ಕರ್ನಾಟಕಕ್ಕೆ ನೆರೆಹೊರೆ ರಾಜ್ಯಗಳದ್ದೇ ಚಿಂತೆ: ಸುತ್ತಲೂ ಇದೆ ಹಾಟ್​ಸ್ಪಾಟ್​ಗಳು, ಲಾಕ್​ಡೌನ್ ಸಡಿಲಿಸಿದರೆ ಅಪಾಯ ತಪ್ಪಿದ್ದಲ್ಲ

Lockdown 147
Published on

ಬೆಂಗಳೂರು: ಕರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕೈಗೊಂಡ ಮುನ್ನೆಚ್ಚರಿಕೆ ಕ್ರಮ ಈವರೆಗೂ ತಕ್ಕಮಟ್ಟಿಗೆ ಕೆಲಸ ಮಾಡಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಸರ್ಕಾರ ರಚಿಸಿರುವ ತಜ್ಞರ ತಂಡವೂ ಅಭಿಪ್ರಾಯಪಟ್ಟಿದೆ. ಈ ನಡುವೆ ಲಾಕ್​ಡೌನ್ ಮುಂದುವರಿಸಬೇಕೆ? ಬೇಡವೇ? ಎಂಬ ಚರ್ಚೆಗಳು ನಡೆದಿವೆ. ಒಂದುವೇಳೆ ಏಪ್ರಿಲ್ 14ರ ನಂತರ ಲಾಕ್​ಡೌನ್ ಸಡಿಲಿಕೆಯಾದರೆ ರಾಜ್ಯದ ಗಡಿಯನ್ನು ನಿಭಾಯಿಸುವುದು ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ.

ರಾಜ್ಯದಲ್ಲಿ ಸೋಂಕಿತರು ಮತ್ತು ಅವರ ಸಂಪರ್ಕದಲ್ಲಿ ಇರುವವರನ್ನು ಕ್ವಾರಂಟೈನ್ ಮಾಡುವಲ್ಲಿ ಯಶಸ್ಸು ಸಾಧಿಸಿರುವುದರಿಂದ ಸೋಂಕು ಮೂರನೇ ಹಂತಕ್ಕೆ ಹರಡುವ ಸಾಧ್ಯತೆಗಳು ಈ ಹಂತದಲ್ಲಿ ತೀರಾ ಕಡಿಮೆ. ಕರ್ನಾಟಕವನ್ನು ಸುತ್ತುವರಿದಿರುವ ಆಂಧ್ರ, ತಮಿಳುನಾಡು,

ತೆಲಂಗಾಣ, ಮಹಾರಾಷ್ಟ್ರ, ಕೇರಳದಲ್ಲಿ ಹೆಚ್ಚಿನ ಸೋಂಕಿತರು ಕಂಡುಬಂದಿದ್ದಾರೆ. ಏಳು ದಿನಗಳ ಬಳಿಕ ಇಲ್ಲಿನ ಪರಿಸ್ಥಿತಿ ಸುಧಾರಿಸಿದೆ ಎಂದೆನಿಸಿ ನೆರೆಹೊರೆ ರಾಜ್ಯದೊಂದಿಗೆ ಓಡಾಟಕ್ಕೆ ಅವಕಾಶ ಮಾಡಿಕೊಟ್ಟರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಹಿರಿಯ ಅಧಿಕಾರಿಗಳು ಸಿಎಂ, ಪ್ರಮುಖ ಸಚಿವರ ಗಮನಕ್ಕೆ ತಂದಿದ್ದಾರೆ. ಅಲ್ಲಿ ಪರಿಸ್ಥಿತಿ ಪೂರ್ಣ ಸರಿ ಆಗುವವರೆಗೆ ಗಡಿ ಬ್ಲಾಕ್ ಮುಂದುವರಿಸುವುದೇ ಸೂಕ್ತ, ಉದ್ಯೋಗ ಅಥವಾ ಕೌಟುಂಬಿಕ ಕಾರಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಜನ ಇತ್ತ ಬಂದರೂ ಅಪಾಯವೇ ಎಂದು ಸೂಚ್ಯವಾಗಿ ಅರ್ಥ ಮಾಡಿಸಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ. ಉದ್ಯೋಗದ ಕಾರಣಕ್ಕೆ ತಮಿಳುನಾಡಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬೆಂಗಳೂರಿಗೆ ಬರಬಹುದು, ಅದೇ ರೀತಿ ಚಿಕಿತ್ಸೆ ನೆಪದಲ್ಲಿ ಕೇರಳದಿಂದಲೂ ಬರಬಹುದು. ಒಮ್ಮೆ ಪರಿಸ್ಥಿತಿ ಕೈಮೀರಿದರೆ ಸುಧಾರಿಸುವುದು ಕಷ್ಟ. ಇಟಲಿ, ಅಮೆರಿಕ, ಫ್ರಾನ್ಸ್​ನ ಪ್ರಮುಖ ನಗರಗಳಲ್ಲಿ ಸಡಿಲ ತೀರ್ವನಗಳು ಯಾವ ರೀತಿ ಪೆಟ್ಟುಕೊಟ್ಟಿದೆ ಎಂಬ ಉದಾಹರಣೆ ಇದೆ. ನ್ಯೂಯಾರ್ಕ್​ನಂಥ ನಗರವೇ ನಲುಗಿ ಹೋಗಿದೆ.

ಹೀಗಾಗಿ ನಾವು ಗಡಿ ಸಡಿಲ ಮಾಡಿದರೆ ಇದರ ಪರಿಣಾಮ ರಾಜ್ಯ ವ್ಯಾಪಿಸಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಇದೇ ವಿಚಾರದಲ್ಲಿ ಅನೌಪಚಾರಿಕವಾಗಿ ಪ್ರತಿಕ್ರಿಯೆ ನೀಡಿದ ಸಿಎಂ ಕಚೇರಿ ಅಧಿಕಾರಿ, ಸರ್ಕಾರ ಮುಂಜಾಗ್ರತೆ ಕ್ರಮ ಕೈಗೊಂಡಿದ್ದರಿಂದ ಎಲ್ಲವೂ ಸರಿ ಇದೆ. ಮುಂದೆ ಕೂಡ ಮುನ್ನೆಚ್ಚರಿಕೆ ವಹಿಸಲೇ ಬೇಕಾಗುತ್ತದೆ. ಕೊಂಚ ಎಡವಿದರೂ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂಬ ಅರಿವು ಸರ್ಕಾರಕ್ಕಿದೆ ಎಂದರು.

ನಿಯಂತ್ರಣವೇ ಸೂಕ್ತ

ಕಟ್ಟುನಿಟ್ಟಿನ ಕ್ರಮದ ನಡುವೆಯೂ ಕೇರಳದಿಂದ ಜಲಸಾರಿಗೆ ಮೂಲಕ ಚಿಕಿತ್ಸೆ ಪಡೆದುಕೊಳ್ಳಲು ರಾಜ್ಯದ ಕರಾವಳಿ ಪ್ರವೇಶಿಸಿದ್ದಾರೆ. ಆಂಧ್ರದಿಂದ ಗಡಿ ದಾಟಿ ಬಂದವರೂ ಇದ್ದಾರೆ. ಇಂಥದ್ದರಲ್ಲಿ ಏ.14ರ ನಂತರ ಸಾರ್ವಜನಿಕ ಸಾರಿಗೆ ಓಡಾಟಕ್ಕೆ ಅವಕಾಶ ಕೊಟ್ಟರೆ ಕಷ್ಟವಾಗಬಹುದೆಂಬ ಅಭಿಪ್ರಾಯಗಳು ಸರ್ಕಾರದಲ್ಲೂ ಇದೆ. ಕೇರಳದಲ್ಲಿ ಕಾಸರಗೋಡು, ಮಹಾರಾಷ್ಟ್ರದ ಮುಂಬೈ, ತಮಿಳುನಾಡಿನ ಚೆನ್ನೈನಲ್ಲಿ ಪ್ರಮುಖ ಹಾಟ್​ಸ್ಪಾಟ್ ಎನಿಸಿವೆ. ಅಲ್ಲಿ ಸೋಂಕಿತರು ಸಂಪರ್ಕ ಬಂದವರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಲಾಗುತ್ತಿದ್ದರೂ ವ್ಯಾಪಕವಾಗಿ ವಿಸ್ತರಿಸುತ್ತಿದೆ. ಈ ಕಾರಣಕ್ಕೆ ಕೆಲ ದಿನಗಳ ಕಾಲ ಎಷ್ಟೇ ಕಷ್ಟವಾದರೂ ಅಂತರಾಜ್ಯ ಜನರ ಓಡಾಟ ನಿಯಂತ್ರಿಸುವುದೇ ಸೂಕ್ತ ಎಂಬ ಅಭಿಪ್ರಾಯ ಅಧಿಕಾರಿಗಳ ಬಾಯಲ್ಲಿದೆ.

| ಶ್ರೀಕಾಂತ್ ಶೇಷಾದ್ರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net