

ಪಂಕಜ ಕೆ.ಎಂ. ಬೆಂಗಳೂರು
ರಾಜ್ಯದ ಪುರಾತನ ಸ್ಮಾರಕಗಳ ಬಗ್ಗೆ ಆಸಸ್ತಿ ಮೂಡಿಸುವ ಮೂಲಕ ಪ್ರವಾಸೋದ್ಯಮ ಉತ್ತೇಜಿಸಲು 3ಡಿ ಲೇಸರ್ ತಂತ್ರಜ್ಞಾನದ ಮೂಲಕ ಐತಿಹಾಸಿಕ ಮತ್ತು ಪಾರಂಪರಿಕ ಸ್ಮಾರಕಗಳನ್ನು ಡಿಜಿಟಲೀಕರಣಗೊಳಿಸಲು ‘ಕರ್ನಾಟಕ ಡಿಜಿಟಲ್ ಹೆರಿಟೇಜ್ ಯೋಜನೆ’ ಜಾರಿಗೊಳಿಸಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ.
ಯೋಜನೆಯಡಿ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯು (ಕೆಎಸ್‌ಸಿಎಸ್‌ಟಿ) ರಾಜ್ಯ ಪುರಾತತ್ವ, ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ (ಡಿಎಎಂಎಚ್) ಅಡಿಯಲ್ಲಿ ಬರುವ 844 ಸಂರಕ್ಷಿತ ಸ್ಮಾರಕಗಳಲ್ಲಿ 3ಡಿ ಲೇಸರ್ ಸ್ಕ್ಯಾನಿಂಗ್ ಕಾರ್ಯ ಕೈಗೆತ್ತಿಕೊಂಡಿದ್ದು, ಈಗಾಗಲೇ 530 ಸ್ಮಾರಕಗಳ ಕಾರ್ಯ ಪೂರ್ಣಗೊಳಿಸಲಾಗಿದೆ. ಇದರ ಮುಂದುವರಿದ ಭಾಗವಾಗಿ ರಾಜ್ಯದ 17 ವಸ್ತು ಸಂಗ್ರಹಾಲಯಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಶೀಘ್ರದಲ್ಲೇ ಸರ್ಕಾರ ಮಂಡಳಿಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
3ಡಿ ತಂತ್ರಜ್ಞಾನದಿಂದಾಗಿ ವರ್ಚುವಲ್ ಪ್ರವಾಸ ಉತ್ತೇಜನಗೊಳ್ಳಲಿದೆ. ಈ ತಂತ್ರಜ್ಞಾನದಲ್ಲಿ ಸ್ಥಿರ ಚಿತ್ರಕ್ಕಿಂತ ಸ್ಮಾರಕಗಳು ವಿಭಿನ್ನ ಹಾಗೂ ವಿಶೇಷವಾಗಿ ಕಾಣಲಿವೆ. ಇದಕ್ಕಾಗಿ ಇಲಾಖೆ ವೆಬ್‌ಸೈಟ್‌ಗೆ ಅತ್ಯಾಧುನಿಕ ಸ್ಪರ್ಶ ನೀಡಲಾಗಿದೆ. ಸ್ಮಾರಕಗಳ 3ಡಿ ಲೇಸರ್ ಸ್ಕ್ಯಾನಿಂಗ್ ಗುಣಮಟ್ಟದಿಂದ ಕೂಡಿದ್ದು, ಸಾಮಾನ್ಯ ಕಣ್ಣಿಗೆ ಗೋಚರಿಸದ ಅಂಶಗಳು ಸಹ ಈ 3ಡಿ ನಕ್ಷೆಯಲ್ಲಿ ಕಾಣಸಿಗಲಿವೆ. ಯಾವುದೇ ವಿಡಿಯೋ ಅಥವಾ ಛಾಯಾಚಿತ್ರಕ್ಕಿಂತ ದೃಶ್ಯಗಳು ನಿಖರ ಹಾಗೂ ಸ್ಪಷ್ಟತೆಯಿಂದ ಕೂಡಿರಲಿವೆ ಎನ್ನುತ್ತಾರೆ ಕೆಎಸ್‌ಸಿಎಸ್‌ಟಿನ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ. ಯು.ಟಿ. ವಿಜಯ್.
