

ಬೆಂಗಳೂರು: ರಾಜ್ಯದಲ್ಲಿ ವಲಸಿಗರು ತಾವಾಗಿಯೇ ಕನ್ನಡ ಕಲಿತು ಮಾತನಾಡುವ ಹಾಗೂ ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಿಯನ್ನು ಗೌರವಿಸುವ ವಾತಾವರಣವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸಬೇಕು ಎಂದು ಕರ್ನಾಟಕ ವಿಕಾಸ ರಂಗ ಒತ್ತಾಯಿಸುತ್ತದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡಿಗರ ತೆರಿಗೆ ಹಣದಲ್ಲಿ ವಲಸಿಗರಿಗೆ ಕನ್ನಡ ಕಲಿಸಲು ಮುಂದಾಗಿರುವುದು ದುರದೃಷ್ಟಕರ. ಬೇರೆ ರಾಜ್ಯಗಳಲ್ಲಿ ಆಯಾ ಪ್ರದೇಶದ ಭಾಷೆಯನ್ನು ಕಲಿಸಲು ಯಾವ ಸರ್ಕಾರಗಳು ಮುಂದಾಗಿರುವ ಉದಾಹರಣೆಗಳಿಲ್ಲ. ಅಲ್ಲಿನ ವಾತಾವರಣವೇ ಆ ರಾಜ್ಯದ ಭಾಷೆಯನ್ನು ವಲಸಿಗರು ಕಲಿಯುವಂತೆ ಮಾಡುತ್ತದೆ. ಅಂತಹುದೇ ವಾತಾವರಣ ರಾಜ್ಯದಲ್ಲಿ ನಿರ್ಮಾಣವಾಗಬೇಕು. ವಲಸಿಗರು ತಾವಾಗಿಯೇ ಕನ್ನಡ ಕಲಿಯುವಂತೆ ಪ್ರಾಧಿಕಾರ ಕ್ರಮ ವಹಿಸಬೇಕು ಎಂದು ಕರ್ನಾಟಕ ವಿಕಾಸ ರಂಗದ ಅಧ್ಯಕ್ಷ ವ.ಚ. ಚನ್ನೇಗೌಡ ಒತ್ತಾಯಿಸಿದ್ದಾರೆ.