More

    ಬಿಸಿಲಿನ ಕಾವು ಏರಿದರೂ ಕುಗ್ಗದ ಜನೋತ್ಸಾಹ

    ಉಪ್ಪಿನಂಗಡಿ: ಈ ಭಾಗದಲ್ಲಿ ಮತದಾನ ಶಾಂತಿಯುತವಾಗಿ ನಡೆದಿದ್ದು, ಕೆಲವು ಮತಗಟ್ಟೆಗಳಲ್ಲಿ ಮತದಾರರು ಸರತಿಯಲ್ಲಿ ನಿಂತು ಮತ ಚಲಾಯಿಸಿದರೆ, ಇನ್ನು ಕೆಲವಡೆ ನಿಧಾನಗತಿಯಲ್ಲಿ ಆಗಮಿಸಿ, ಮತ ಚಲಾವಣೆ ಮಾಡಿ ಹೋಗುವುದು ಕಂಡು ಬಂತು.

    ಕೌಕ್ರಾಡಿಯ ಮತಗಟ್ಟೆಯಲ್ಲಿ ಮತಗಟ್ಟೆ ಅಧಿಕಾರಿಗಳು ದಾಖಲೆ ಪರಿಶೀಲಿಸುವಾಗ ವಿಳಂಬವಾಗುತ್ತಿದೆ ಎಂಬ ಆರೋಪ ಕೇಳಿಬಂತು. ಇಳಂತಿಲ ಗ್ರಾಮದ ಅಂಡೆತ್ತಡ್ಕದ ಮತಗಟ್ಟೆಯಲ್ಲಿ ಬೆಳಗ್ಗೆ 7ರಿಂದ 8.30ರವರೆಗೆ ನಿಧಾನಗತಿಯಲ್ಲಿ ನಡೆದಿದ್ದು ಮತಗಟ್ಟೆ ಅಧಿಕಾರಿ ಮಂದದೃಷ್ಟಿಯಿಂದಾಗಿ ಮತದಾರರ ಸೀರಿಯಲ್ ನಂಬರ್ ತಾಳೆ ಮಾಡಲು ಕಷ್ಟಪಡುತ್ತಿರುವುದು ಕಂಡುಬಂತು. ಬಳಿಕ ಮತದಾರರೇ ಸೀರಿಯಲ್ ನಂಬರ್ ಓದಿ ಹೇಳಿದ್ದು ಪ್ರಕ್ರಿಯೆ ವೇಗ ಪಡೆಯಿತು.

    ಪುಳಿತ್ತಡಿಯ ಬೂತ್ ಸಂಖ್ಯೆ 40ರಲ್ಲಿ ಬೆಳಗ್ಗೆ ನಿಧಾನಗತಿಯಲ್ಲಿ ನಡೆದಿದ್ದು ಸುಮಾರು ಒಂದೂವರೆ ಗಂಟೆಗಳಷ್ಟು ಹೊತ್ತು ಕಾಯುವಂತಹ ಪರಿಸ್ಥಿತಿ ಎದುರಾಗಿತ್ತು. ಈ ಬಗ್ಗೆ ಚುನಾವಣಾಧಿಕಾರಿಗಳಿಗೆ ಮೌಖಿಕವಾಗಿ ದೂರು ನೀಡಿದ ಬಳಿಕ ಮತಗಟ್ಟೆ ಅಧಿಕಾರಿಗಳು ಮತದಾನದ ಪ್ರಕ್ರಿಯೆಗೆ ವೇಗ ನೀಡಿದರು. ಹೆಚ್ಚಿನ ಮತಗಟ್ಟೆಗಳಲ್ಲಿ ಬೆಳಗ್ಗೆ ಉದ್ದದ ಸಾಲುಗಳು ಕಂಡು ಬಂದವು.

