ಒರಟು ಭಾಷೆಯ ಮನವಿಗೆ ಬೇಸರ: ಕೆಲ ವಕೀಲರ ನಡೆಗೆ ಸಿಜೆ ಅಸಮಾಧಾನ

High curt 14 May 20
Published on

ಬೆಂಗಳೂರು: ಕರೊನಾದಂತಹ ಕ್ಲಿಷ್ಟ ಪರಿಸ್ಥಿತಿಯಲ್ಲೂ ಹೈಕೋರ್ಟ್ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದೆ. ಆದರೆ, ಕೆಲ ವಕೀಲರು ಹಾಗೂ ಕಕ್ಷಿದಾರರು ತುರ್ತು ಅಗತ್ಯವಿಲ್ಲದ ಅರ್ಜಿಗಳನ್ನೂ ವಿಚಾರಣೆಗೆ ನಿಗದಿಪಡಿಸಲು ಕೋರಿ ಇ-ಮೇಲ್ ಮಾಡುತ್ತಿರುವುದಲ್ಲದೆ, ತೀರಾ ಒರಟು ಭಾಷೆ ಬಳಸುತ್ತಿದ್ದಾರೆ ಎಂದು ಸಿಜೆ ಎ.ಎಸ್. ಓಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ಮುಂದೆ, ತುರ್ತು ವಿಚಾರಣೆ ಅಗತ್ಯವಿಲ್ಲ ಎಂದು ರಿಜಿಸ್ಟ್ರಿ ಪ್ರತಿಕ್ರಿಯಿಸಿದ ಬಳಿಕವೂ ಪದೇಪದೆ ಇ-ಮೇಲ್ ಕಳುಹಿಸುವವರರಿಗೆ ಒಂದು ಲಕ್ಷ ರೂ. ದಂಡ ವಿಧಿಸಿ ಅರ್ಜಿಯನ್ನು ವಿಚಾರಣೆಗೆ ನಿಗದಿಪಡಿಸಲಾಗುವುದು. ದಂಡದ ಮೊತ್ತವನ್ನು ಕೋವಿಡ್-19 ಪರಿಹಾರ ನಿಧಿಗೆ ಪಾವತಿಸುವಂತೆ ಆದೇಶಿಸಬೇಕಾಗುತ್ತದೆ ಎಂದು ಮೌಖಿಕ ಎಚ್ಚರಿಕೆ ನೀಡಿದರು.

ವಕೀಲರೊಬ್ಬರು ಪ್ರಕರಣದ ತುರ್ತು ವಿಚಾರಣೆ ನಡೆಸುವಂತೆ ಕೋರಿ ರಿಜಿಸ್ಟ್ರಿಗೆ ಕಳುಹಿಸಿದ್ದ ಇ-ಮೇಲ್​ನಲ್ಲಿ ಒರಟು ಭಾಷೆ ಬಳಕೆ ಮಾಡಿದ್ದರು. ಮತ್ತೊಂದು ಪ್ರಕರಣದಲ್ಲಿ ಕಾನೂನು ವಿದ್ಯಾರ್ಥಿಯೊಬ್ಬರು ಅಕೇಷಿಯಾ ಮರಗಳನ್ನು ನೆಡುವುದರಿಂದ ಪರಿಸರಕ್ಕೆ ಹಾನಿಯಾಗುತ್ತಿದೆ ಎಂದು ಆಕ್ಷೇಪಿಸಿ ಪಿಐಎಲ್ ಸಲ್ಲಿಸಿದ್ದರು. ಅವರನ್ನು ವಿಡಿಯೋ ಕಾನ್ಪರೆನ್ಸ್ ಮೂಲಕ ವಿಚಾರಣೆಗೆ ಹಾಜರುಪಡಿಸಿಕೊಂಡ ಸಿಜೆ ನೇತೃತ್ವದ ವಿಭಾಗೀಯ ಪೀಠ, ತರಾಟೆಗೆ ತೆಗೆದುಕೊಂಡಿತು.

ದೇಶದ ಬೇರೆ ಯಾವ ಕೋರ್ಟ್​ಗಳೂ ಕಾರ್ಯ ನಿರ್ವಹಿಸುತ್ತಿಲ್ಲ. ಕ್ಲಿಷ್ಟಕರ ಸನ್ನಿವೇಶದ ನಡುವೆಯೂ ರಿಜಿಸ್ಟ್ರಿ ಕೆಲಸ ಮಾಡುತ್ತಿದೆ. ರಾಜ್ಯಾದ್ಯಂತ 36 ನ್ಯಾಯಾಂಗ ಅಧಿಕಾರಿಗಳು ಕ್ವಾರಂಟೈನ್​ಗೆ ಒಳಪಟ್ಟಿದ್ದಾರೆ. ಮಂಡ್ಯ ಜಿಲ್ಲೆಯೊಂದರಲ್ಲೇ ಕೋರ್ಟ್​ನ 12 ಸಿಬ್ಬಂದಿಗೆ ಕರೊನಾ ಸೋಂಕು ದೃಢಪಟ್ಟಿದೆ. ಇದನ್ನು ಕೆಲವರು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿತು.

ಇ-ಮೇಲ್ ವ್ಯವಸ್ಥೆ ಇದೆ ಎನ್ನುವ ಕಾರಣಕ್ಕೆ ತುರ್ತು ಇಲ್ಲದ ಅರ್ಜಿಗಳನ್ನು ವಿಚಾರಣೆಗೆ ನಿಗದಿಪಡಿಸಲು ಕೋರಿ ರಿಜಿಸ್ಟ್ರಿಗೆ ಕೆಲ ವಕೀಲರು ಹಾಗೂ ಕಕ್ಷಿದಾರರು ಇ-ಮೇಲ್ ಕಳುಹಿಸುತ್ತಿದ್ದಾರೆ. ಒಮ್ಮೆ ಪ್ರಕರಣದ ತುರ್ತು ವಿಚಾರಣೆ ಅಗತ್ಯವಿಲ್ಲ ಎಂದು ರಿಜಿಸ್ಟ್ರಿ ಕಡೆಯಿಂದ ಪ್ರತಿಕ್ರಿಯೆ ಬಂದ ನಂತರವೂ ಪದೇಪದೆ ಇ-ಮೇಲ್ ಕಳುಹಿಸಲಾಗುತ್ತಿದೆ. ಅರ್ಜಿ ವಿಚಾರಣೆಗೆ ನಿಗದಿಪಡಿಸದ ಕಾರಣಕ್ಕೆ ಒರಟು ಭಾಷೆ ಬಳಕೆ ಮಾಡುತ್ತಿದ್ದಾರೆ. ಕೋರ್ಟ್ ಕಾರ್ಯನಿರ್ವಹಣೆ ಕುರಿತು ಈಗಾಗಲೆ ಎಸ್​ಒಪಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಹೀಗಿದ್ದರೂ ಈ ರೀತಿ ಮೇಲ್ ಕಳುಹಿಸಿ ಒತ್ತಾಯಿಸಲಾಗುತ್ತಿದೆ. ಕೆಲವರಂತೂ ನೇರವಾಗಿ ಮುಖ್ಯ ನ್ಯಾಯಮೂರ್ತಿಗಳ ಇ-ಮೇಲ್ ವಿಳಾಸಕ್ಕೇ ಮನವಿ ಕಳುಹಿಸುತ್ತಿದ್ದಾರೆ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net