21ನೇ ಚಿತ್ರಸಂತೆ: ಭಾರತೀಯ ಬಾಹ್ಯಾಕಾಶ ವಿಜ್ಞಾನಿಗಳಿಗೆ ಸಮರ್ಪಣೆ

Chitra sante
Published on

ಬೆಂಗಳೂರು: ರಾಜಧಾನಿಯಲ್ಲಿ ಕಲಾವಿದರ ಕಲಾಕೃತಿಗಳ ಪ್ರದರ್ಶನಕ್ಕೆ ವೇದಿಕೆ ಸಜ್ಜಾಗುತ್ತಿದ್ದು, ಕರ್ನಾಟಕ ಚಿತ್ರಕಲಾ ಪರಿಷತ್ತು ವತಿಯಿಂದ ಭಾನುವಾರ (ಜ.7) ಕುಮಾರಕೃಪಾ ರಸ್ತೆಯಲ್ಲಿ ‘21ನೇ ಚಿತ್ರಸಂತೆ’ ಆಯೋಜಿಸಲಾಗಿದೆ.

ಈ ವರ್ಷದ ಚಿತ್ರಸಂತೆಯನ್ನು ‘ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಭಾರತೀಯ ವಿಜ್ಞಾನಿಗಳಿಗೆ’ ಸಮರ್ಪಣೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಸಾಧನೆ ಮಾಡಿರುವ ವಿಜ್ಞಾನಿಗಳ ಮಾಹಿತಿ ಚಿತ್ರಸಂತೆಯಲ್ಲಿ ಇರಲಿದೆ ಎಂದು ಪರಿಷತ್ತಿನ ಅಧ್ಯಕ್ಷ ಡಾ.ಬಿ.ಎಲ್. ಶಂಕರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪರಿಷತ್ತಿನ ಆವರಣದಲ್ಲಿ ಭಾನುವಾರ ಬೆಳಗ್ಗೆ 10.30ಕ್ಕೆ ಸಿಎಂ ಸಿದ್ದರಾಮಯ್ಯ ಚಿತ್ರಸಂತೆಗೆ ಚಾಲನೆ ನೀಡಲಿದ್ದಾರೆ. ಕಲಾ ಪ್ರದರ್ಶನವನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸಲಿದ್ದು, ಸಚಿವರಾದ ಕೆ.ಎನ್. ರಾಜಣ್ಣ, ಡಾ.ಎಂ.ಸಿ. ಸುಧಾಕರ್, ಶಿವರಾಜ ತಂಗಡಗಿ, ಸಂಸದ ಪಿ.ಸಿ. ಮೋಹನ್, ಶಾಸಕರಾದ ಎಸ್.ಟಿ. ಸೋಮಶೇಖರ್, ರಿಜ್ವಾನ್ ಅರ್ಷದ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.

1,500 ಕಲಾವಿದರು ಭಾಗಿ: ಚಿತ್ರಸಂತೆಯಲ್ಲಿ ಭಾಗವಹಿಸಲು ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ, ಒಡಿಶಾ, ಗುಜರಾತ್ ಸೇರಿ ದೇಶಾದ್ಯಂತ 2,726 ಕಲಾವಿದರು ಅರ್ಜಿ ಸಲ್ಲಿಸಿದ್ದರು. ಇವರಲ್ಲಿ ಆಯ್ದ 1,500 ಕಲಾವಿದರ ಕಲಾಕೃತಿಗಳು ಪ್ರದರ್ಶನಗೊಳ್ಳಲಿದೆ. 300ಕ್ಕೂ ಅಧಿಕ ಮಳಿಗೆಗಳ ವ್ಯವಸ್ಥೆ ಹಾಗೂ 400ಕ್ಕೂ ಅಧಿಕ ಕಲಾವಿದರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ವಿಶೇಷವಾಗಿ ಪರಿಷತ್ತಿನ ಪ್ರದರ್ಶನ ಗ್ಯಾಲರಿಗಳಲ್ಲಿ ತೊಗಲು ಗೊಂಬೆ, ಮೈಸೂರು ಸಾಂಪ್ರದಾಯಿಕ ಕಲಾಕೃತಿ ಹಾಗೂ ವ್ಯಂಗ್ಯಚಿತ್ರಗಳ ಪ್ರದರ್ಶನ ಏರ್ಪಡಿಸಲಾಗುತ್ತಿದೆ ಎಂದು ಬಿ.ಎಲ್. ಶಂಕರ್ ಮಾಹಿತಿ ನೀಡಿದರು.