    ನಕ್ಸಲ್ ಪೀಡಿತ ಪ್ರದೇಶವಾದ ಕಡಬ ತಾಲೂಕು ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಿರಾಡಿಯ ಮತಗಟ್ಟೆ ಸಂಖ್ಯೆ 34ರಲ್ಲಿ ಹಾಗೂ ಅಡ್ಡಹೊಳೆಯ ಮತಗಟ್ಟೆ ಸಂಖ್ಯೆ 35ರಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ ಕಮಾಂಡೋಗಳು ವಿಶೇಷ ಭದ್ರತೆ ಒದಗಿಸಿದರು. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನು ಗೆಲ್ಲಿಸುವುದಕ್ಕಾಗಿ ಬಿಜೆಪಿಯ ಮಹಿಳಾ ಕಾರ್ಯಕರ್ತರು ಪ್ರತಿ ಬೂತ್‌ನ ಪ್ರತಿ ಮತಗಟ್ಟೆಯಲ್ಲಿ 9 ಮಂದಿ ಮಹಿಳೆಯರು ಮೊದಲಾಗಿ ಮತದಾನ ಮಾಡಿ ನವದುರ್ಗೆಯರಂತೆ ಮೋದಿ ಅವರಿಗೆ ಆಶೀರ್ವಾದ ಮಾಡುವ ಸಂಕಲ್ಪ ತೊಟ್ಟಿದ್ದು, ಅದರಂತೆ ಉಪ್ಪಿನಂಗಡಿಯ ಮತಗಟ್ಟೆ ಸಂಖ್ಯೆ 37 ಮತ್ತು 38ರಲ್ಲಿ ತಲಾ 9ರಂತೆ 18 ಮಹಿಳೆಯರು ಮತದಾನ ಮಾಡಿದರು.

    ಎಂಡೋಪೀಡಿತರ ಸಹಾಯಕರಿಗೆ ತಡೆ

    ಎಂಡೋ ಸಂತ್ರಸ್ತೆ ಉಮಾವತಿ ಎಂಬುವರನ್ನು ಸಂಬಂಧಿ ಮಹಿಳೆ ಬಜತ್ತೂರು ಗ್ರಾಮದ ಹೊಸಗದ್ದೆ ಮತಗಟ್ಟೆಗೆ ಕರೆದುಕೊಂಡು ಬಂದಿದ್ದರು. ಮತಗಟ್ಟೆ ಅಧಿಕಾರಿ ಉಮಾವತಿಯವರಲ್ಲೇ ಮತ ಹಾಕಿಸಿದ್ದಾರೆ. ಯಾವುದು ಪಕ್ಷ ಯಾವುದು ಚಿಹ್ನೆ ಎಂಬ ಅರಿವಿಲ್ಲದ ಎಂಡೋ ಸಂತ್ರಸ್ತೆಗೆ ಸಹಾಯಕಳಾಗಲು ತನಗೆ ಅವಕಾಶ ನಿರಾಕರಿಸಲಾಯಿತ್ತೆಂದು ಮಹಿಳೆ ದೂರಿದ್ದಾರೆ. ಪ್ರಕರಣವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ ಪರಿಶೀಲಿಸುವ ಭರವಸೆ ನೀಡಿದರು.

    ವೋಟಿಂಗ್‌ಗೆ ಮಾತ್ರ ತೆರೆಯುವ ಶಾಲೆ

    ಶಿರಾಡಿಯ ದಕ್ಷಿಣ ಕನ್ನಡ ಜಿಪಂ ಹಿರಿಯ ಪ್ರಾಥಮಿಕ ಶಾಲೆಯನ್ನು ವಿದ್ಯಾರ್ಥಿಗಳ ಕೊರತೆಯಿಂದ ವರ್ಷಗಳಿಂದ ಮುಚ್ಚಲಾಗಿದ್ದು, ಸಂಖ್ಯೆ 34ರ ಮತಗಟ್ಟೆ ಇಲ್ಲಿ ಬರುತ್ತದೆ. ಈ ಮತಗಟ್ಟೆ ನಕ್ಸಲ್ ಪೀಡಿತ ಪ್ರದೇಶದಲ್ಲಿದೆ. ಮತದಾನದ ಸಂದರ್ಭ ಮಾತ್ರ ಈ ಶಾಲೆಯನ್ನು ತೆರೆದು ಮತದಾನ ನಡೆಸಲಾಗುತ್ತಿದ್ದು ಬಳಿಕ ಮುಚ್ಚಲಾಗುವುದರಿಂದ ಈ ಶಾಲೆ ಮತ್ತು ಆವರಣದಲ್ಲಿ ಸ್ಮಶಾನ ಮೌನ ಗೋಚರಿಸುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts