

ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘದ ಚುನಾವಣೆಗೆ ಅಖಾಡ ಸಜ್ಜಾಗುತ್ತಿದ್ದು, ಡಿಸೆಂಬರ್ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಈ ಸಂಬಂಧ ಸಂಘದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ಸದ್ಯದಲ್ಲೇ ಅರ್ಜಿ ಸಲ್ಲಿಕೆ, ಹಿಂಪಡೆಯುವಿಕೆ ಹಾಗೂ ಮತದಾನದ ದಿನಾಂಕ ಘೋಷಣೆಯಾಗಲಿದೆ.
ಈಗಾಗಲೇ ಚುನಾವಣಾಧಿಕಾರಿಯಾಗಿ ಸಾಮಾಜಿಕ ಕಾರ್ಯಕರ್ತೆ ಆರ್. ಪ್ರತಿಭಾ ಅವರು ನೇಮಕಗೊಂಡಿದ್ದು, ಸಂಘವು ಮತಪಟ್ಟಿ ಸಲ್ಲಿಕೆ ಮಾಡಿದ ನಂತರದಲ್ಲಿ ದಿನಾಂಕ ಘೋಷಣೆ ಆಗಲಿದೆ ಎಂದು ಸಂಘದ ಮೂಲಗಳು ತಿಳಿಸಿವೆ.
ಈ ಬಾರಿ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷೆ ಡಾ. ಎಚ್. ಎಲ್. ಪುಷ್ಪ ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷೆಗಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇವರಲ್ಲದೆ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಗೌರವ ಕಾರ್ಯದರ್ಶಿ ಹಾಗೂ ಲೇಖಕಿ ಪದ್ಮಿನಿ ನಾಗರಾಜು ಅವರ ಹೆಸರು ಕೇಳಿ ಬಂದಿದೆ. ಇನ್ನು ದೂರದರ್ಶನ ಚಂದನದ ಮಾಜಿ ನಿರ್ದೇಶಕಿ ಡಾ. ನಿರ್ಮಲಾ ಯಲಿಗಾರ್ ತಾವು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದಾಗಿ ಈಗಾಗಲೇ ೋಷಿಸಿದ್ದಾರೆ.
ಮಾಜಿ ಅಧ್ಯಕ್ಷೆಯರಲ್ಲಿ ನಿರಾಸಕ್ತಿ:
ಚುನಾವಣೆಗೆ ಇನ್ನೂ ಒಂದೂವರೆ ತಿಂಗಳು ಬಾಕಿ ಇದ್ದು, ಮಾಜಿ ಅಧ್ಯಕ್ಷೆಯರಾದ ಡಾ. ವಸುಂಧರಾ ಭೂಪತಿ, ವಸಮಾಲ ಸಂಪನ್ನ ಕುಮಾರ್ ಸ್ಪರ್ಧೆಯಿಂದ ಬಹುತೇಕ ಹಿಂದೆ ಸರಿದಿದ್ದಾರೆ. ತಮ್ಮ ನೆಚ್ಚಿನ ಅಭ್ಯರ್ಥಿಯನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ. ದಿನಾಂಕ ೋಷಣೆಯ ನಂತರದಲ್ಲಿ ಮತ್ತಷ್ಟು ಆಕಾಂಕ್ಷಿಗಳು ಸ್ಪರ್ಧೆಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಮರು ಸ್ಪರ್ಧೆಗೆ ಒತ್ತಡ:
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರ ಅವಧಿ 3 ವರ್ಷವಾಗಿದ್ದು, ಒಮ್ಮೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಗೆದ್ದವರು ಮತ್ತೊಂದು ಅವಧಿಗೆ ಸ್ಪರ್ಧಿಸುವ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಹಾಲಿ ಅಧ್ಯಕ್ಷೆ ಡಾ. ಎಚ್.ಎಲ್. ಪುಷ್ಪ ಅವರಿಗೆ ಮತ್ತೊಂದು ಬಾರಿಗೆ ಸ್ಪರ್ಧಿಸುವಂತೆ ಜಿಲ್ಲಾ ಮಟ್ಟದಿಂದ ಒತ್ತಡ ಹೆಚ್ಚಿದೆ ಎನ್ನಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಪುಷ್ಪ ಅವರು, ಸ್ಪರ್ಧೆ ಮಾಡುವಂತೆ ಒತ್ತಾಯ ಬರುತ್ತಿದೆ. ಇನ್ನೂ ಸಮಯ ಇದೆ. ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಹಿರಿಯರ ಸಲಹೆ ಪಡೆದು ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಅಧ್ಯಕ್ಷೆ ಸ್ಥಾನಕ್ಕೆ ಮೊದಲ ಬಾರಿ ಕಣಕ್ಕೆ:
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬಂದಿರುವ ಲೇಖಕಿ ಪದ್ಮಿನಿ ನಾಗರಾಜ್ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಿರ್ಧರಿಸಿದ್ದು, ಸಿದ್ಧತೆ ಸಹ ನಡೆಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಅಧ್ಯಕ್ಷೆ ಸ್ಥಾನಕ್ಕೆ ನಾನು ಸ್ಪರ್ಧೆಯಲ್ಲಿದ್ದೇನೆ. ಈ ಹಿಂದೆ ಡಾ. ವಸುಂಧರಾ ಭೂಪತಿ ಅವರ ಅವಧಿಯಲ್ಲಿ ಎರಡು ಕಾರ್ಯಕಾಯಿ ಸಮಿತಿಯಲ್ಲಿ ಇದ್ದೆ. ಆದರೆ ಸಂಘದ ಯಾವುದೇ ಹುದ್ದೆಯಲ್ಲಿ ಕಾರ್ಯನಿರ್ವಹಿಸಿಲ್ಲ. ಇದೀಗ ಅಧ್ಯಕ್ಷೆ ಸ್ಥಾನಕ್ಕೆ ಸ್ಪರ್ಧಿಸುತ್ತಿರುವುದು ಮೊದಲ ಪ್ರಯತ್ನವಾಗಿದೆ ಎಂದು ಹೇಳಿದರು.
ದೂರದರ್ಶನ ಚಂದನದ ಮಾಜಿ ನಿರ್ದೇಶಕಿ ಡಾ. ನಿರ್ಮಲಾ ಯಲಿಗಾರ್ ಅವರು, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದು, ತಮಗೆ ಸಹಕಾರ ನೀಡಬೇಕು ಎಂದು ಈಗಾಗಲೇ ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಸಂಬಂಧ ಶೀಘ್ರದಲ್ಲೇ ಹಿರಿಯ ಸಮಾಲೋಚಕರ ಸಭೆ ಕರೆಯುವುದಾಗಿಯೂ ತಿಳಿಸಿದ್ದಾರೆ.
1500 ಮತದಾರರು:
ಕಳೆದ ಚುನಾವಣೆಯಲ್ಲಿ 1,330 ಸದಸ್ಯೆಯರಿದ್ದಾರೆ. ಈಗ ಸದಸ್ಯರ ಸಂಖ್ಯೆ ಹೆಚ್ಚಿದ್ದು, ಸಂಘದಲ್ಲಿ ಒಟ್ಟಾರೆ ಮತದಾರರ ಸಂಖ್ಯೆ 1,500 ದಾಟುವ ನಿರೀಕ್ಷೆ ಇದೆ. ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುತ್ತಿದೆ. ಅಧ್ಯಕ್ಷೆ ಸ್ಥಾನಕ್ಕೆ ಸ್ಪರ್ಧಿಸುವವರು ಬೆಂಗಳೂರಿನಲ್ಲಿ ನೆಲೆಸಿರಬೇಕು ಎಂಬುದು ಸಂಘದ ಬೈಲಾದಲ್ಲಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ಲೇಖಕಿಯರು ಮಾತ್ರವೇ ಅಧ್ಯಕ್ಷೆ ಸ್ಥಾನಕ್ಕೆ ಸ್ಪರ್ಧಿಸಬಹುದಾಗಿದೆ.