ಹೊಣೆ ನಿಗದಿಗೆ ಸೋಷಿಯಲ್ ಇಂಜಿನಿಯರಿಂಗ್: ಬಿಜೆಪಿ ಜಿಲ್ಲಾ ಅಧ್ಯಕ್ಷರ ತಂಡ, ನಿಷ್ಠೆ-ಸಂಘ ಮಾನದಂಡ

Vijayendra
Published on

ಬೆಂಗಳೂರು: ಅಯೋಧ್ಯೆ ರಾಮಮಂದಿರ ಉದ್ಘಾಟನಾ ಪರ್ವ, ಪ್ರಧಾನಿ ನರೇಂದ್ರ ಮೋದಿ ಅಲೆಯ ವರ್ಚಸ್ಸಿನಿಂದ ಬಿಜೆಪಿ ಕಾರ್ಯಕರ್ತರಲ್ಲಿ ರಣೋತ್ಸಾಹ ಮೂಡಿದೆ. ಇದನ್ನು ಲೋಕಸಮರದ ಗೆಲುವಾಗಿ ಪರಿವರ್ತಿಸಲು ಬಯಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಜಿಲ್ಲಾ ನೂತನ ಅಧ್ಯಕ್ಷರ ಟೀಮ್ೆ ಹಲವು ಅಂಶ ಸಮೀಕರಿಸಿದ್ದಾರೆ.

ಲೋಕಸಭೆ ಚುನಾವಣೆ ಟಾಸ್ಕ್ ಅನ್ನು ಯಶೋಪಥದತ್ತ ಕೊಂಡೊಯ್ಯಲು 39 ಸಂಘಟನಾತ್ಮಕ ಜಿಲ್ಲಾ ಘಟಕಗಳ ಅಧ್ಯಕ್ಷರ ನೇಮಕಕ್ಕೆ ಸೋಷಿಯಲ್ ಇಂಜಿನಿಯರಿಂಗ್ ಸ್ಪರ್ಶ ನೀಡಿದ್ದಾರೆ. ಮಹತ್ವದ ಸವಾಲು ನಿಭಾಯಿಸುವ ನಿಟ್ಟಿನಲ್ಲಿ ಸಮರ್ಥ, ಸಮತೋಲಿತ ತಂಡವನ್ನು ಕಟ್ಟಲು ಪಕ್ಷದ ವಿಚಾರಧಾರೆ, ಸಿದ್ಧಾಂತದ ನೆಲೆಯ ಮೇಲೆ ಸಾಮಾಜಿಕ ನ್ಯಾಯಕ್ಕೂ ಪ್ರಾಶಸ್ಱ ನೀಡಿದ್ದಾರೆ. ಸಂಘಟನೆ ಬಲಪಡಿಸುವ ಸಾಮರ್ಥ್ಯ, ಸೇವಾನುಭವ, ಅತಿಯಾದ ಮಹತ್ವಾಕಾಂಕ್ಷೆ ಇಟ್ಟುಕೊಳ್ಳದೆ ಕೊಟ್ಟ ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸುವವರಿಗೆ ಆದ್ಯತೆ ನೀಡಿರುವುದು ಪಕ್ಷದ ದೃಷ್ಟಿಕೋನ. ಇದೇ ವೇಳೆ ಮುಂಬರುವ ಲೋಕಸಭೆ, ನಗರ-ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಾಮಾಜಿಕ ಸಮೀಕರಣ ರೂಪಿಸಲಾಗಿದೆ.

ಚುನಾವಣೆಗಳಲ್ಲಿ ನಿಗದಿತ ಗುರಿ ಸಾಧಿಸಲು ಎಲ್ಲ ಸಮುದಾಯಗಳ ವಿಶ್ವಾಸ ಗಳಿಸಿಕೊಳ್ಳುವುದು ಅಷ್ಟೇ ಮುಖ್ಯವಾಗಿದ್ದು, ಇದನ್ನೆಲ್ಲ ಗ್ರಹಿಸಿ ಮುಂದಾಳತ್ವದ ಹೊಣೆ ಒಪ್ಪಿಸಲಾಗಿದೆ. ಜಾತಿ-ವರ್ಗ, ಭವಿಷ್ಯದ ಅಭ್ಯರ್ಥಿಗಳ ಜತೆಗೆ ಸಂಪರ್ಕ ಮತ್ತು ಕಾರ್ಯಕರ್ತರೊಂದಿಗೆ ಸಂವಹನ ಕೌಶಲ ಇತ್ಯಾದಿ ಅಳತೆಗೋಲಿನ ಮೇಲೆ ಪ್ರಾತಿನಿಧ್ಯ ಕಲ್ಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಶಾಸಕರು, ಮಾಜಿ ಶಾಸಕರು

