

ವಿಜಯವಾಣಿ ಸುದ್ದಿಜಾಲ ಹೆಬ್ರಿ
ನಮ್ಮ ಬದುಕಿನ ಜತೆಗೆ ಇತರರು ಬದುಕುವಂತೆ ಮಾಡಿದರೆ ನಮ್ಮ ಹೆಸರು ಶಾಶ್ವತವಾಗುತ್ತದೆ. ಅಂತಹ ಮಹತ್ವದ ಕೆಲಸ ಕರ್ಣಾಟಕ ಬ್ಯಾಂಕ್ ಮಾಡುತ್ತ ಬಂದಿರುವುದು ಶ್ಲಾಘನೀಯ ಎಂದು ಕಾಪು ಕ್ಷೇತ್ರದ ಕೆ.ಪಿ.ಕುಮಾರಗುರು ತಂತ್ರಿ ಹೇಳಿದರು.
ಕಡ್ತಲದ ಕುಂಜೆಕ್ಯಾರ್ ಕಾಂಪ್ಲೆಕ್ಸ್‌ನಲ್ಲಿ ಗುರುವಾರ ಕರ್ಣಾಟಕ ಬ್ಯಾಂಕ್ 956ನೇ ಶಾಖೆ ವಿತ್ತೀಯ ಸೇರ್ಪಡೆ-ಮಿನಿ ಇ ಲಾಬಿ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.
ಉಡುಪಿ ಪ್ರಾದೇಶಿಕ ಕಚೇರಿ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ವಾದಿರಾಜ ಕೆ. ಅಧ್ಯಕ್ಷತೆ ವಹಿಸಿ, ಅಂದು ವಕೀಲರು, ಕೃಷಿಕರು, ಜನಸಾಮಾನ್ಯರು ಸೇರಿ ಕಟ್ಟಿ ಬೆಳೆಸಿದ ಮುನ್ನಡೆಸಿದ ಕರ್ಣಾಟಕ ಬ್ಯಾಂಕ್ ಶತಮಾನೋತ್ತರ ಸಂಭ್ರಮದಲ್ಲಿ ದೇಶದಲ್ಲೇ ಎತ್ತರಕ್ಕೆ ಬೆಳೆದಿದೆ. ಬ್ಯಾಂಕ್‌ನ ಸಾಧನೆಗೆ ಪ್ರತಿಷ್ಠಿತ ಪ್ರಶಸ್ತಿ ಸಂದಿವೆ. ಈಗ ಬ್ಯಾಂಕ್ 1.77 ಸಾವಿರ ಕೋಟಿ ವ್ಯವಹಾರ ನಡೆಸುತ್ತಿದೆ. ಕಡ್ತಲ ಶಾಖೆ ಉನ್ನತಿಗೆ ಸರ್ವರೂ ಕೈಜೋಡಿಸಿ ಎಂದರು.
ಕೆ.ಪಿ.ಕುಮಾರಗುರು ತಂತ್ರಿ, ಕಟ್ಟಡ ಮಾಲೀಕರಾದ ಕಡ್ತಲ ಗ್ರಾಪಂ ಅಧ್ಯಕ್ಷ ಸುಕೇಶ ಹೆಗ್ಡೆ ದಂಪತಿಯನ್ನು ಗೌರವಿಸಲಾಯಿತು. ಎಳ್ಳಾರೆ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಯೋಗೀಶ ಮಲ್ಯ, ಕಡ್ತಲ ಸಿರಿಬೈಲು ಶ್ರೀ ಬರ್ಬರೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನ ಆಡಳಿತ ಮೊಕ್ತೇಸರ ಪ್ರಶಾಂತ್ ಬೆಳಿರಾಯ, ನಿವೃತ್ತ ಉಪನ್ಯಾಸಕ ಕಡ್ತಲ ಕರುಣಾಕರ ಹೆಗ್ಡೆ, ಕಡ್ತಲ ಶಾಖೆ ಬ್ರಾಂಚ್ ಮ್ಯಾನೇಜರ್ ವಿಜೇತ್ ರೈ ಪಿ, ಬ್ಯಾಂಕ್‌ನ ವಿವಿಧ ಅಧಿಕಾರಿಗಳು, ಸ್ಥಳೀಯ ಪ್ರಮುಖರು ಭಾಗವಹಿಸಿದ್ದರು. ಪ್ರಾದೇಶಿಕ ಕಚೇರಿ ವಾದಿರಾಜ್ ಸ್ವಾಗತಿಸಿದರು. ರಾಘವೇಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.