33 ದತ್ತಾಂಶಗಳ ಕ್ರೋಡೀಕರಣ: 3ಡಿ ಸ್ಕ್ಯಾನಿಂಗ್ ಸ್ಮಾರಕಗಳ 33 ದತ್ತಾಂಶವನ್ನು ಕ್ರೋಡೀಕರಣಗೊಳಿಸಲಾಗುತ್ತದೆ. ಸ್ಮಾರಕಗಳ ಶೈಲಿ, ಅಳತೆ, ಆಳ, ಅಗಲ, ಸ್ಮಾರಕಕ್ಕೆ ಬಳಸಲಾಗಿರುವ ಸಾಮಗ್ರಿ (ಕಲ್ಲು, ಗಾರೆ, ಇಟ್ಟಿಗೆ ಇತ್ಯಾದಿ), ನಿರ್ಮಾಣಗೊಂಡ ವರ್ಷ, ಯಾರ ಕಾಲದಲ್ಲಿ ಮುಂತಾದ ವಿವರಗಳನ್ನು ದಾಖಲಿಸಲಾಗುತ್ತದೆ ಎಂದು ಕೆಎಸ್‌ಸಿಎಸ್‌ಟಿನ ತಾಂತ್ರಿಕ ಸಹಾಯಕ ಪಿ. ಸಂಜೀವ್ ಕುಮಾರ್ ತಿಳಿಸಿದರು.
ವಸ್ತುಸಂಗ್ರಹಾಲಯಗಳು: ಬೆಂಗಳೂರು, ಕಲಬುರಗಿ, ಬಸವಕಲ್ಯಾಣ, ಮಡಿಕೇರಿ, ಚಿತ್ರದುರ್ಗ, ಯಳಂದೂರು, ಗದಗ, ರಾಯಚೂರು, ಅಥಣಿ, ಹೂವಿನ ಹಡಗಲಿ, ಹಾಸನಗಳಲ್ಲಿನ ಸರ್ಕಾರಿ ವಸ್ತು ಸಂಗ್ರಹಾಲಯಗಳು; ಮಂಗಳೂರಿನ ಶ್ರೀಮಂತಿ ಬಾಯಿ ಸ್ಮಾರಕ ಸರ್ಕಾರಿ ಮ್ಯೂಸಿಯಂ, ಶಿವಮೊಗ್ಗದ ಶಿವಪ್ಪನಾಯಕ ಅರಮನೆ, ಕಿತ್ತೂರಿನ ಕಿತ್ತೂರು ರಾಣಿ ಚನ್ನಮ್ಮ ಸ್ಮಾರಕ ಸರ್ಕಾರಿ ವಸ್ತು ಸಂಗ್ರಹಾಲಯ, ಮೈಸೂರಿನ ವೆಲ್ಲಿಂಗ್ಟನ್ ಸರ್ಕಾರಿ ವಸ್ತು ಸಂಗ್ರಹಾಲಯ, ಶ್ರೀರಂಗಪಟ್ಟಣದ ಶ್ರೀ ಜಯಚಾಮರಾಜೇಂದ್ರ ಸ್ಮಾರಕ ಸರ್ಕಾರಿ ವಸ್ತು ಸಂಗ್ರಹಾಲಯ ಹಾಗೂ ಬೆಂಗಳೂರಿನ ವೆಂಕಟಪ್ಪ ಆರ್ಟ್ ಗ್ಯಾಲರಿ.
ತಂತ್ರಜ್ಞಾನದ ವಿಶೇಷತೆ ಏನು? ಸ್ಮಾರಕಗಳು ಮಳೆ, ಗಾಳಿ, ನೈಸರ್ಗಿಕ ವಿಕೋಪ ಸೇರಿ ಯಾವುದೇ ಕಾರಣದಿಂದ ಹಾನಿಗೊಳಗಾದಂತಹ ಸಂದರ್ಭದಲ್ಲಿ ಕಟ್ಟಡಗಳ ಮರು ನಿರ್ಮಾಣಕ್ಕೆ ಈ ತಂತ್ರಜ್ಞಾನ ಸಹಕಾರಿಯಾಗಲಿದೆ. ಹಾನಿಗೊಳಗಾದ ಸ್ಮಾರಕಗಳನ್ನು ಯಥಾವತ್ತಾಗಿ ಮರು ನಿರ್ಮಿಸಲು ಅವುಗಳ ನಿಖರ ಅಳತೆ, ಗಾತ್ರ, ವಿನ್ಯಾಸ ಬಹಳ ಮುಖ್ಯವಾಗುತ್ತದೆ. 3ಡಿ ತಂತ್ರಜ್ಞಾನದಲ್ಲಿ ಈ ಕಾರ್ಯ ಸುಲಭವಾಗುವುದಲ್ಲದೆ ಮಾಹಿತಿಯೂ ನಿಖರವಾಗಿರುತ್ತದೆ.
