

ತಿ.ನರಸೀಪುರ: ರಾಜ್ಯದಲ್ಲಿ ಸಹಕಾರಿ ತತ್ವದಡಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟಗಳು ವಾರ್ಷಿಕವಾಗಿ 1 ಲಕ್ಷ ಕೋಟಿ ರೂ.ವಹಿವಾಟು ನಡೆಸುತ್ತಿವೆ ಎಂದು ಮೈಮುಲ್ ನಿರ್ದೇಶಕ ಸಿ.ಓಂಪ್ರಕಾಶ್ ಹೇಳಿದರು.
ತಾಲೂಕಿನ ಕುಳ್ಳನಕೊಪ್ಪಲು ಗ್ರಾಮದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಶನಿವಾರ ನಡೆದ 2023-24 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಹಾಲಿನ ಉತ್ಪಾದನೆ ಮತ್ತು ಉತ್ಪನ್ನಗಳ ಮಾರಾಟದ ವಹಿವಾಟಿನಲ್ಲಿ ಗುಜರಾತ್ ನಂತರ ರಾಜ್ಯ ಎರಡನೇ ಸ್ಥಾನದಲ್ಲಿದೆ. ಬಹುತೇಕ ರೈತರು ವ್ಯವಸಾಯದ ಜತೆಗೆ ಉಪಕಸುಬನ್ನಾಗಿ ಹೈನುಗಾರಿಕೆಯನ್ನೇ ಮಾಡಿಕೊಂಡಿದ್ದಾರೆ. 40ರ ಸಂಖ್ಯೆಯಲ್ಲಿದ್ದ ಸಹಕಾರ ಸಂಘಗಳ ಸಂಖ್ಯೆ ಇಂದು 147ಕ್ಕೆ ಏರಿಕೆಯಾಗಿದೆ. ತಾಲೂಕಿನಿಂದ ಮೈಸೂರು ಹಾಲು ಒಕ್ಕೂಟಕ್ಕೆ 1 ಲಕ್ಷ ಲೀಟರ್ ಹಾಲು ಸರಬರಾಜಾಗುತ್ತಿದೆ. ಜಿಲ್ಲೆಯ ವ್ಯಾಪ್ತಿಯಲ್ಲಿ ವಾರಕ್ಕೆ 22 ಕೋಟಿ ರೂ.ಹಣ ಹಾಲು ಸರಬರಾಜು ಮಾಡುವ ರೈತರಿಗೆ ನೀಡಬೇಕಿದೆ ಎಂದು ತಿಳಿಸಿದರು.
ಮೈಮುಲ್ ಅಧ್ಯಕ್ಷ ಆರ್.ಚೆಲುವರಾಜು ಮಾತನಾಡಿ, ಒಕ್ಕೂಟಕ್ಕೆ ಪ್ರತಿ ನಿತ್ಯ 9 ಲಕ್ಷ ಲೀಟರ್ ಹಾಲು ಸರಬರಾಜಾಗುತ್ತಿದೆ. ಅದರಲ್ಲಿ 3 ಲಕ್ಷ ಲೀಟರ್ ಹಾಲು ಮಾರಾಟವಾಗದೆ ಉಳಿಯುತ್ತಿದೆ. ಉಳಿದ ಹಾಲಿನಿಂದ ಪೌಡರ್ ಮಾಡಿ ಕ್ಷೀರಭಾಗ್ಯ ಯೋಜನೆ, ಹೊರರಾಜ್ಯ, ಹೊರದೇಶಗಳಿಗೂ ಮಾರಾಟ ಮಾಡುತ್ತಿದ್ದೇವೆ. ಹಾಗಾಗಿ ಹಾಲು ಉತ್ಪಾದಕರು ಒಕ್ಕೂಟದ ಮತ್ತಷ್ಟು ಬೆಳವಣಿಗೆಯಾಗಬೇಕಾದರೆ ಸಂಘಗಳಿಗೆ ಗುಣ ಮಟ್ಟದ ಹಾಲು ಸರಬರಾಜು ಮಾಡಬೇಕು. ಆಗ ಮಾತ್ರ ಒಕ್ಕೂಟದ ಅಭಿವೃದ್ಧಿ ಸಾಧ್ಯ ಎಂದರು.
ಒಕ್ಕೂಟದ ಮಾರ್ಗ ವಿಸ್ತರಣಾಧಿಕಾರಿ ಆರ್.ಪ್ರಮೋದ್ ಅವರು ಸಂಘದ ವಾರ್ಷಿಕ ವರದಿ ಮಂಡಿಸಿ, ಸಂಘವು ಪ್ರಸಕ್ತ ಸಾಲಿನಲ್ಲಿ 2,11,654 ರೂ.ಗಳ ನಿವ್ವಳ ಲಾಭಗಳಿಸಿದೆ ಎಂದು ಮಾಹಿತಿ ನೀಡಿದರು.
ಮೈಮುಲ್ ಅಧ್ಯಕ್ಷ ಆರ್.ಚಲುವರಾಜು, ಸಿ.ಓಂಪ್ರಕಾಶ್, ನಿವೃತ್ತ ವ್ಯವಸ್ಥಾಪಕ ಡಾ.ಸಿ.ದಿವಾಕರ್, ಡಾ.ಕೆ.ಬಿ.ಶಿವಪ್ರಸಾದ್ ಅವರನ್ನು ಸನ್ಮಾನಿಸಲಾಯಿತು. ಅರಣ್ಯ ಇಲಾಖೆಯಿಂದ ಸಂಘದ ಸದಸ್ಯರಿಗೆ ಸಸಿಗಳನ್ನು ವಿತರಿಸಲಾಯಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಸಂಘದ ಅಧ್ಯಕ್ಷ ಬಿ.ತಿಮ್ಮೇಗೌಡ, ಉಪಾಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ಕೆ.ಸಿ.ಭವಾನಿ, ಪಶುಪಾಲನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಲಿಂಗರಾಜು, ವಲಯ ಅರಣ್ಯಾಧಿಕಾರಿ ರಾಜೇಶ್, ಆರ್ಥಿಕ ಸಾಕ್ಷರ ಸಲಹೆಗಾರ ಬಿ.ಜಯರಾಮು, ತಾಪಂ ಮಾಜಿ ಸದಸ್ಯ ರಾಮಲಿಂಗಯ್ಯ, ಗ್ರಾಪಂ ಮಾಜಿ ಅಧ್ಯಕ್ಷ ಪಿ.ಪುಟ್ಟಸ್ವಾಮಿ, ಸಂಘದ ನಿರ್ದೇಶಕರಾದ ಕೆ.ಪಿ.ರಂಗನಾಥ, ಕೆ.ಆರ್.ಶಿವರಾಮು, ಪುಟ್ಟಸ್ವಾಮಿ, ವೆಂಕಟೇಶ್, ಶ್ರೀಕಂಠೇಗೌಡ, ಭಾಗ್ಯಮ್ಮ, ಗ್ರಾಪಂ ಮಾಜಿ ಸದಸ್ಯ ಪುಟ್ಟಸ್ವಾಮಿ, ಷೇರುದಾರರು, ಹಾಲು ಉತ್ಪಾದಕರು ಇದ್ದರು.