

ಅರಕಲಗೂಡು: ಪಟ್ಟಣದಲ್ಲಿ ನಿವೃತ್ತ ಹಾಗೂ ಹಾಲಿ ಸೈನಿಕರ ಸಂಘ, ರೋಟರಿ ಕ್ಲಬ್, ವಾರಿಯರ್ಸ್ ಅಕಾಡೆಮಿ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಶುಕ್ರವಾರ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು.
ಕೋಟೆ ಕೊತ್ತಲು ಗಣಪತಿ ದೇವಸ್ಥಾನದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಿವೃತ್ತ ಕಮಾಂಡರ್ ಚಂದ್ರಶೇಖರ್ ಮಾತನಾಡಿ, ಯುದ್ಧ ಯಾರಿಗೂ ಒಳ್ಳೆಯದಲ್ಲ. ಎರಡೂ ಕಡೆ ಸಾವು-ನೋವು, ಆಸ್ತಿ ಹಾನಿ ಯಾಗುವುದರ ಜತೆಗೆ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿಯೂ ತುಂಬಲಾರದ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಭಾರತ ಶಾಂತಿಪ್ರಿಯ ರಾಷ್ಟ್ರ. ಆದರೆ ಕಾರ್ಗಿಲ್ ಯುದ್ಧ ಪಾಕಿಸ್ತಾನದ ದುರಾಕ್ರಮಣದ ವಿರುದ್ಧ ಅನಿವಾರ್ಯವಾಗಿತ್ತು. 83 ದಿನಗಳ ಕಾಲ ನಡೆದ ಯುದ್ಧದಲ್ಲಿ ದೇಶದ 527 ಜನ ಸೈನಿಕರು ಹುತಾತ್ಮರಾದರು. ಇವರ ತ್ಯಾಗ, ಬಲಿದಾನದಿಂದ ಯುದ್ಧದಲ್ಲಿ ಗೆಲವು ಸಾಧಿಸಲು ಸಾಧ್ಯವಾಯಿತು ಎಂದು ಹೇಳಿದರು.
ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ್ ಮಾತನಾಡಿ, ಪರಕೀಯರ ದಾಳಿಯಿಂದ ದೇಶದ ರಕ್ಷಣೆ ಮಾಡಿದ ಸೈನಿಕರ ತ್ಯಾಗ ಹಾಗೂ ದೇಶ ಪ್ರೇಮವನ್ನು ಸ್ಮರಿಸಿ ಅವರಿಗೆ ಗೌರವ ಸಲ್ಲಿಸೋಣ ಎಂದರು.
ಕೋಟೆ ಗಣಪತಿ ಕೊತ್ತಲು ಉದ್ಯಾನದಿಂದ ಮೆರವಣಿಗೆಯಲ್ಲಿ ತೆರಳಿ ಅನಕೃ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ದೇಶದ ಪರ ಜಯಘೋಷ ಮೊಳಗಿಸಲಾಯಿತು. ಬಳಿಕ ಸ್ವಸ್ಥಾನಕ್ಕೆ ಮರಳಿ ಅಮರ್ ಜವಾನ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ವಿದ್ಯಾರ್ಥಿಗಳಿಗೆ ಸ್ಥಳದಲ್ಲೆ ರಸಪ್ರಶ್ನೆ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಲಾಯಿತು. ಸೈನಿಕರ ಸಂಘದ ಅಧ್ಯಕ್ಷ ಶಿವೇಗೌಡ, ಕಾರ್ಯದರ್ಶಿ ಅರುಣ್ ಕುಮಾರ್, ನಿವೃತ್ತ ಸೈನಿಕರಾದ ಮಂಜುನಾಥ್, ಹರೀಶ್ ಕುಮಾರ್, ಚೇತನ್ ಕುಮಾರ್, ಪಪಂ ಸದಸ್ಯ ರಮೇಶ್ ವಾಟಾಳ್, ಮುಖಂಡ ಚಂದ್ರಶೇಖರ್ ಇತರರಿದ್ದರು.