ಈ ತಂತ್ರಜ್ಞಾನದ ನೆರವಿನಿಂದ ಕಟ್ಟಡದ 3ಡಿ ವಿನ್ಯಾಸ ತಯಾರಿಸಬಹುದಾಗಿದೆ. ಜಿಯೋ ಸ್ಪೇಷಿಯಲ್ ಭೌಗೋಳಿಕ ತಂತ್ರಜ್ಞಾನವನ್ನು ಇದರೊಂದಿಗೆ ಅಡಕಗೊಳಿಸಲಾಗಿದೆ. ಇದರಲ್ಲಿ ಸ್ಮಾರಕಗಳ ಜಿಪಿಎಸ್ ಲೊಕೇಷನ್ ಛಾಯಾಚಿತ್ರ ಇರಲಿದೆ. ಅವುಗಳ ಮೇಲೆ ಕ್ಲಿಕ್ ಮಾಡಿದಾಗ ಹತ್ತಿರದ ಊರು, ಬಸ್ ವ್ಯವಸ್ಥೆ, ತಂಗುವಿಕೆ, ಸುತ್ತಮುತ್ತಲಿನ ಸ್ಥಳೀಯ ಪ್ರೇಕ್ಷಣೀಯ ಸ್ಥಳಗಳ ಮಾಹಿತಿಗಳು ಸಾರ್ವಜನಿಕರಿಗೆ ಲಭ್ಯವಾಗಲಿದೆ ಎನ್ನುತ್ತಾರೆ ಕೆಎಸ್‌ಸಿಎಸ್‌ಟಿನ ತಾಂತ್ರಿಕ ಸಹಾಯಕ ಎಸ್. ಅಭಿಷೇಕ್.
530 ಸ್ಮಾರಕಗಳ ಕಾರ್ಯ ಪೂರ್ಣ: ರಾಜ್ಯ ಪುರಾತತ್ವ ಇಲಾಖೆಗೆ ಒಳಪಟ್ಟ 497 ದೇವಸ್ಥಾನಗಳು, 47 ಮಸೀದಿ, 97 ದರ್ಗಾ, 48 ಪುರಾತತ್ವ ನೆಲೆಗಳು, 7 ಕೋಟೆ ಕೊತ್ತಲಗಳು, 9 ಅರಮನೆ, 140 ಶಾಸನಗಳು ಹಾಗೂ ಪಾರಂಪರಿಕ ತಾಣಗಳು ಸೇರಿ ಒಟ್ಟು 844 ಸ್ಮಾರಕಗಳಲ್ಲಿ ಈವರೆಗೂ 530 ಸ್ಮಾರಕಗಳ 3ಡಿ ತಂತ್ರಜ್ಞಾನದ ಡಿಜಿಟಲೀಕರಣಗೊಳಿಸಲಾಗಿದೆ. ಇದೀಗ 17 ವಸ್ತು ಸಂಗ್ರಹಾಲಯಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಕೋಟ್:
ರಾಜ್ಯದ 530 ಪಾರಂಪರಿಕ ಸ್ಮಾರಕಗಳ ಮಾದರಿಯಲ್ಲೇ 17 ವಸ್ತು ಸಂಗ್ರಹಾಲಯಗಳನ್ನೂ 3ಡಿ ತಂತ್ರಜ್ಞಾನ ಮೂಲಕ ಡಿಜಿಟಲೀಕರಣಗೊಳಿಸಲಾಗುವುದು. ಮುಂದಿನ ಎರಡೂವರೆ ವರ್ಷಗಳಲ್ಲಿ ಈ ಕಾರ್ಯ ಪೂರ್ಣಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ. ಈ ಸಂಬಂಧ ಶೀಘ್ರದಲ್ಲೇ ಒಡಂಬಡಿಕೆಗೆ ಸಹಿ ಹಾಕಲಾಗುವುದು.
-ಜಿ. ರಾಜಶೇಖರ್, ಕೆಎಸ್‌ಸಿಎಸ್‌ಟಿ ತಾಂತ್ರಿಕ ಸಹಾಯಕ