

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಾಗರಿಕರಿಗೆ ತಡೆರಹಿತ, ಪಾರದರ್ಶಕ ಮತ್ತು ಸುಲಭ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು 2023ರ ಸೆ.5ರಲ್ಲಿ ಆರಂಭಿಸಿರುವ "ಕರ್ನಾಟಕ ಒನ್' ಮೊಬೈಲ್ ಆ್ಯಪ್ ಮೂಲಕ ಜನರಿಗೆ ಡಿಜಿಟಲ್ ಸೇವೆ ಒದಗಿಸುವಲ್ಲಿ ಯಶಸ್ವಿಯಾಗಿದೆ. ಈ ಆ್ಯಪ್ ಅನ್ನು ನಾಗರಿಕ ಸೇವೆಗಳ ಎಲೆಕ್ಟ್ರಾನಿಕ್ ವಿತರಣಾ ನಿರ್ದೇಶನಾಲಯ (ಇಡಿಸಿಎಸ್) ಅಭಿವೃದ್ಧಿಪಡಿಸಿ ನಿರ್ವಹಿಸುತ್ತಿದೆ.
ಈ ಆ್ಯಪ್ ಬಂದ ಮೇಲೆ ಸರ್ಕಾರಿ ಕಚೇರಿಗಳಿಗೆ ಹೆಚ್ಚು ಅಲೆದಾಡುವ ಅವಶ್ಯಕತೆ ಇಲ್ಲವಾಗಿದೆ. ನಾಗರಿಕರು ಒಂದೇ ಮೊಬೈಲ್ ಅಪ್ಲಿಕೇಶನ್ ಮೂಲಕ ತಮ್ಮ ಸೇವೆಗಳನ್ನು ಪೂರ್ಣಗೊಳಿಸಬಹುದಾಗಿದೆ. ಪ್ರಸ್ತುತ 1.43 ಲಕ್ಷಕ್ಕೂ ಹೆಚ್ಚು ಬಳಕೆದಾರರು ಅಪ್ಲಿಕೇಶನ್ ಮೂಲಕ ವಿವಿಧ ಸೇವೆಗಳನ್ನು ಬಳಸುತ್ತಿದ್ದಾರೆ. ಅಪ್ಲಿಕೇಶನ್ ಮೂಲಕ ವಿದ್ಯುತ್ ಬಿಲ್, ನೀರಿನ ಬಿಲ್, ಆಸ್ತಿ ತೆರಿಗೆ, ಸಂಚಾರ ದಂಡ ಪಾವತಿ, ಆರ್ಸಿ ಸೇವೆಗಳು, ಎಸ್ಎಸ್ಎಲ್ಸಿ/ದ್ವೀತಿಯ ಪಿಯುಸಿ ವಲಸೆ ಪ್ರಮಾಣಪತ್ರ ಹಾಗೂ ಮರುಮೌಲ್ಯಮಾಪನ ಅರ್ಜಿ ಸೇರಿದಂತೆ ಅನೇಕ ಸೇವೆಗಳು ಲಭ್ಯವಿದೆ. ಅಲ್ಲದೆ, ವಿಧಾನಸೌಧ ಸಂದರ್ಶಕರ ಪಾಸ್ಗೂ ನಾಗರಿಕರು ಮೊಬೈಲ್ನಲ್ಲೇ ಅರ್ಜಿ ಸಲ್ಲಿಸಬಹುದಾಗಿದೆ.
ಇತ್ತೀಚೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಎಸ್ಎಸ್ಎಲ್ಸಿ ಫೋಟೋಕಾಪಿ ಹಾಗೂ ಮರುಮೌಲ್ಯಮಾಪನ ಸೇವೆಯನ್ನು ಈ ಅಪ್ಲಿಕೇಶನ್ನಲ್ಲಿ ಪ್ರಾರಂಭಿಸಿದ್ದು, ಈಗಾಗಲೇ 50 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದಿದ್ದಾರೆ. ಶೀಘ್ರದಲ್ಲೇ ದ್ವೀತಿಯ ಪಿಯುಸಿ ಫೋಟೋಕಾಪಿ ಮತ್ತು ಮರುಮೌಲ್ಯಮಾಪನ ಸೇವೆಗಳು, ಕೆಎಸ್ಆರ್ಟಿಸಿ ಆನ್ಲೈನ್ ಟಿಕೆಟ್ ಬುಕಿಂಗ್, ಓಸಿಟಿ ಫೈಬರ್ ಬಿಲ್ ಪಾವತಿ ಹಾಗೂ ಡಿಜಿಟಲ್ ಡಾಕ್ಯುಮೆಂಟ್ ಎಕ್ಸಿಕ್ಯೂಷನ್ ಮುಂತಾದ ಹೊಸ ಸೇವೆಗಳೂ ಸೇರ್ಪಡೆಗೊಳ್ಳಲಿವೆ.
ಅಪ್ಲಿಕೇಶನ್ನಲ್ಲಿ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮತ್ತು ಯುಪಿಐ ಸೇರಿದಂತೆ ಹಲವಾರು ಪಾವತಿ ವಿಧಾನಗಳ ಸೌಲಭ್ಯವಿದ್ದು, ಗ್ರಾಮೀಣ ಹಾಗೂ ನಗರ ಪ್ರದೇಶದ ಎಲ್ಲ ನಾಗರಿಕರಿಗೂ ಇದು ಅನುಕೂಲಕರವಾಗಿದೆ.