ರಂಗಭೂಮಿ ಪುನಶ್ಚೇತನಕ್ಕೆ ನಾಟಕ ಅಕಾಡೆಮಿಯಿಂದ ವಿವಿಧ ಯೋಜನೆ

kannada and culture dept
Published on

ಬೆಂಗಳೂರು: ಪ್ರೇಕ್ಷಕರ ಕೊರತೆ ಎದುರಿಸುತ್ತಿರುವ ರಂಗಭೂಮಿ ಪುನಶ್ಚೇತನಕ್ಕಾಗಿ ಕರ್ನಾಟಕ ನಾಟಕ ಅಕಾಡೆಮಿ ವಿವಿಧ ಯೋಜನೆಗಳನ್ನು ರೂಪಿಸಿದೆ. ಈ ದಿಸೆಯಲ್ಲಿ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ನಾಟಕೋತ್ಸವ, ಶಾಲಾ- ಕಾಲೇಜುಗಳಲ್ಲಿ ರಂಗಶಿಬಿರ, ನಾಟಕ ರಚನಾ ಸ್ಪರ್ಧೆ, ಸಂವಾದ, ವಿಚಾರಸಂಕಿರಣ ಹಾಗೂ ಹೊರರಾಜ್ಯಗಳಲ್ಲಿ ನಾಟಕೋತ್ಸವ ಆಯೋಜಿಸಲು ಸಜ್ಜಾಗುತ್ತಿದೆ.

ಡಿಜಿಟಲ್ ಕ್ರಾಂತಿ, ಸಾಮಾಜಿಕ ಜಾಲತಾಣ, ಸಿನಿಮಾ ಸೇರಿ ಜನರಿಗೆ ಎಲ್ಲವೂ ಅಂಗೈನಲ್ಲೇ ದೊರೆಯುತ್ತಿರುವುದರಿಂದ ರಂಗಮಂದಿರಗಳಿಗೆ ತೆರಳಿ ನಾಟಕ ವೀಕ್ಷಿಸಿ ಕಲಾವಿದರನ್ನು ಪ್ರೋತ್ಸಾಹಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಹಾಗಾಗಿ ಶಾಲಾ- ಕಾಲೇಜು ವಿದ್ಯಾರ್ಥಿಗಳಲ್ಲಿ ರಂಗಾಸಕ್ತಿ ಮೂಡಿಸುವ ಮೂಲಕ ರಂಗಭೂಮಿಯನ್ನು ಸಕ್ರಿಯಗೊಳಿಸಲಾಗುವುದು ಎಂದು ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ತಿಳಿಸಿದ್ದಾರೆ.

ರಾಜ್ಯದ ನಾಲ್ಕು ಕಂದಾಯ ವಿಭಾಗಗಳ ಜಿಲ್ಲಾ ಮುಖ್ಯ ಕೇಂದ್ರಗಳಲ್ಲಿ ಮೂರು ದಿನಗಳ ಕಾಲ ನಾಟಕೋತ್ಸವ ಆಯೋಜಿಸಲಾಗುವುದು. ಆ ವೇಳೆ ವಿಚಾರಸಂಕಿರಣ ನಡೆಸಲಾಗುವುದು. ಇದಲ್ಲದೆ ಸೆಪ್ಟೆಂಬರ್‌ನಿಂದ ಡಿಸೆಂಬರ್‌ವರೆಗೆ ದೆಹಲಿ, ಮುಂಬೈ, ಗೋವಾ ಮತ್ತು ಚೆನ್ನೈಗಳಲ್ಲಿ ಹೊರರಾಜ್ಯ ನಾಟಕೋತ್ಸವ ಆಯೋಜಿಸಲಾಗುವುದು. ಇದರ ಮೂಲಕ ಅಲ್ಲಿನ ರಂಗಭೂಮಿಯ ಕಾರ್ಯಚಟುವಟಿಕೆಗಳಿಗೆ ಉತ್ತೇಜನ ನೀಡಲಾಗುವುದು ಎಂದರು.

ನಶಿಸುತ್ತಿರುವ ಪೌರಾಣಿಕ ನಾಟಕಗಳನ್ನು ಪುನಶ್ಚೇತನಗೊಳಿಸಲು ಬೆಂಗಳೂರಿನಲ್ಲಿ ಮೂರು ದಿನಗಳ ನಾಟಕೋತ್ಸವ ಹಾಗೂ ರಾಜ್ಯಮಟ್ಟದ ಪೌರಾಣಿಕ ರಂಗತರಬೇತಿ ಶಿಬಿರ ನಡೆಸಲಾಗುವುದು. ಪ್ರತಿ ತಿಂಗಳ ಮೂರನೇ ಶನಿವಾರ ಬೆಂಗಳೂರಿನ ಕಲಾಗ್ರಾಮದಲ್ಲಿ ರಾಜ್ಯಾದ್ಯಂತ ಸಿದ್ಧವಾಗುವ ಹವ್ಯಾಸಿ ರಂಗಭೂಮಿ ಮತ್ತು ವೃತ್ತಿ ರಂಗಭೂಮಿಯ ನಾಟಕಗಳ ಪ್ರದರ್ಶನ ಆಯೋಜಿಸುವುದು. ಶಾಲಾ ಶಿಕ್ಷಕರಿಗೂ ವಿಜ್ಞಾನ ಮತ್ತು ಮಕ್ಕಳ ನಾಟಕಗಳ ತರಬೇತಿ ನೀಡುವುದು ಎಂದು ಮಾಹಿತಿ ನೀಡಿದರು.

ವಿದ್ಯಾರ್ಥಿಗಳಿಗೆ ರಂಗಶಿಬಿರ: ರಾಜ್ಯದ 16 ಜಿಲ್ಲೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ರಂಗ ಶಿಬಿರ ಆಯೋಜಿಸುವ ಮೂಲಕ ಪ್ರಸಿದ್ಧ ರಂಗತಜ್ಞರಿಂದ ತರಬೇತಿ ಕೊಡಿಸಲಾಗುವುದು. ಅಂತಿಮವಾಗಿ ಎಲ್ಲ ಜಿಲ್ಲೆಗಳ ಕಾಲೇಜು ವಿದ್ಯಾರ್ಥಿಗಳಿಗೆ ನಾಟಕ ಸ್ಪರ್ಧೆ ಆಯೋಜಿಸಿ ವಿಜೇತರಿಗೆ ಗರಿಷ್ಠ 50 ಸಾವಿರ ರೂ. ಬಹುಮಾನ ನೀಡಲಾಗುವುದು. ಇದಲ್ಲದೆ ಆಸಕ್ತರಿಗೆ ನಾಟಕ ರಚನಾ ತರಬೇತಿ ಹಾಗೂ ಸ್ಪರ್ಧೆ ಆಯೋಜಿಸಿ ಅವರಿಗೂ ಬಹುಮಾನ ನೀಡಲಾಗುವುದು ಎಂದು ನಾಗರಾಜಮೂರ್ತಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net