ಭಜನೆಯಿಂದ ಮೂಡುತ್ತದೆ ಉತ್ತಮ ಸಂಸ್ಕಾರ

edaneeru
ಕಾರ್ಮಾರು ಕ್ಷೇತ್ರದ ಮಂಡಲ ಭಜನಾ ಕಾರ್ಯಕ್ರಮದ ಸಮಾರೋಪದಲ್ಲಿ ಎಡನೀರು ಶ್ರೀಗಳು ಆಶೀರ್ವಚನ ನೀಡಿದರು. ಚಿನ್ಮಯ ಮಿಷನ್‌ನ ಅಧ್ಯಕ್ಷ ಶ್ರೀವಿವಿಕ್ತಾನಂದ ಸರಸ್ವತಿ ಸ್ವಾಮೀಜಿ ಹಾಗೂ ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಬದಿಯಡ್ಕ

ಭಜನೆಯು ಜನರಲ್ಲಿ ಸಂಸ್ಕಾರವನ್ನು ಮೂಡಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಭಜನೆಯೊಂದಿಗೆ ಭಗವಂತನ ನಾಮಸ್ಮರಣೆ ಮಾಡುವ ಮೂಲಕ ಎಲ್ಲರೂ ಸನ್ಮಾರ್ಗದಲ್ಲಿ ಮುಂದುವರಿಯುತ್ತಾರೆ. ಮಂಡಲ ಭಜನೆ ಭಕ್ತಾದಿಗಳನ್ನು ಒಗ್ಗೂಡಿಸಿಕೊಂಡು ಜೀರ್ಣೋದ್ಧಾರ ಕೆಲಸ ಕಾರ್ಯಗಳನ್ನು ಮುಂದುವರಿಸುವಲ್ಲಿ ಸಹಕಾರಿಯಾಗಿದೆ. ಜೀರ್ಣೋದ್ಧಾರ ಕಾರ್ಯಗಳು ಶೀಘ್ರ ಪೂರ್ಣಗೊಂಡು ದೇವರನ್ನು ಮೂಲಾಲಯದಲ್ಲಿ ಪ್ರತಿಷ್ಠಾಪಿಸಿ ಬ್ರಹ್ಮಕಲಶೋತ್ಸವವನ್ನು ಕಣ್ತುಂಬಿಕೊಳ್ಳುವ ಭಾಗ್ಯ ಒದಗಿ ಬರಲಿದೆ ಎಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.

ಜೀರ್ಣೋದ್ಧಾರಗೊಳ್ಳುತ್ತಿರುವ ಮಾನ್ಯ ಸಮೀಪದ ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ಮಾರ್ಚ್ 8 ಶಿವರಾತ್ರಿಯ ದಿನದಂದು ಏಕಾಹ ಭಜನಾ ಕಾರ್ಯಕ್ರಮದ ಮೂಲಕ ಆರಂಭಗೊಂಡ 48 ದಿನಗಳ ಮಂಡಲ ಭಜನೋತ್ಸವದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಚಿನ್ಮಯ ಮಿಷನ್‌ನ ಅಧ್ಯಕ್ಷ ಶ್ರೀವಿವಿಕ್ತಾನಂದ ಸರಸ್ವತಿ ಸ್ವಾಮೀಜಿ ಹಾಗೂ ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನವಿತ್ತರು. ಜೀರ್ಣೋದ್ಧಾರ ಸಮಿತಿಯ ರಕ್ಷಾಧಿಕಾರಿ ಉದ್ಯಮಿ ಗೋಪಾಲಕೃಷ್ಣ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಪಶುವೈದ್ಯ ಡಾ.ಕೆ.ಜಿ.ಮನೋಹರ್ ರಾವ್, ವಿದುಷಿ ವಿದ್ಯಾಲಕ್ಷ್ಮೀ ಕುಂಬಳೆ ಶುಭ ಹಾರೈಸಿದರು. ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಮಹೇಶ್ ವಳಕುಂಜ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಯುವಕ ವೃಂದದ ಅಧ್ಯಕ್ಷ ವಿಜಯ ಕುಮಾರ್ ಮಾನ್ಯ ವಂದಿಸಿ, ಸುಂದರ ಶೆಟ್ಟಿ ಕೊಲ್ಲಂಗಾನ ನಿರೂಪಿಸಿದರು.

ಸಾಹಿತಿ ಉದನೇಶ್ವರ ಪ್ರಸಾದ್ ಮೂಲಡ್ಕ ರಚಿಸಿ, ವಿದುಷಿ ಭಾಗ್ಯಶ್ರೀ ಮುಳ್ಳೇರಿಯ ಹಾಡಿರುವ ಕಾರ್ಮಾರು ಕ್ಷೇತ್ರದ ಅಲಂಕಾರಪ್ರಿಯ ಎನ್ನುವ ಭಕ್ತಿಗೀತೆಯನ್ನು ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಲೋಕಾರ್ಪಣೆಗೊಳಿಸಿದರು. ಲಕ್ಷ್ಮೀಗಣೇಶ್ ಕುಣಿತ ಭಜನಾ ಸಂಘ ಬದಿಯಡ್ಕ ಹಾಗೂ ಕಾರ್ಮಾರು ಭಕ್ತ ವೃಂದದವರ ಭಜನಾ ಕಾರ್ಯಕ್ರಮದೊಂದಿಗೆ 48 ದಿನಗಳ ಮಂಡಲ ಭಜನೋತ್ಸವ ಕಾರ್ಯಕ್ರಮ ಸಂಪನ್ನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net