

ಬೆಂಗಳೂರು: ಕರ್ನಾಟಕ ಸರ್ಕಾರ ವೈದ್ಯಕೀಯ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಗ್ರಾಮೀಣ ಸೇವೆ ನಿಯಮಗಳಲ್ಲಿ ಮಹತ್ವದ ಬದಲಾವಣೆ ತಂದಿದ್ದು, ಈ ಕುರಿತು ಕರ್ನಾಟಕ ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟಣೆಯನ್ನು ಹೊರಡಿಸಿದೆ.
ಕಡ್ಡಾಯ ಗ್ರಾಮೀಣ ಸೇವೆಗೆ ವೈದ್ಯಕೀಯ ಕೋರ್ಸ್ ಪೂರೈಸಿದವರನ್ನು ಸರ್ಕಾರಕ್ಕೆ ಅಗತ್ಯವಿದಷ್ಟು ಹುದ್ದೆಯನ್ನು ಮೆರಿಟ್ ಆಧಾರದ ಮೇಲೆ ಕೌನ್ಸಿಲಿಂಗ್ ಮೂಲಕ ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ. ಈ ಬಗ್ಗೆ ಜೂ. 11ರಂದು ನಿಯಮಾವಳಿಗಳೊಂದಿಗೆ ಗೆಜೆಟ್ ಅಧಿಸೂಚನೆ ಪ್ರಕಟಿಸಿದೆ. ಈ ಸಂಬಂಧ ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಿದೆ.
ಈವರೆಗೆ ವೈದ್ಯಕೀಯ ಪದವಿ ಪೂರೈಸಿದ ಎಲ್ಲರೂ ಕಡ್ಡಾಯವಾಗಿ ಒಂದು ವರ್ಷದ ಸರ್ಕಾರಿ ಗ್ರಾಮೀಣ ಸೇವೆ ಸಲ್ಲಿಸಬೇಕಾಗಿತ್ತು. ಅಷ್ಟೂ ಮಂದಿಗೆ ಸರ್ಕಾರ ಸೇವೆಗೆ ಅವಕಾಶ ಮಾಡಿಕೊಡಲು ಹುದ್ದೆಗಳು ಇಲ್ಲದ ಕಾರಣ ಖಾಲಿ ಹುದ್ದೆಗಳಿಗೆ ಮಾತ್ರ ಅನ್ವಯವಾಗುವಂತೆ ತಿದ್ದುಪಡಿ ಮಾಡಿತ್ತು.
ಕರ್ನಾಟಕ ವೈದ್ಯಕೀಯ ಕೋರ್ಸುಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ ಕಾಯಿದೆಯಲ್ಲಿ (2012) ’ಒಂದು ವರ್ಷದ ಕಡ್ಡಾಯ ಗ್ರಾಮೀಣ ಸೇವೆಗೆ’ ಎಂಬ ಪದಗಳ ಮೊದಲು ’ರಾಜ್ಯ ಸರ್ಕಾರವು ನಿರ್ದಿಷ್ಟಪಡಿಸಲಾದಂತೆ ಅಸ್ತಿತ್ವದಲ್ಲಿರುವ ಖಾಲಿಹುದ್ದೆಗಳಲ್ಲಿ’ ಎಂಬ ಪದಗಳನ್ನು ಸೇರಿಸಿತ್ತು.
ಈ ಪ್ರಕಾರ ಎಂಬಿಬಿಎಸ್, ಡಿಪ್ಲೊಮಾ, ಎಂಸ್/ಎಂಡಿ, ಸೂಪರ್ ಸ್ಪೆಷಾಲಿಟಿ ಕೋರ್ಸ್ ಪೂರೈಸಿದ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಅಗತ್ಯವಿರುವಷ್ಟು ಮಂದಿಯನ್ನು ಮಾತ್ರ ಒಂದು ವರ್ಷದ ಕಡ್ಡಾಯ ಸೇವೆಗೆ ನೇಮಕ ಮಾಡಿಕೊಳ್ಳಲು ಹಾಗೂ ಈ ವೇಳೆ ಪಾಲಿಸಬೇಕಾದ ನಿಯಮಗಳನ್ನು ಪ್ರಕಟಿಸಿದೆ.
ಸ್ಥಳ ನಿಯೋಜನೆ, ವಿನಾಯಿತಿ ನೀಡುವ ವೇಳೆ ಅರ್ಜಿದಾರರ ಪತಿ, ಪತ್ನಿ, ಮಕ್ಕಳು ಅಥವಾ ಅವಲಂಬಿತರು ತೀವ್ರ ಅನಾರೋಗ್ಯ ಸಮಸ್ಯೆ ಹೊಂದಿದ್ದರೆ, ಅಭ್ಯರ್ಥಿ ಶೇ.40 ಹೆಚ್ಚು ಅಂಗ ವೈಕಲ್ಯ ಹೊಂದಿದ್ದರೆ, ವಿಧವೆಯಾಗಿದ್ದರೆ, ಸಿಂಗಲ್ ಪೇರೆಂಟ್ ಆಗಿದ್ದರೆ ಆದ್ಯತೆ ನೀಡಲು ತಿಳಿಸಲಾಗಿದೆ.
30 ಲಕ್ಷ ರು.ವರೆಗೆ ದಂಡ: ಕಂಪ್ಯೂಟರ್ ಆಧಾರದ ಮೇಲೆ ಕೌನ್ಸೆಲಿಂಗ್ ನಡೆಯಲಿದ್ದು, ಸಮಯ, ಸ್ಥಳ ಹಾಗೂ ದಿನಾಂಕವನ್ನು ಪ್ರಾಧಿಕಾರ ತಿಳಿಸಲಿದೆ. ಮೆರಿಟ್ ಇದ್ದರೂ ಉದ್ದೇಶಪೂರ್ವಕವಾಗಿ ಕಡ್ಡಾಯ ಸೇವೆಯಿಂದ ತಪ್ಪಿಸಿಕೊಂಡರೆ ಅಥವಾ ಕೌನ್ಸಿಲಿಂಗ್‌ಗೆ ಹಾಜರಾಗದೆ ನಿರ್ಲಕ್ಷ್ಯ ಮಾಡಿ ನಿಯಮ ಉಲ್ಲಂಘಿಸಿದರೆ ಎಂಬಿಬಿಎಸ್ ಅಭ್ಯರ್ಥಿಗಳು 15 ಲಕ್ಷ ರು., ಡಿಪ್ಲೊಮಾ ಅಭ್ಯರ್ಥಿಗಳು 20 ಲಕ್ಷ, ಎಂಡಿ/ಎಂಎಸ್ ಅಭ್ಯರ್ಥಿಗಳು 25 ಲಕ್ಷ, ಸೂಪರ್ ಸ್ಪೆಷಾಲಿಸಿ ಕೋರ್ಸ್‌ನ ಅಭ್ಯರ್ಥಿಗಳು 30 ಲಕ್ಷ ರು. ದಂಡ ಪಾವತಿಸಬೇಕು ಎಂದು ಹೇಳಲಾಗಿದೆ.