

ದಿಗ್ವಿಜಯ ನ್ಯೂಸ್ ಬೆಂಗಳೂರು
ಕರೊನಾ ರೋಗಿಗಳ ಚಿಕಿತ್ಸೆಗೆ ಸರ್ಕಾರ ದರ ನಿಗದಿ ಪಡಿಸಿದ್ದು, ಹೆಚ್ಚುವರಿ ಶುಲ್ಕ ಪಡೆದರೆ ಶಿಕ್ಷೆ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದರೂ ರೋಗಿಗಳಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವುದನ್ನು ದಿಗ್ವಿಜಯ 24/7 ನ್ಯೂಸ್ ಚಾನಲ್ ಬಯಲಿಗೆಳೆದಿದೆ.
ನಗರದಲ್ಲಿ ಕೋವಿಡ್ -19 ಪ್ರಕರಣಗಳು ಕೈ ಮೀರುತ್ತಿದ್ದು, ಚಿಕಿತ್ಸೆ ಪಡೆಯಲು ಒಂದೆಡೆ ಕರೊನಾ ಸೋಂಕಿತರು ಮತ್ತೊಂದಡೆ ಕರೊನಾ ರಹಿತ ಆರೋಗ್ಯ ಸಮಸ್ಯೆ ಹೊಂದಿರುವವರೂ ಪರದಾಡುತ್ತಿದ್ದಾರೆ. ಸರ್ಕಾರದ ಯಾವ ಆದೇಶ ಹಾಗೂ ಎಚ್ಚರಿಕೆಗೂ ಕವಡೆ ಕಾಸಿನ ಕಿಮ್ಮತ್ತು ನೀಡದ ಕೆಲ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೆಪದಲ್ಲಿ ರೋಗಿಗಳನ್ನು ಸುಲಿಗೆ ಮಾಡುತ್ತಿವೆ. ಹಣ ಇಲ್ಲದ ರೋಗಿಗಳು ಚಿಕಿತ್ಸೆ ಸಿಗದೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುತ್ತಾ ರಸ್ತೆಯಲ್ಲೇ ಪ್ರಾಣ ಬಿಡುತ್ತಿದ್ದಾರೆ.
ಸ್ಟಿಂಗ್ನಲ್ಲಿ ಕಂಡಿದ್ದೇನು? -ಚಿಕಿತ್ಸೆ ಕೊಡಲು ಸರ್ಕಾರ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚಿಗೆ ಹಣ ವಸೂಲು - ರೋಗಿ ಮುಂಗಡವಾಗಿ ಹಣ ಕಟ್ಟಿದರಷ್ಟೇ ಆಸ್ಪತ್ರೆಯ ಒಳಗೆ ಪ್ರವೇಶ, ದಾಖಲಾತಿ. - ವೈದ್ಯರು ಹಾಗೂ ನರ್ಸ್ ಧರಿಸುವ ಪಿಪಿಇ ಕಿಟ್ಗೂ ಪ್ರತ್ಯೇಕವಾಗಿ 2,500 ಕಟ್ಟಬೇಕು. - ಬಡ ಹಾಗೂ ಮಧ್ಯಮವರ್ಗದವರಿಗೆ ಸಾವಿರ ಸಾವಿರ, ಶ್ರೀಮಂತರಾದರೆ ಲಕ್ಷ ಲಕ್ಷ ವಸೂಲಿ.
ಕೋವಿಡ್ ಟೆಸ್ಟ್ಗೆ ದುಪ್ಪಟ್ಟು ವಸೂಲಿ:
ಯಾವ್ಯಾವ ಆಸ್ಪತ್ರೆಗಳಲ್ಲಿ ವಸೂಲಿ?: ರಾಜಾಜಿನಗರದ ಸುಗುಣ ಆಸ್ಪತ್ರೆಯಲ್ಲಿ ಕರೊನಾ ಟೆಸ್ಟ್ ಮಾಡಿಸಿಕೊಳ್ಳಲು ಸರ್ಕಾರ 4,500 ರೂ. ದರ ನಿಗದಿ ಪಡಿಸಿದ್ದರೆ ರೋಗಿಯೊಬ್ಬರಿಂದ ಸರ್ವೀಸ್ ದರ, ಸ್ವಾ್ಯಬ್ ಕಿಟ್ ದರ ಎಂದೆಲ್ಲಾ ಹೇಳಿ 5,100 ರೂ. ವಸೂಲಿ ಮಾಡಲಾಗಿದೆ. ವರದಿ ಬರೋಕೆ 48 ಗಂಟೆಗಳಾಗುತ್ತದೆ. ನೆಗೆಟಿವ್ ಇದ್ರೆ ಮಾತ್ರ ಆಸ್ಪತ್ರೆಗೆ ಬನ್ನಿ, ಪಾಸಿಟಿವ್ ಇದ್ದರೆ ಬಿಬಿಎಂಪಿ ಕಡೆಗೆ ಹೋಗಬೇಕು ಎನ್ನುತ್ತಾರೆ ಸಿಬ್ಬಂದಿ.
