

ಮದ್ದೂರು: ಎಂಇಎಸ್ ಪುಂಡಾಟ ಖಂಡಿಸಿ ಶನಿವಾರ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಮದ್ದೂರು ಪಟ್ಟಣದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ವರ್ತಕರು ಸ್ವ ಪ್ರೇರಿತವಾಗಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಬಂದ್‌ಗೆ ಬೆಂಬಲ ನೀಡಿದ್ದರು. ಸಣ್ಣಪುಟ್ಟ ಹೂವಿನ ಅಂಗಡಿಗಳು, ತರಕಾರಿ ಅಂಗಡಿಗಳು, ಔಷಧಿ ಅಂಗಡಿ, ಆಸ್ಪತ್ರೆ ಹಾಗೂ ಹಾಲಿನ ಮಳಿಗೆಗಳು ಎಂದಿನಂತೆ ವಹಿವಾಟು ನಡೆಸಿದವು. ಪಟ್ಟಣದ ಪೇಟೆ ಬೀದಿಯಲ್ಲಿ ಜನ ಸಂಚಾರ ವಿರಳವಾಗಿತ್ತು.
ಪ್ರತಿಭಟನೆ: ಬಂದ್ ಹಿನ್ನೆಲೆಯಲ್ಲಿ ವಿವಿಧ ಪ್ರಗತಿ ಪರ ಸಂಘಟನೆಗಳ ಮುಖಂಡರು ಪಟ್ಟಣದ ಪ್ರವಾಸಿ ಮಂದಿರದಿಂದ ಬೈಕ್‌ಗಳ ಮೂಲಕ ಹೊರಟು ಪಟ್ಟಣದ ಪೇಟೆ ಬೀದಿ, ಶಿವಪುರದ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಸಂಚಾರ ನಡೆಸಿದ ನಂತರ ತಾಲೂಕು ಕಚೇರಿಗೆ ಆಗಮಿಸಿ ಗ್ರೇಡ್-2 ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.
ಕನ್ನಡ ಪರ ಹೋರಾಟಗಾರ ಮ.ನ.ಪ್ರಸನ್ನಕುಮಾರ್ ಮಾತನಾಡಿ, ಬೆಳಗಾವಿಯ ಸಣ್ಣ ಬಾಳೆಕುಂದ್ರಿ ಗ್ರಾಮದಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ನಿರ್ವಾಹಕ ಮಹದೇವ್ ಮೇಲೆ ನಡೆದ ಹಲ್ಲೆ ಖಂಡಿಸಿ ಮತ್ತು ರಾಜ್ಯದ ಗಡಿ ಭಾಗದಲ್ಲಿ ಕನ್ನಡಿಗರ ಮೇಲಿನ ದೌರ್ಜನ್ಯ ಖಂಡಿಸಿ ಬಂದ್‌ಗೆ ಕರೆ ನೀಡಲಾಗಿದೆ ಎಂದರು.
ಕನ್ನಡಿಗರ ಮೇಲೆ ಹಲ್ಲೆ ನಡೆಸಿದ ಮರಾಠಿಗರ ಮೇಲೆ ಗುಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು. ಕನ್ನಡಿಗರ ಮೇಲೆ ದೌರ್ಜನ್ಯಕ್ಕೆ ಕುಮ್ಮಕ್ಕು ನೀಡುತ್ತಿರುವ ಎಂಇಎಸ್ ಸಂಘಟನೆ ನಿಷೇಧಿಸಬೇಕು. ಕನ್ನಡಿಗರ ಹಿತ ರಕ್ಷಿಸಲು ಸರೋಜಿನಿ ಮಹಿಷಿ ವರದಿ ಜಾರಿಗೆ ತರಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ತೆಂಗು ಬೆಳೆಗಾರರ ಸಂಘದ ಅಧ್ಯಕ್ಷ ಚನ್ನಸಂದ್ರ ಲಕ್ಷ್ಮಣ್, ನಿವೃತ್ತ ಶಿಕ್ಷಕ ಚನ್ನಪ್ಪ, ಮುಖಂಡರಾದ ರಜನಿರಾಜ್, ನಳಿನಾ, ಮ.ನ.ಪ್ರಸನ್ನಕುಮಾರ್, ನ.ಲಿ.ಕೃಷ್ಣ, ದೇಶಹಳ್ಳಿ ಬೊರಣ್ಣ, ಗೊರವನಹಳ್ಳಿ ಪ್ರಸನ್ನ, ಅವಿನಾಶ್, ಗೋಪಾಲ್, ಪ್ರಸನ್ನ, ಅಂದಾನಿ, ಶಿವರಾಜು, ಲಿಂಗಯ್ಯ, ಶ್ರಿಧರ್, ಸಿದ್ದರಾಜು, ಚಂದ್ರು, ಶಿವಪ್ಪ, ಬಸವರಾಜ್, ರಾಜು, ಸತೀಶ್, ಸವಿತಾ ಇದ್ದರು.