

ತುಮಕೂರು: ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪ ಲೋಕಾಯುಕ್ತ ಬಾಕಿ ವಿಚಾರಣೆಗಳ ಹಾಗೂ ಪ್ರಕರಣ ವಿಲೇವಾರಿ ಸಭೆಯಲ್ಲಿ ಇಡೀ ಜಿಲ್ಲಾಡಳಿತ ಭಾಗವಹಿಸಿದ್ದರಿಂದ ರಾಜ್ಯ ವಿಧಾನ ಮಂಡಲದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಲ್ಯಾಣ ಸಮಿತಿ ಸಭೆಯನ್ನು ಅಧಿಕಾರಿಗಳ ಅಲಭ್ಯತೆ ಕಾರಣ ಮೊಟಕುಗೊಳಿಸಲಾಯಿತು. ವಿಧಾನಮಂಡಲದ ಸಮಿತಿಗೆ ಗೌರವ, ಬೆಲೆ ಇಲ್ಲವೇ ಎಂದು ಸಮಿತಿ ಅಧ್ಯಕ್ಷ ಪಿ.ಎಂ. ನರೇಂದ್ರ ಸ್ವಾಮಿ ಅಸಮಾಧಾನ ಹೊರಹಾಕಿದರು.
ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಅಭಿವೃದ್ಧಿಗಾಗಿ ಕೈಗೊಳ್ಳಲಾದ ಕಾರ್ಯಕ್ರಮಗಳ ಅನುಷ್ಠಾನ ಹಾಗೂ ಇನ್ನಿತರೆ ವಿಷಯಗಳ ಕುರಿತು ಪ್ರಗತಿ ಪರಿಶೀಲನೆ ನಡೆಸುವ ಸಂಬಂಧ ಶನಿವಾರ ವಿಧಾನ ಮಂಡಲದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಲ್ಯಾಣ ಸಮಿತಿ ಸಭೆ ಮಧ್ಯಾಹ್ನ ನಿಗದಿಯಾಗಿದ್ದು ಸಭೆ ಆರಂಭದಲ್ಲಿ ಜಿಪಂ ಇಲಾಖೆಗಳ ಪರಿಶೀಲನೆ ಮುಂದಾದಾಗ ಸಿಇಒ ರಜೆಮೇಲೆ ತೆರಳಿದ್ದ ಕಾರಣ ಗೈರಾಗಿದ್ದರು. ಈ ವೇಳೆ ಜಿಲ್ಲಾಧಿಕಾರಿ ಶುಭಕಲ್ಯಾಣ್ರನ್ನು ಪ್ರಶ್ನಿಸಿದ ನರೇಂದ್ರ ಸ್ವಾಮಿ, ಅಧಿಕಾರಿಗಳು ಯಾರೊಬ್ಬರು ಇಲ್ಲ. ಸಭೆ ನಡೆಸುವುದಾದರು ಹೇಗೆ? ಬೆಂಗಳೂರಿನಲ್ಲಿ ಮುಂದಿನ ಸಭೆ ತೆಗೆದುಕೊಳ್ಳುವುದಾಗಿ ಹೇಳಿ ಸಿಟ್ಟಿನಿಂದಲೇ ತೆರಳಿದರು.
ಚಿತ್ರದುರ್ಗ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆ ಮುಗಿಸಿ ತುಮಕೂರು ಬರುವ ಹೊತ್ತಿಗೆ ಸ್ವಲ್ಪ ತಡವಾಗಿತ್ತಾದರೂ ಜಿಲ್ಲೆಯಲ್ಲಿ ಉಪಲೋಕಾಯುಕ್ತರು ಸಾರ್ವಜನಿಕ ಕುಂದು ಕೊರತೆಗಳನ್ನು ಆಲಿಸುವ ಹಾಗೂ ಹಳೆಯ ಪ್ರಕರಣಗಳ ವಿಲೇವಾರಿ ಸಂಬಂಧಿಸಿದಂತೆ 2 ದಿನಗಳಿಂದ ದಿನವಿಡೀ ಕಾರ್ಯಕ್ರಮ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಅಧಿಕಾರಿಗಳು ಅಲ್ಲಿಗೆ ತೆರಳಿದ್ದರು. ಆದರೆ, ವಿಧಾನಮಂಡಲದ ಸಮಿತಿ ಸಭೆಯಲ್ಲಿ ಯಾವೊಬ್ಬ ಅಧಿಕಾರಿಗಳು ಬಾರದೆ ಇರುವುದರಿಂದ ಸಭೆಯನ್ನು ಮುಂದೂಡುವುದು ಅನಿವಾರ್ಯವಾಗಿತ್ತು.
ಸಭೆಯಲ್ಲಿ ಸಮಿತಿ ಸದಸ್ಯರಾದ ಡಾ.ಎಂ.ಚಂದ್ರಪ್ಪ, ಕೆ.ಸಿ.ವೀರೇಂದ್ರ ಪಪ್ಪಿ, ಬಿ.ದೇವೇಂದ್ರಪ್ಪ, ಕೃಷ್ಣಾನಾಯ್ಕ, ಹೇಮಲತಾ ನಾಯಕ, ಆರ್.ರಾಜೇಂದ್ರ ರಾಜಣ್ಣ, ಐಹೊಳೆ ದುಯೋರ್ಧನ ಮಹಲಿಂಗಪ್ಪ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಮಹಾನಗರಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜ, ಅಪರ ಜಿಲ್ಲಾಧಿಕಾರಿ ಡಾ.ಎನ್. ತಿಪ್ಪೇಸ್ವಾಮಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.