ಗೊರಗುಂಟೆ ಪಾಳ್ಯದ ಪೀಪಲ್ ಟ್ರೀ ಆಸ್ಪತ್ರೆ, ಹೆಸರುಘಟ್ಟದ ಸಪ್ತಗಿರಿ ಆಸ್ಪತ್ರೆ, ಯಶವಂತಪುರದ ಕೊಲಂಬಿಯಾ ಏಷ್ಯಾ ಆಸ್ಪತ್ರೆ, ಶೇಷಾದ್ರಿಪುರಂನ ಅಪೊಲೋ ಆಸ್ಪತ್ರೆ, ಹೆಬ್ಬಾಳದ ಬ್ಯಾಪಿಸ್ಟ್ ಆಸ್ಪತ್ರೆ, ಮಾಧವನಗರದ ಮಲ್ಲಿಗೆ ಆಸ್ಪತ್ರೆ, ಮಹಾವೀರ ಜೈನ್ ಆಸ್ಪತ್ರೆ ಸೇರಿದಂತೆ ಹಲವು ಆಸ್ಪತ್ರೆಗಳಲ್ಲಿ ಕೋವಿಡ್ ಪರೀಕ್ಷೆ ಒಳಪಡುವವರು ಹಾಗೂ ಕರೊನಾ ಸೋಂಕಿತರಿಂದ ಮನಬಂದಂತೆ ಹಣ ವಸೂಲಿ ಮಾಡುತ್ತಿರುವುದನ್ನು ದಿಗ್ಬಿಜಯ ನ್ಯೂಸ್ ತಂಡ ಸಾಕ್ಷ್ಯ ಸಮೇತ ಬಯಲಿಗೆ ಎಳೆದಿದೆ.
ಹೆಚ್ಚು ದರ ಪಡೆದರೆ ಕಾನೂನು ಕ್ರಮ: ದಿಗ್ವಿಜಯ ನ್ಯೂಸ್ ಸ್ಟಿಂಗ್ ಆಪರೇಷನ್ನಲ್ಲಿ ಬಯಲಾದ ಹೆಚ್ಚುವರಿ ದರ ವಸೂಲಿ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಯಡಿಯೂರಪ್ಪ ಅವರು ಸರ್ಕಾರ ನಿಗದಿಪಡಿಸಿರುವ ದರಕ್ಕಿಂಥ ಹೆಚ್ಚು ಪಡೆದರೆ ಅಂಥಹ ಆಸ್ಪತ್ರೆಗಳ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ.
ಸಂಪುಟದಲ್ಲೂ ಆಕ್ರೋಶ: ಕರೊನಾ ಪರೀಕ್ಷೆ ಮತ್ತು ಚಿಕಿತ್ಸೆಗೆ ಸರ್ಕಾರ ನಿಗದಿ ಮಾಡಿರುವ ದರಕ್ಕಿಂತ ಹೆಚ್ಚು ವಸೂಲಿ ಮಾಡುತ್ತಿರುವ ಖಾಸಗಿ ಆಸ್ಪತ್ರೆಗಳ ವರ್ತನೆ ಸಚಿವ ಸಂಪುಟ ಸಭೆಯಲ್ಲೂ ಆಕ್ರೋಶಕ್ಕೆ ಕಾರಣವಾಗಿದೆ. ಅನೇಕ ಸಚಿವರು ಈ ವಿಷಯ ಪ್ರಸ್ತಾಪಿಸಿ ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಕಡಿವಾಣ ಹಾಕದಿದ್ದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಸಿಎಂಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಅಂಥ ಆಸ್ಪತ್ರೆಗಳಿಗೆ ವಿದ್ಯುತ್, ನೀರು ಕಡಿತ ಮಾಡಿ ಬುದ್ಧಿ ಕಲಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ಸುಗ್ರೀವಾಜ್ಞೆ ಮೂಲಕ ಖಾಸಗಿ ಆಸ್ಪತ್ರೆಯ ಎಲ್ಲ ಹಾಸಿಗೆಗಳನ್ನು ಕರೊನಾ ಚಿಕಿತ್ಸೆಗಾಗಿ ಸರ್ಕಾರದ ವಶಕ್ಕೆ ಏಕೆ ತೆಗೆದುಕೊಳ್ಳಬಾರದೆಂದು ಕೆಲ ಸಚಿವರು ಪ್ರಶ್ನಿಸಿದರೆನ್ನಲಾಗಿದೆ. ಆದರೆ ಸಿಎಂ ಇದಕ್ಕೆ ಒಪ್ಪದೆ, ಇನ್ನೊಮ್ಮೆ ಮನವಿ ಮಾಡೋಣ. ಬೇಕಾದರೆ ಮತ್ತೆ ಸಭೆ ನಡೆಸೋಣ ಎಂದಿದ್ದಾರೆ. ಖಾಸಗಿ ಆಸ್ಪತ್ರೆ ಮಾಲೀಕರ ಜತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸುವಂತೆ ಸಚಿವರಾದ ಡಾ.ಕೆ.ಸುಧಾಕರ್, ಆರ್. ಅಶೋಕ್ಗೆ ಸೂಚಿಸಿದರೆಂದು ಹೇಳಲಾಗಿದೆ.