ಪಂಚಗ್ಯಾರಂಟಿ ಯೋಜನೆಗಳಲ್ಲಿ ಜಿಲ್ಲೆಗೆ 4701.88 ಕೋಟಿ ರೂ.

Guranntee
Published on

ತುಮಕೂರು: ಪಂಚ ಗ್ಯಾರಂಟಿ ಯೋಜನೆಗಳಿಂದ ಜಿಲ್ಲೆಗೆ ಈ ವರೆಗೂ 4701.88 ಕೋಟಿ ರೂ. ಹಣ ಖರ್ಚುಮಾಡಲಾಗಿದ್ದು ಜನರ ಜೀವನ ಮಟ್ಟ ಸುಧಾರಣೆಯಾಗಿರುವುದು ಅಂಕಿ, ಅಂಶಗಳಿಂದಲೇ ದೃಢವಾಗಿದೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಹಾಗೂ ಶಾಸಕ ದಿನೇಶ್​ ಗೂಳಿಗೌಡ ಹೇಳಿದರು.

ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ ಸರ್ಕಾರ ರಾಜ್ಯದಲ್ಲಿ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳು ದೇಶ, ವಿದೇಶದಲ್ಲೂ ಚರ್ಚೆಯಾಗುತ್ತಿವೆ. ಶಕ್ತಿ ಯೋಜನೆ "ಗೋಲ್ಡನ್​ ಬುಕ್​ ಆಫ್​ ರೆಕಾರ್ಡ್​" ಗೆ ಸೇರ್ಪಡೆಯಾಗಿರುವುದೇ ಇದಕ್ಕೆ ಸಾಕ್ಷಿ ಎಂದರು.

ಗ್ಯಾರಂಟಿ ಯೋಜನೆಗಳು ಚುನಾವಣೆ ಗೆಲುವಿಗಾಗಿ ಮಾಡಿದ ಯೋಜನೆಗಳಲ್ಲ. ಜನರ ಜೀವನಮಟ್ಟ ಸುಧಾರಣೆಗೆ ಘೋಷಿಸಿದ್ದ ಸಂಕಲ್ಪವನ್ನು ಸಿಎಂ, ಡಿಸಿಎಂ ಜಾರಿಗೆ ತಂದಿದ್ದಾರೆ. ಇದು ನಮ್ಮ ಕಾಂಗ್ರೆಸ್​ ಸರ್ಕಾರದ ಬದ್ಧತೆ.ಗ್ಯಾರಂಟಿ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಫಲಾನುಭವಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದು ಯೋಜನೆಯ ದುರುಪಯೋಗ ಆಗದಂತೆ ಎಲ್ಲೂ ಅಪಸ್ವರ ಬಾರದಂತೆ ನೋಡಿಕೊಳ್ಳಬೇಕು. ಬಡತನ ನಿಮೂರ್ಲನೆ ಮಾಡುವ ಉದ್ದೇಶದಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಈ ಯೋಜನೆ ತಲುಪಿಸುವ ಕಾರ್ಯ ಸರ್ಕಾರ ಮಾಡುತ್ತಿದೆ ಎಂದರು.

ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ತಲಾದಾಯ ಹೆಚ್ಚಳವಾಗಿದೆ. 2013ರಲ್ಲಿ 1.05 ಲಕ್ಷವಿದ್ದ ತಲಾದಾಯ ಈಗ 2.04 ಲಕ್ಷಕ್ಕೆ ತಲುಪಿದೆ. ಇದಕ್ಕೆ ಗ್ಯಾರಂಟಿ ಯೋಜನೆಗಳ ಕೊಡುಗೆ ಸಾಕಷ್ಟಿದೆ. ಇನ್ನೂ 200 ಯುನಿಟ್​ ವರೆಗೆ ಉಚಿತ ವಿದ್ಯುತ್​ ನೀಡುವುದರ ಜತೆಗೆ ರಾಜ್ಯದ 33 ಲಕ್ಷ ಪಂಪ್​ ಸೆಟ್​ಗಳಿಗೆ ಉಚಿತ ವಿದ್ಯುತ್​ ನೀಡುವ ಮೂಲಕ ರೈತರ ನೆರವಿಗೂ ಕಾಂಗ್ರೆಸ್​ ಸರ್ಕಾರ ಮುಂದಾಗಿದೆ. ಗ್ಯಾರಂಟಿ ಯೋಜನೆಗಳ ಕುರಿತು ಜಿಲ್ಲೆಯಲ್ಲಿರುವ 330 ಗ್ರಾಮ ಪಂಚಾಯತಿ ಹಾಗೂ 4 ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ಫ್ಲೆಕ್ಸ್​, ಬ್ಯಾನರ್​ ಹಾಕಿ ಪ್ರಚಾರ ಮಾಡಬೇಕಿದೆ. ಗ್ಯಾರಂಟಿ ಯೋಜನೆಗಳಿಗಾಗಿ ರಾಜ್ಯ ಸರ್ಕಾರ ಕಳೆದ 21 ತಿಂಗಳಲ್ಲಿ 98 ಸಾವಿರ ಕೋಟಿ ರೂ. ವ್ಯಯ ಮಾಡಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಚಂದ್ರಶೇಖರಗೌಡ, ಉಪಾಧ್ಯಕ್ಷರಾದ ಹನುಮಂತಯ್ಯ, ನರಸೀಯಪ್ಪ, ಅಂಬರೀಶ್​, ಶಿವಪ್ರಸಾದ್​, ಪಂಚಾಕ್ಷರಿ ಮತ್ತಿತರರು ಇದ್ದರು.

ಬಸ್​ಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಗೃಹಲಕ್ಷ್ಮಿ ಯೋಜನೆಯಡಿ ನೋಂದಣಿಯಾಗಿರುವ ಫಲಾನುಭವಿಗಳ ಪೈಕಿ ಐಟಿ, ಜಿಎಸ್​ ಟಿಯಿಂದ 7343 ಎನ್​ ಪಿಸಿಐ ನಿಂದ 2933 ಫಲಾನುಭವಿಗಳು ಯೋಜನೆಯಿಂದ ಹೊರಗುಳಿದಿದ್ದಾರೆ ಇದನ್ನು ಸರಿಪಡಿಸುವ ಕಾರ್ಯ ಆಗಬೇಕು ಎಂದು ಜಿಪಂ ಸಿಇಒ ಜಿ.ಪ್ರಭು ಹೇಳಿದರು.

ಗೃಹಲಕ್ಷಿ$್ಮ ಯೋಜನೆಯಡಿ ಜಿಲ್ಲೆಯಲ್ಲಿ 6,19,767 ಫಲಾನುಭವಿಗಳಿದ್ದು, 2549.07 ಕೋಟಿ ರೂ. ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಿದೆ. ಜಿಲ್ಲೆಯಲ್ಲಿ 11585 ಮಂದಿ ಫಲಾನುಭವಿಗಳು ಮರಣ ಹೊಂದಿದ್ದಾರೆ. ಹೀಗಾಗಿ ಮರಣ ಹೊಂದಿರುವವರ ಪಟ್ಟಿಯನ್ನು ಕ್ರೋಢಿಕರಿಸಿ ರಾಜ್ಯ ಮತ್ತು ಜಿಲ್ಲಾ ಸಮಿತಿಗೆ ಪ್ರತಿ ತಿಂಗಳು ನೀಡಬೇಕು ಎಂದು ದಿನೇಶ್​ ಗೂಳಿಗೌಡ ಸೂಚಿಸಿದರು.

ಗೃಹಜ್ಯೋತಿ ಯೋಜನೆಯಡಿ 7,31,040 ಗ್ರಾಹಕರು ನೋಂದಣಿಯಾಗಿದ್ದು ಉಚಿತ ವಿದ್ಯುತ್​ ಬಳಕೆ ಮಾಡಿದ್ದಾರೆ, ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ ಪ್ರತಿದಿನ ಸರಾಸರಿ 1.98 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. 28.5 ಕೋಟಿ ಉಚಿತ ಪ್ರಯಾಣಿಸಿದ್ದು ಇದಕ್ಕಾಗಿ 912.49 ಕೋಟಿ ರೂ. ಹಣವನ್ನು ಸಾರಿಗೆ ನಿಗಮಕ್ಕೆ ಸರ್ಕಾರ ಪಾವತಿ ಮಾಡಿದೆ ಎಂದು ತಿಳಿಸಿದರು.

ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ 6,13,280 ಪಡಿತರ ಚೀಟಿಗಳಿವೆ. ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮೂಲಕ 613,63,84,940 ರೂ. ಹಣ ವರ್ಗಾಯಿಸಲಾಗಿದೆ. ಫೆಬ್ರವರಿಯಿಂದ 170 ರೂ. ಹಣದ ಬದಲಿಗೆ ಹೆಚ್ಚುವರಿಯಾಗಿ ಐದು ಕೆಜಿ ವಿತರಣೆ ಮಾಡಲಾಗುತ್ತಿದೆ.ಯುವನಿಧಿ ಯೋಜನೆಗೆ ಸಂಬಂಧಿಸಿದಂತೆ 7768 ಫಲಾನುಭವಿಗಳಿಗೆ 20,67,66,000 ಕೋಟಿ ರೂ. ಹಣವನ್ನು ಡಿಬಿಟಿ ಮೂಲಕ ವರ್ಗಾವಣೆ ಮಾಡಲಾಗಿದೆ ಎಂದರು.

ಗ್ಯಾರಂಟಿ ಯೋಜನೆಗಳು ಮಹಿಳೆಯರ ಪಾಲಿಗೆ ದಾರಿದೀಪ, ಗೃಹಲಕ್ಷ್ಮಿ ಹಣದಿಂದ ನನ್ನ ತಾಯಿ ಕಂಪ್ಯೂಟರ್​ ಖರೀದಿಸಿಕೊಟ್ಟಿದ್ದಾರೆ. ಇದಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಧನ್ಯವಾದಗಳು. ಗ್ಯಾರಂಟಿ ಹಣ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ಯುಪಿಎಸ್​ ಸಿ ಪರೀಕ್ಷೆ ಬರೆದು ಐಎಎಸ್​ ಆಗುವ ಮಹತ್ವಾಕಾಂಕ್ಷೆ ಹೊಂದಿದ್ದೇನೆ ಎಂದು ಯೋಜನೆಯ ಲಾನುಭವಿ ತಿಪಟೂರಿನ ಶಾಲಾ ವಿದ್ಯಾರ್ಥಿನಿ ಪರೀಧಾ ಹೇಳಿದರು.

ನನಗೆ ಬಂದಂತಹ ಗೃಹಲಕ್ಷ್ಮಿ ಹಣ ಔಫಿಧಿ ಖರೀದಿಗೆ ಅನುಕೂಲವಾಗಿದೆ. ಗ್ಯಾರಂಟಿ ಹಣವನ್ನು ಚಿಕಿತ್ಸೆಗೆ ಬಳಕೆ ಮಾಡಿಕೊಳ್ಳುವುದರ ಜೊತೆಗೆ ಮೊಮ್ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳುತ್ತಿದ್ದೇನೆ ಎಂದು ತುಮಕೂರು ತಾಲೂಕು ಉರುಕೆರೆ ಜಯಮ್ಮ ಹೇಳಿದರು.

21 ತಿಂಗಳಲ್ಲಿ ಬಂದಂತಹ ಗೃಹಲಕ್ಷ್ಮಿ ಹಣದಿಂದ ನನ್ನ ಮೊಮ್ಮಗನಿಗೆ ಸೈಕಲ್​ ಖರೀದಿಸಿ ಕೊಟ್ಟಿದ್ದೇನೆ. ಅವನ ವಿದ್ಯಾಭ್ಯಾಸಕ್ಕೂ ಅನುಕೂಲವಾಗಿದೆ. ಈ ಯೋಜನೆ ಗ್ರಾಮೀಣ ಭಾಗದವರಿಗೆ ತುಂಬಾ ಅನುಕೂಲವಾಗಿದೆ ಎಂದು ತುಮಕೂರು ತಾಲೂಕು ತಿಮ್ಲಪುರದ ಚಂದ್ರಮ್ಮ ಸಂತಸ ಹಂಚಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net