

Karnataka 2nd PUC Result 2025 : ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಇಂದು (ಏಪ್ರಿಲ್ 08) ಮಧ್ಯಾಹ್ನ 12.50ಕ್ಕೆ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಿದ್ದು, ಫಲಿತಾಂಶವನ್ನು ಮಂಡಳಿಯ ವೆಬ್‌ಸೈಟ್ http//karresults.nic.in ನಲ್ಲಿ ವೀಕ್ಷಿಸಬಹುದಾಗಿದೆ.
ದ್ವಿತೀಯ ಪಿಯು ಫಲಿತಾಂಶದಲ್ಲಿ ಶೇ. 93.90 ಫಲಿತಾಂಶದೊಂದಿಗೆ ಉಡುಪಿ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದರೆ, ಯಾದಿಗಿರಿ ಜಿಲ್ಲೆ ಶೇ 48.45 ಫಲಿತಾಂಶದೊಂದಿಗೆ ಕೊನೆಯ ಸ್ಥಾನ ಪಡೆದಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಇಂದಿನ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.
ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 6,37,805 ವಿದ್ಯಾರ್ಥಿಗಳ ಪೈಕಿ 4,68,439 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿ ಶೇ. 73.45 ರಷ್ಟು ಫಲಿತಾಂಶ ಬಂದಿದ್ದು, ಕಳೆದ ವರ್ಷಕ್ಕಿಂತ ಶೇ.7 ಫಲಿತಾಂಶ ಕುಸಿತಕಂಡಿದೆ.
ಕಲಾ ವಿಭಾಗದಲ್ಲಿ ಸಂಜನಾ ಬಾಯಿ ರಾಜ್ಯಕ್ಕೆ ಪ್ರಥಮ ಪಡೆದಿದ್ದಾರೆ. ಸಂಜನಾ 600ಕ್ಕೆ 597 ಅಂಕಗಳನ್ನು ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಅಮೂಲ್ಯ ಕಾಮತ್ ಮೊದಲ ಸ್ಥಾನ ಪಡೆದರೆ, ಕಾಮರ್ಸ್ ವಿಭಾಗದಲ್ಲಿ ದಕ್ಷಿಣ ಕನ್ನಡದ ಕೆನಾರ ಪಿಯು ಕಾಲೇಜು ವಿದ್ಯಾರ್ಥಿನಿ ದೀಪಶ್ರೀ ಮೊದಲ ರಾಂಕ್ ಗಳಿಸಿದ್ದಾರೆ.
ಶಿಕ್ಷಣ ಇಲಾಖೆಯ ಮಹತ್ವದ ಹೆಜ್ಜೆ
ಈ ಸಲ ಎರಡನೇ ಮತ್ತು 3ನೇ ಪರೀಕ್ಷೆಗೆ ಯಾವುದೇ ಪರೀಕ್ಷಾ ಶುಲ್ಕ ಇರುವುದಿಲ್ಲ. ಇದು ಶಿಕ್ಷಣ ಇಲಾಖೆಯ ಮಹತ್ವದ ಹೆಜ್ಜೆ ಎಂದು ಸಚಿವ ಮಧು ಬಂಗಾರಪ್ಪ ಇದೇ ಸಂದರ್ಭದಲ್ಲಿ ಘೋಷಣೆ ಮಾಡಿದರು. ಅಲ್ಲದೆ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಂಜೆ ಸಮಯ ವಿಶೇಷ ತರಗತಿ ನಡೆಸಲು ಮಾಹಿತಿ ಕೊಟ್ಟಿದ್ದೇವೆ ಎಂದರು. ಯಾರು ಪಾಸ್ ಆಗಿಲ್ಲವೂ ಅಂತಹವರಿಗೆ ಇನ್ನು ಎರಡು ಅವಕಾಶ ಇದೆ ಎಂದು ತಿಳಿಸಿದರು.