

ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿಯು 2025-26ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟಿಸಿದೆ. ಜೀವಮಾನ ಸಾಧನೆ ಗೌರವ ಪ್ರಶಸ್ತಿಗೆ ಕಲಾ ನಿರ್ದೇಶಕ ಬಿ. ಶಶಿಧರ ಅಡಪ ಆಯ್ಕೆಯಾಗಿದ್ದಾರೆ.
ಕನ್ನಡ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ, 34 ಪ್ರಶಸ್ತಿ ಹಾಗೂ ಏಳು ವಿವಿಧ ದತ್ತಿ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ ಮಾಡಿದರು.
ವಾರ್ಷಿಕ ಪ್ರಶಸ್ತಿಗೆ 25 ಮಂದಿ ಭಾಜನರಾಗಿದ್ದಾರೆ. 2024-25ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದವರಲ್ಲಿ ನಟ ಪ್ರಕಾಶ್‌ರಾಜ್ ಪ್ರಶಸ್ತಿ ನಿರಾಕರಿಸಿದ್ದರಿಂದ ಬಾಕಿ ಉಳಿದಿದ್ದ ಆ ಪ್ರಶಸ್ತಿಗೆ ಕಲಾವಿದ ಶಂಕರ್‌ಭಟ್ (ಉತ್ತರ ಕನ್ನಡ) ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ಜೀವಮಾನ ಸಾಧನೆ ಪ್ರಶಸ್ತಿಯು 50 ಸಾವಿರ ನಗದು ಹಾಗೂ ನಟರಾಜ ವಿಗ್ರಹ ಒಳಗೊಂಡಿದೆ. ವಾರ್ಷಿಕ ಪ್ರಶಸ್ತಿಯು ತಲಾ 25 ಸಾವಿರ ನಗದು ಹಾಗೂ ನಟರಾಜ ವಿಗ್ರಹ ಹೊಂದಿದೆ. ದತ್ತಿ ಪ್ರಶಸ್ತಿಗಳ ನಗದು ಬಹುಮಾನವನ್ನು ಈ ವರ್ಷದಿಂದ 5 ಸಾವಿರ ರೂ. ಹೆಚ್ಚಿಸಿದ್ದು, ಪ್ರಶಸ್ತಿಗಳು ತಲಾ 15 ಸಾವಿರ ನಗದು ಒಳಗೊಂಡಿವೆ. ಸೆಪ್ಟೆಂಬರ್‌ನಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗುವುದು. ಸ್ಥಳ ಹಾಗೂ ದಿನಾಂಕ ನಿಗದಿಯಾಗಿಲ್ಲ ಎಂದು ತಿಳಿಸಿದರು.
ಅಕಾಡೆಮಿ ರಿಜಿಸ್ಟ್ರಾರ್ ಎನ್.ನಮ್ರತಾ, ಸದಸ್ಯರಾದ ಎ.ಎಸ್.ಚಂದ್ರಶೇಖರ್ (ಜಿಪಿಒ ಚಂದ್ರು), ರವೀಂದ್ರನಾಥ ಸಿರಿವರ ಹಾಗೂ ಟಿ.ಎಚ್. ಲವಕುಮಾರ ಇದ್ದರು.