ಆನ್‌ಲೈನ್ ವ್ಯವಸ್ಥೆ: ಈ ಬಾರಿ ಚಿತ್ರಸಂತೆ ನೋಂದಣಿ, ಅರ್ಜಿ ಸಲ್ಲಿಕೆ, ಶುಲ್ಕ ಪಾವತಿ, ಕಲಾವಿದರ ಆಯ್ಕೆ ಹಾಗೂ ಮಳಿಗೆ ವಿತರಣೆ ಸೇರಿ ಎಲ್ಲ ಪ್ರಕ್ರಿಯೆಗಳನ್ನು ಆನ್‌ಲೈನ್ ಮೂಲಕವೇ ಮಾಡಲಾಗಿದ್ದು, ಇದಕ್ಕಾಗಿ ನೂತನ ವೆಬ್‌ಸೈಟ್ ಡಿಡಿಡಿ.ಇಜಿಠ್ಟಿಚ್ಞಠಿಛಿ.ಜ್ಞಿ ರೂಪಿಸಲಾಗಿದೆ. ಪ್ರತಿ ಹಂತದಲ್ಲೂ ವೆಬ್‌ಸೈಟ್ ಮೂಲಕವೇ ಪ್ರತಿಕ್ರಿಯೆ ಹಾಗೂ ಸಂದೇಶಗಳನ್ನು ರವಾನಿಸಲಾಗಿದೆ.

ಹಲವು ಬಗೆಯ ಕಲಾಕೃತಿಗಳು: ಸಾಂಪ್ರದಾಯಿಕ ಮೈಸೂರು ಶೈಲಿಯ ಕಲೆ, ರಾಜಸ್ಥಾನಿ ಶೈಲಿ, ಮಧುಬನಿ ಶೈಲಿ, ತೈಲ ಮತ್ತು ಜಲವರ್ಣಗಳಲ್ಲಿ ರಚಿಸಿರುವ ಚಿತ್ರಗಳು, ಆಕ್ರಿಲಿಕ್, ಕೊಲಾಜ್, ಅಥೋಗ್ರಾಪ್ ಸೇರಿ ಹಲವು ಪ್ರಕಾರಗಳ ಕಲಾಕೃತಿಗಳು ದೊರೆಯಲಿವೆ. ಕುಂಚ ಅಥವಾ ಪೆನ್ಸಿಲ್‌ಗಳಿಂದ ಕಲಾರಸಿಕರ ಭಾವಚಿತ್ರಗಳನ್ನು ಸ್ಥಳದಲ್ಲೇ ರಚಿಸಿ ಕೊಡುವ ಕಲಾವಿದರಿರುತ್ತಾರೆ. ಹೀಗೆ ಹಲವು ಬಗೆಯ ಕಲಾ ಪ್ರಕಾರದ ಚಿತ್ರಗಳು ಒಂದೇ ಸೂರಿನಡಿ ನೋಡುಗರ ಗಮನ ಸೆಳೆಯಲಿವೆ.

ಮಳಿಗೆಗಳ ವ್ಯವಸ್ಥೆ: ಶಿವಾನಂದ ಸರ್ಕಲ್‌ನಿಂದ ವಿಂಡ್ಸರ್ ಮ್ಯಾನರ್‌ವರೆಗಿನ ಕುಮಾರಕೃಪಾ ಹಾಗೂ ಕ್ರೆಸೆಂಟ್ ರಸ್ತೆಯ ಸ್ವಲ್ಪಭಾಗದಲ್ಲಿ ಕಲಾಕೃತಿಗಳ ಪ್ರದರ್ಶನ ಇರಲಿದೆ. ಇದಲ್ಲದೆ, ಶಿವಾನಂದ ವೃತ್ತದಿಂದ ಗುರುರಾಜ ಕಲ್ಯಾಣ ಮಂಟಪದವರೆಗೆ ಸ್ಟೀಲ್ ಬ್ರಿಡ್ಜ್ ತಳ ಭಾಗದಲ್ಲಿ ಹಾಗೂ ಭಾರತ ಸೇವಾದಳದ ಆವರಣದಲ್ಲಿ ಕಲಾವಿದರಿಗೆ ಮಳಿಗೆಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ.

6 ಲಕ್ಷ ಜನ ಭೇಟಿ ನಿರೀಕ್ಷೆ : ಕಳೆದ ವರ್ಷ 4 ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದು, 5 ಕೋಟಿ ರೂ.ಗೂ ಅಧಿಕ ಮೊತ್ತದ ಕಲಾಕೃತಿಗಳು ಮಾರಾಟವಾಗಿದ್ದವು. ಈ ಬಾರಿ 6 ಲಕ್ಷ ಜನರು ಭೇಟಿ ನೀಡುವ ನಿರೀಕ್ಷೆ ಇದೆ. ಸಂತೆಯಲ್ಲಿ 100 ರೂ.ನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಕಲಾಕೃತಿಗಳು ಪ್ರದರ್ಶನಗೊಳ್ಳಲಿದ್ದು, ಕಲಾವಿದರಿಂದ ನೇರವಾಗಿ ಖರೀದಿಸಬಹುದು.

