಗವಾಗಿ ಬಣ್ಣದಾಟವಾಡಲು ಯುವಕರು ಸಜ್ಜಾಗಿದ್ದರು. ಪೊಲೀಸರು ಭಾನುವಾರ ಗ್ರಾಮಕ್ಕೆ ಬಂದು ಮೌಖಿಕ ಸೂಚನೆ ನೀಡಿದ್ದರಿಂದ ಗ್ರಾಮದಲ್ಲಿ ಡಂಗುರ ಸಾರಲಾಗಿತ್ತು. ಕರೊನಾ ರೋಗ ಭೀತಿ ಹೆಚ್ಚಿರುವುದರಿಂದ ಗ್ರಾಮಸ್ಥರು ಇದಕ್ಕೆ ಸಮ್ಮತಿ ಸೂಚಿಸಿ ಬಣ್ಣದಾಟ ನಿಷೇಧಿಸಿದ್ದೇವೆ.| ಈರಪ್ಪ ಜಲ್ಲಾಪುರ, ಕುರುಬರಮಲ್ಲೂರ ಗ್ರಾಮಸ್ಥಹೋಳಿಹಬ್ಬದಲ್ಲಿ ಕೃತಕ ಬಣ್ಣದಪುಡಿ, ಚೀನಾದಿಂದ ಆಮದಾಗಿರುವ ಬಣ್ಣ ಬಳಸಬೇಡಿ ಎಂದು ಶಾಂತಿ ಸಭೆಗಳಲ್ಲಿ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಸೂಚನೆ ನೀಡಲಾಗಿತ್ತು. ಕೆಲವರು ಸ್ವಯಂಪ್ರೇರಿತವಾಗಿ ಬಣ್ಣದಾಟ ಆಡುವುದಿಲ್ಲ ಎಂದು ಭರವಸೆ ನೀಡಿದ್ದರು. ನಾವು ಯಾರಿಗೂ ಬಣ್ಣ ಆಡದಂತೆ ಕಟ್ಟುನಿಟ್ಟಾಗಿ ಆದೇಶಿಸಿಲ್ಲ. ಅವರು ಅರಿತುಕೊಂಡು ಬಿಟ್ಟಿರುವುದು ಉತ್ತಮ ಬೆಳವಣಿಗೆ.| ಕೆ.ಜಿ. ದೇವರಾಜ್, ಎಸ್​ಪಿ ಹಾವೇರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net