ವಾರ್ಷಿಕ ಪ್ರಶಸ್ತಿ ಪುರಸ್ಕೃತರು:
ಜಿ.ಎನ್.ಮೋಹನ್ (ಬೆಂಗಳೂರು), ಮಾಲತೇಶ ಬಡಿಗೇರ (ಗದಗ), ಟಿ.ರಘು (ಬೆಂಗಳೂರು), ವೆಂಕಟಾಚಲ (ಬೆಂಗಳೂರು), ಮುರ್ತುಜಸಾಬ ಘಟ್ಟಿಗನೂರ (ಬಾಗಲಕೋಟೆ), ಎಂ.ಚೆನ್ನಕೇಶವಮೂರ್ತಿ (ಬೆಂಗಳೂರು), ಗೋಪಾಲ ಯಲ್ಲಪ್ಪ ಉಣಕಲ್ (ಹುಬ್ಬಳ್ಳಿ-ಧಾರವಾಡ), ಚಿಕ್ಕಪ್ಪಯ್ಯ (ತುಮಕೂರು), ದೇವರಾಜ ಹಲಗೇರಿ (ಕೊಪ್ಪಳ), ವೈ.ಎಸ್.ಸಿದ್ಧರಾಮೇಗೌಡ (ಬೆಂಗಳೂರು ದಕ್ಷಿಣ), ಆರ್.ಟಿ.ಅರುಣ್‌ಕುಮಾರ್ (ದಾವಣಗೆರೆ), ರೋಹಿಣಿ ರಘುನಂದನ್ (ಬೆಂಗಳೂರು), ರತ್ನಾ ಸಕಲೇಶಪುರ (ಹಾಸನ), ವಿ.ಎನ್.ಅಶ್ವಥ್ (ಬೆಂಗಳೂರು) ಶಿವಯ್ಯಸ್ವಾಮಿ ಬಿಬ್ಬಳ್ಳಿ (ಕಲಬುರಗಿ), ಕೆ.ಆರ್. ಪೂರ್ಣೇಂದ್ರಶೇಖರ್ (ಬೆಂಗಳೂರು), ಭೀಮನಗೌಡ ಬಿ.ಕಟಾವಿ (ಬೆಳಗಾವಿ), ಕೆ.ಮುರಳಿ (ಕೋಲಾರ), ಮುತ್ತುರಾಜ್ (ಬೆಂಗಳೂರು ಗ್ರಾಮಾಂತರ), ಮಲ್ಲೇಶ್ ಬಿ.ಕೋನಾಳ (ಯಾದಗಿರಿ), ಸುಗಂಧಿ ಉಮೇಶ್ ಕಲ್ಮಾಡಿ (ಉಡುಪಿ), ಮಹೇಶ ವಿ.ಪಾಟೀಲ (ಬೀದರ್), ಶಿವಪುತ್ರಪ್ಪ ಶಿವಸಿಂಪಿ (ಕೊಪ್ಪಳ), ಸದ್ಯೋಜಾತ ಶಾಸ್ತ್ರಿ ಹಿರೇಮಠ (ವಿಜಯನಗರ) ಹಾಗೂ ಎಸ್.ಆರ್.ಉದಯ್ (ಮೈಸೂರು) ಆಯ್ಕೆಯಾಗಿದ್ದಾರೆ.
ದತ್ತಿನಿಧಿಗೆ ಭಾಜನರಾದವರು:
ಎಚ್.ವಿ.ವೆಂಕಟಸುಬ್ಬಯ್ಯ ದತ್ತಿ ಪುರಸ್ಕಾರಕ್ಕೆ ಪಿ.ಎ.ಮಂಜಪ್ಪ (ಕೊಡಗು), ಬಿ.ಆರ್. ಅರಿಶಿಣಕೋಡಿ ದತ್ತಿ ಪುರಸ್ಕಾರಕ್ಕೆ ಕಿರಣ್ ರತ್ನಾಕರ ನಾಯ್ಕ (ಉತ್ತರ ಕನ್ನಡ), ಕೆ.ರಾಮಚಂದ್ರಯ್ಯ ದತ್ತಿ ಪುರಸ್ಕಾರಕ್ಕೆ ಸಿ.ವಿ.ಲೋಕೇಶ್ (ದೊಡ್ಡಬಳ್ಳಾಪುರ), ಶ್ರೀಮತಿ ಮಾಲತಿಶ್ರೀ ಮೈಸೂರು ದತ್ತಿ ಪುರಸ್ಕಾರಕ್ಕೆ ಎಚ್.ಪಿ.ಈಶ್ವರಾಚಾರಿ (ಮಂಡ್ಯ), ನಟರತ್ನ ಚಿಂದೋಡಿ ವೀರಪ್ಪನವರ ದತ್ತಿ ಪುರಸ್ಕಾರಕ್ಕೆ ದೊಡ್ಡಮನೆ ವೆಂಕಟೇಶ್ (ಬೆಂಗಳೂರು), ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿ ಪುರಸ್ಕಾರಕ್ಕೆ ಪಿ.ವಿ.ಕೃಷ್ಣಪ್ಪ (ಬೆಂಗಳೂರು) ಹಾಗೂ ಕಲ್ಚರ್ಡ್ ಕಮೆಡಿಯನ್ ಕೆ.ಹಿರಣ್ಣಯ್ಯ ದತ್ತಿ ಪುರಸ್ಕಾರಕ್ಕೆ ನಾಗೇಂದ್ರ ಪ್ರಸಾದ್ (ಬೆಂಗಳೂರು) ಆಯ್ಕೆಯಾಗಿದ್ದಾರೆ.