ಫೀಡರ್ ಬಸ್ ಸೇವೆ: ಚಿತ್ರಸಂತೆಗೆ ಆಗಮಿಸುವ ಕಲಾವಿದರು ಹಾಗೂ ಕಲಾಸಕ್ತರ ಅನುಕೂಲಕ್ಕಾಗಿ ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಮಂತ್ರಿ ಮಾಲ್ ಮೆಟ್ರೋ ನಿಲ್ದಾಣಗಳಿಂದ ಶಿವಾನಂದ ಮಾರ್ಗವಾಗಿ ವಿಧಾನಸೌಧದವರೆಗೆ ಬೆಳಗ್ಗೆ 8ರಿಂದ ರಾತ್ರಿ 9 ಗಂಟೆವರೆಗೆ ಫೀಡರ್ ಬಸ್ ಸೇವೆ ಇರಲಿದೆ. ಸ್ಥಳೀಯ ನಿವಾಸಿಗಳ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ವಿಶೇಷ ಪಾಸ್ ವ್ಯವಸ್ಥೆ ಮಾಡಲಾಗುತ್ತದೆ. ಕ್ರೆಸೆಂಟ್ ಮತ್ತು ರೇಸ್‌ಕೋರ್ಸ್ ರಸ್ತೆ ಹಾಗೂ ಬಿಡಿಎ ಆವರಣ, ರೈಲ್ವೆ ಸಮಾನಾಂತರ ರಸ್ತೆಗಳಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಇರಲಿದೆ.

6ರಂದು ಚಿತ್ರಕಲಾ ಸಮ್ಮಾನ್ ಪ್ರಶಸ್ತಿ ಪ್ರದಾನ : ಚಿತ್ರಕಲಾ ಪರಿಷತ್ತು ಮತ್ತು ಉನ್ನತ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶನಿವಾರ (ಜ.6) ಬೆಳಗ್ಗೆ 11.30ಕ್ಕೆ ಚಿತ್ರಕಲಾ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ‘ಎಚ್.ಕೆ. ಕೇಜ್ರಿವಾಲ್ ಪ್ರಶಸ್ತಿ’ಗೆ ಪ್ರೊ. ವಸುಧಾ ತೋಜುರ್, ‘ಎಂ.ಆರ್ಯಮೂರ್ತಿ ಪ್ರಶಸ್ತಿ’ಗೆ ಪ್ರೊ. ಬಿ.ವಿ. ಸುರೇಶ್, ‘ಡಿ.ದೇವರಾಜ್ ಅರಸು ಪ್ರಶಸ್ತಿ’ಗೆ ಎಲ್.ಎನ್. ತಲ್ಲೂರ್ ಹಾಗೂ ‘ವೈ. ಸುಬ್ರಮಣ್ಯರಾಜು ಪ್ರಶಸ್ತಿ’ಗೆ ಬಿ.ಬಿ.ರಾಘವೇಂದ್ರ ಆಯ್ಕೆಯಾಗಿದ್ದಾರೆ. ಪ್ರಶಸ್ತಿಗಳು ತಲಾ 50 ಸಾವಿರ ರೂ. ನಗದು ಹಾಗೂ ಲಕ ಒಳಗೊಂಡಿವೆ.

ಗೋಷ್ಠಿಯಲ್ಲಿ ಚಿತ್ರಕಲಾ ಪರಿಷತ್ತು ಉಪಾಧ್ಯಕ್ಷರಾದ ಟಿ. ಪ್ರಭಾಕರ್, ವಿ. ರಾಮಕೃಷ್ಣಪ್ಪ, ಪ್ರೊ. ಕೆ.ಎಸ್. ಅಪ್ಪಾಜಯ್ಯ, ಪ್ರಧಾನ ಕಾರ್ಯದರ್ಶಿ ಎಸ್.ಎನ್. ಶಶಿಧರ್, ಕೋಶಾಧ್ಯಕ್ಷ ಡಾ. ಎನ್. ಲಕ್ಷ್ಮೀಪತಿ ಬಾಬು ಇತರರಿದ್ದರು. ಇದೇ ವೇಳೆ ಪರಿಷತ್ತಿನ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net