ಬೆಂಗಳೂರು ನಗರ ಜಿಲ್ಲೆ ಜಯನಗರ ಕ್ಷೇತ್ರದ ಶಾಸಕ ಸಿ.ಕೆ. ರಾಮಮೂರ್ತಿ, ರಾಯಚೂರು ನಗರ ಶಾಸಕ ಡಾ.ಶಿವರಾಜ ಪಾಟೀಲ್, ಮೂವರು ಮಾಜಿ ಶಾಸಕರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪರಾಜಿತರಿಗೂ ಜವಾಬ್ದಾರಿ ಹುಡುಕಿಕೊಂಡು ಬಂದಿದೆ. ಮುಂದಿನ ಕಾರ್ಯಯೋಜನೆಯನ್ನು ಸಮರ್ಪಕವಾಗಿ ನಿಭಾಯಿಸುತ್ತಾರೆ. ಆಕಾಂಕ್ಷಿಗಳ ಹೆಚ್ಚಿನ ಪೈಪೋಟಿ ತಪ್ಪಿಸಲು ಹಾಗೂ ಅನಗತ್ಯ ಗೊಂದಲ ನಿವಾರಣೆಯ ತಂತ್ರಗಾರಿಕೆಯಿದು ಎಂದು ಹೇಳಲಾಗುತ್ತಿದೆ. ಇಷ್ಟೆಲ್ಲ ಕಸರತ್ತು ನಡೆಸಿದರೂ ಎಲ್ಲರನ್ನೂ ತೃಪ್ತಿಪಡಿಸಲು ಸಾಧ್ಯವಿಲ್ಲ. ಜಿಲ್ಲಾ ಘಟಕದ ಸಾರಥ್ಯವಹಿಸಿದವರು ತಮ್ಮ ಅರ್ಹತೆ ಸಾಬೀತುಪಡಿಸಲಿದ್ದಾರೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ವಿಶ್ವಾಸ ವ್ಯಕ್ತಪಡಿಸಿದರು.

ಪೂರ್ಣ ಪ್ರಮಾಣದ ತಂಡ ಬಾಕಿ

ಕಾರ್ಯಕರ್ತರು, ಮುಖಂಡರಿಂದ ಮಾಹಿತಿ, ಆಕಾಂಕ್ಷಿಗಳ ನಿಲುವಿನ ಜಾಡುಹಿಡಿದು ಅಧ್ಯಕ್ಷರನ್ನು ನೇಮಿಸಿದ್ದಾರೆ. ಹೊಸ ಸಾರಥಿಗಳು ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಪೂರ್ಣ ಪ್ರಮಾಣದ ತಂಡ ಕಟ್ಟಿಕೊಳ್ಳುವುದಷ್ಟೇ ಬಾಕಿಯಿದೆ. ಪಕ್ಷದ ಸಿದ್ಧಾಂತ, ವಿಚಾರಧಾರೆ, ಸಂಘಟನೆಗೆ ನಿಷ್ಠೆ, ಸಂಘ-ಪರಿವಾರದ ನೆಲೆ, ಅನುಭವ ಮತ್ತು ಎಲ್ಲರನ್ನು ಒಟ್ಟಿಗೆ ಕೊಂಡೊಯ್ಯುವ ಮಾನದಂಡಗಳು ಅನ್ವಯವಾಗಿವೆ.

ಹಾಲಿಗಳಿಗೆ ಮತ್ತೊಮ್ಮೆ ಅವಕಾಶ

ಏಕಪಕ್ಷೀಯ ನಿರ್ಧಾರ, ಬೆಂಬಲಿಗರಿಗೆ ಮಣೆ ಹಾಕಲಾಗಿದೆ ಎನ್ನುವ ಅಪಸ್ವರ ವ್ಯಕ್ತವಾಗದಂತೆ ವಿಜಯೇಂದ್ರ ಎಚ್ಚರಿಕೆ ವಹಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಪಕ್ಷದ ಮೂಲಗಳು ವಿಶ್ಲೇಷಿಸಿವೆ. ಕಲಬುರಗಿ ಗ್ರಾಮಾಂತರ, ವಿಜಯಪುರ, ಬಾಗಲಕೋಟೆ, ವಿಜಯನಗರ, ಶಿವಮೊಗ್ಗ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಹಾಲಿ ಅಧ್ಯಕ್ಷರು ಮುಂದುವರಿದಿದ್ದಾರೆ. ಸಂಘದ ಸಲಹೆ ಸೂಚನೆ, ಹಿರಿಯ ಮಾರ್ಗದರ್ಶನಕ್ಕೆ ಪುರಸ್ಕಾರ. ಹಿಂದಿನವರ ಕಾರ್ಯವಿಧಾನ, ಮುಂದಿನ ಸವಾಲುಗಳನ್ನು ಪರಿಗಣಿಸಿ ಜಿಲ್ಲಾ ಘಟಕಗಳಿಗೆ ಅಧ್ಯಕ್ಷರನ್ನು ನೇಮಿಸಿದ್ದಾರೆ. ಹಾಲಿ ಅಧ್ಯಕ್ಷರ ಪೈಕಿ ಕ್ರಿಯಾಶೀಲತೆ, ಕಾರ್ಯಕರ್ತರ ಜತೆಗೆ ನಿಕಟತೆ, ಕಾರ್ಯತತ್ಪರತೆ, ಆಸಕ್ತಿಗೆ ಅನುಗುಣವಾಗಿ ಒಂಭತ್ತು ಹಳಬರು ಮತ್ತೊಮ್ಮೆ ಅವಕಾಶ ಪಡೆದಿದ್ದಾರೆ. ಆ ಮೂಲಕ ಸಂಘಟನೆ ಕಟ್ಟಿ ಬೆಳೆಸಲು ದುಡಿದವರಿಗೆ ತಕ್ಕ ಜವಾಬ್ದಾರಿ ಸಿಗಲಿದೆ. ಸಮರ್ಥರಿದ್ದರೂ ಕೈತಪ್ಪಿದ ಕೆಲವರಿಗೆ ಬೇರೊಂದು ಹೊಣೆ ನಿಭಾಯಿಸುವುದಿದೆ ಎಂಬ ಸಂದೇಶ ರವಾನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net