

ಹಾವೇರಿ: ಮಹಿಳೆಯರ ಹಬ್ಬವೆಂದೇ ಪರಿಗಣಿತವಾಗಿರುವ ಗೌರಿ ಹುಣ್ಣಿಮೆಯನ್ನು ತಾಲೂಕಿನ ಕರ್ಜಗಿಯ ಗೌರಿಮಠದಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ.
ಮಠದಲ್ಲಿ ವಿಶೇಷವಾಗಿ ಗೌರಿ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಗ್ರಾಮದ ಮಹಿಳೆಯರು ಸಕ್ಕರೆ ಆರತಿ (ಗೊಂಬೆ) ಗಳೊಂದಿಗೆ ಬಂದು ‘ಗೌರಿ ಗೌರಿ ಅಂತ, ಗಣಪತಿ ಅಂತ, ಮುತ್ತಿನ ಬುಗಡೆಂತ, ಛತ್ತರಗೊಂಬೆಂತ, ಹೋಗಿ ಬಾ ಗೌರಿ, ಸಾಗಿ ಬಾ ಗೌರಿ..’ ಎನ್ನುವ ಹಾಡು ಹಾಡುತ್ತ ಗೌರಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ನಂತರ ಕೋಲಾಟ ಆಡಿ ರಂಜಿಸುತ್ತಾರೆ.
ಹಬ್ಬದ ಹಿನ್ನೆಲೆ: ಗ್ರಾಮದ ಹಿರೇಮಠದಲ್ಲಿ ಹುತ್ತವೊಂದು ಬೆಳೆಯುತ್ತಿತ್ತು. ಹುತ್ತ ಬೆಳೆದಂತೆ ಮೂಲ ಕರ್ತೃ ಗದಿಗೆಪ್ಪ ಶಿವಾಚಾರ್ಯರ ಶಿಷ್ಯರು ಕತ್ತರಿಸಿ ಹಾಕುತ್ತಿದ್ದರು. ಆದರೂ ಹತ್ತ ಮತ್ತೆ ಬೆಳೆಯುತ್ತಿತ್ತು. ಶ್ರೀಗಳು ಇಷ್ಟಲಿಂಗವನ್ನು ಪೂಜಿಸುವ ವೇಳೆ ಗೌರಿದೇವಿಯು ಕಾಣಿಸಿಕೊಂಡು ‘ಹುತ್ತದಲ್ಲಿ ನಾನು ನೆಲೆಸಿರುವೆ’ ಎಂದು ತಿಳಿಸುತ್ತಾಳೆ. ಆಗ ಹುತ್ತ ಕತ್ತರಿಸುವದನ್ನು ನಿಲ್ಲಿಸಿ ಗೌರಿದೇವಿಯನ್ನು ಪ್ರತಿಷ್ಠಾಪಿಸಲಾಯಿತು. ಅಂದಿನಿಂದ ಹಿರೇಮಠವು ಗೌರಿಮಠವೆಂದು ಹೆಸರಾಗಿದೆ. ಕಾರ್ತಿಕ ಮಾಸದಲ್ಲಿ ಬರುವ ಗೌರಿ ಹುಣ್ಣಿಮೆಯಂದು ಕರ್ಜಗಿ ಗೌರಿಮಠದಲ್ಲಿ ಪ್ರತಿಷ್ಠಾಪಿಸಲಾದ ಗೌರಿಮೂರ್ತಿಗೆ ಬಗೆಬಗೆಯ ಹೂ ವಸ್ತ್ರ ವಿನ್ಯಾಸಗಳಿಂದ ಸಿಂಗರಿಸಲಾಗುತ್ತದೆ. ಮಹಿಳೆಯರು ಬದುಕಿನ ಶ್ರೇಯೋಭಿವೃದ್ಧಿಗೆ, ಮಕ್ಕಳ ಭಾಗ್ಯಕ್ಕೆ, ಸಂಸಾರಿಕ ಸಮಸ್ಯೆ ಪರಿಹಾರಕ್ಕೆ ಗೌರಿಯಲ್ಲಿ ಬೇಡಿಕೊಳ್ಳುತ್ತಾರೆ ಎಂದು ಮಠದ ಪೀಠಾಧಿಪತಿ ಶಿವಯೋಗಿ ಶಿವಾಚಾರ್ಯರು ಹೇಳುತ್ತಾರೆ.
ಸ್ತ್ರೀ ಪೂಜ್ಯನೀಯ ಮಠಶ್ರೀಮಠದ ಹೆಸರೇ ಹೇಳುವಂತೆ ಇದು ಪರಶಿವನ ಸತಿ ಗೌರಿಯು ನೆಲೆಸಿರುವ ಶಕ್ತಿ ಮಠವಾಗಿದೆ. ಇಲ್ಲಿ ಪ್ರತಿವರ್ಷ ಶ್ರಾವಣ ಮಾಸದ ಶಿವಪೂಜಾನುಷ್ಠಾನ ಜರುಗುತ್ತದೆ. ಶ್ರೀಗಳ ಇಷ್ಟಲಿಂಗ ಮತ್ತು ಗೌರಿಮಾತೆ ಮತ್ತು ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಶಿವಾಷ್ಟೋತ್ತರ, ಬಿಲ್ವಾರ್ಚನೆ ಮಹಾಮಂಗಳಾರತಿ, ಆಶೀರ್ವಚನ ಜರುಗುತ್ತದೆ. ಮುತೆôದೆಯರಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ಮಠವು ನಡೆಸಿಕೊಡುತ್ತದೆ. ದೇವಿಯೇ ಮಠದ ಶಕ್ತಿಯಾಗಿದ್ದರಿಂದ ಇಲ್ಲಿ ಸ್ತ್ರೀ ಗೆ ಪೂಜ್ಯನೀಯ ಸ್ಥಾನವಿದೆ.| ಪ್ರಸನ್ನಕುಮಾರ ಸಜ್ಜನಶೆಟ್ರ, ಸ್ಥಳೀಯ ನಿವಾಸಿ