

ಬೇಲೂರು: ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್‌ಶೆಟ್ಟಿ)ಬಣದ ಕಾರ್ಯಕರ್ತರು ಆಸ್ಪತ್ರೆ ಎದುರು ಸೋಮವಾರ ಪ್ರತಿಭಟಿಸಿ ಆಡಳಿತ ವೈದ್ಯಾಧಿಕಾರಿ ಡಾ.ಮಹೇಂದರ್‌ಗೆ ಮನವಿ ಸಲ್ಲಿಸಿದರು.
ಬಣದ ತಾಲೂಕು ಅಧ್ಯಕ್ಷ ವಿ.ಎಸ್.ಬೋಜೇಗೌಡ ಮಾತನಾಡಿ, ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಸ್ವಚ್ಛತೆ ಇಲ್ಲದ ಕಾರಣ ಸಾಂಕ್ರಾಮಿಕ ರೋಗಗಳು ಹರಡಲು ಕಾರಣವಾಗುತ್ತಿದೆ. ಕೆಲ ಸ್ವಚ್ಛತಾ, ಡಿ ದರ್ಜೆ ಸಿಬ್ಬಂದಿ ಆಸ್ಪತ್ರೆಗೆ ಬರುವ ರೋಗಿಗಳು, ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸಿ ಹಲ್ಲೆಗೂ ಮುಂದಾಗಿರುವ ಘಟನೆಗಳು ನಡೆದಿವೆ. ಆಸ್ಪತ್ರೆಯಲ್ಲೇ ರಕ್ತ ಪರೀಕ್ಷಾ ಕೇಂದ್ರವಿದ್ದರೂ ಖಾಸಗಿ ಕೇಂದ್ರಗಳಿಗೆ ವೈದ್ಯರು ಚೀಟಿ ಬರೆದು ಕಳುಹಿಸುತ್ತಾರೆ. ಜನರಿಕ್ ಔಷಧ ಕೇಂದ್ರ ಆಸ್ಪತ್ರೆ ಕಟ್ಟಡದಲ್ಲಿದ್ದರೂ ಖಾಸಗಿ ಮೆಡಿಕಲ್‌ಗಳಿಗೆ ಕಳುಹಿಸುತ್ತಾರೆ. ಇದರಿಂದ ಚಿಕಿತ್ಸೆಗೆಂದು ಬರುವ ಬಡ ರೋಗಿಗಳ ಪಾಡೇನು ಎಂದು ಪ್ರಶ್ನಿಸಿದರು.
ಆಸ್ಪತ್ರೆಯ ಹಾಸಿಗೆಗಳು ತುಂಬಾ ಕೊಳಕಾಗಿದ್ದು ರೋಗಿಗಳು ಮಲಗಲು ಹಿಂದೇಟು ಹಾಕುವಂತಾಗಿದೆ. ಹಣ ಸುಲಿಗೆ ಹಾಗೂ ಔಷಧ ಕಮಿಷನ್ ಪಡೆಯಲು ಕೆಲ ವೈದ್ಯರು ದಾರಿ ಮಾಡಿಕೊಂಡಿದ್ದಾರೆ. ಇಷ್ಟೆಲ್ಲ ಬೆಳವಣಿಗೆಗಳು ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯುತ್ತಿದ್ದರೂ ಶಾಸಕರು ಇತ್ತ ಗಮನ ಹರಿಸಿಲ್ಲ. ಮಧ್ಯಾಹ್ನದ ಸಮಯದಲ್ಲಿ ತುರ್ತು ಚಿಕಿತ್ಸೆಗೆ ಬಂದರೂ ಮುಖ್ಯದ್ವಾರ ಬಂದ್ ಮಾಡಿರುತ್ತಾರೆ. ಕೇಳಿದರೆ ಸ್ವಚ್ಛತೆ ನಡೆಯುತ್ತಿದೆ ಎಂದು ಹೇಳಿ ರೋಗಿಗಳನ್ನು ಕಾಯಿಸುತ್ತಾರೆ. ಇಷ್ಟೆಲ್ಲ ಸಮಸ್ಯೆ ಸರ್ಕಾರಿ ಆಸ್ಪತ್ರೆಯಲ್ಲಿದ್ದರೂ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಗಮನಹರಿಸಿಲ್ಲ. ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ತೀವ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಹೇಳಿದರು.
ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಮಾತನಾಡಿದ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಮಹೇಂದರ್, ಆಸ್ಪತ್ರೆಯಲ್ಲಿ ಸಣ್ಣಪುಟ್ಟ ಸಮಸ್ಯೆಗಳಿವೆ ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ಕರವೇ ತಾಲೂಕು ಉಪಾಧ್ಯಕ್ಷ ಜಯಪ್ರಕಾಶ್, ಕಾರ್ಯದರ್ಶಿ ಕಾರ್ತಿಕ್, ನಾಗರಾಧ್ಯಕ್ಷ ರಾಕೇಶ್, ಮುಖಂಡರಾದ ಅರುಣ್‌ಸಿಂಗ್, ರಾಘವೇಂದ್ರ ಹೊಳ್ಳ, ಗಣೇಶ್, ಹುಸೇನ್, ಕುಮಾರ್, ದೀಪು, ಮೋಹಿತ್ ಇತರರಿದ್ದರು.