

ಬೆಂಗಳೂರು: ಹುತಾತ್ಮ ಯೋಧರ ತ್ಯಾಗ- ಬಲಿದಾನಗಳ ಸ್ಮರಣಾರ್ಥ ನಗರದ ರಾಷ್ಟ್ರೀಯ ಸೈನಿಕ ಸ್ಮಾರಕದಲ್ಲಿ 75 ಅಡಿ ಎತ್ತರದ 700 ಟನ್ ತೂಕದ ಏಕಶಿಲೆಯ ಬೃಹತ್ ‘ವೀರಗಲ್ಲು’ ಸ್ತಂಭ ಸ್ಥಾಪಿಸಿದ್ದು, 26ನೇ ವರ್ಷದ ‘ಕಾರ್ಗಿಲ್ ವಿಜಯ ದಿವಸ’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಲೋಕಾರ್ಪಣೆಗೊಳಿಸಿದರು.
ಸೈನಿಕ ಮತ್ತು ಪುನರ್ವಸತಿ ಇಲಾಖೆ ಹಾಗೂ ರಾಷ್ಟ್ರೀಯ ಸೈನಿಕ್ ಸ್ಮಾರಕ ಮ್ಯಾನೇಜ್‌ಮೆಂಟ್ ಟ್ರಸ್ಟ್ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ದೇಶಕ್ಕಾಗಿ ಹುತಾತ್ಮರಾದ ಯೋಧರ ಗೌರವಾರ್ಥ ಸೈನಿಕ ಸ್ಮಾರಕ ಹಾಗೂ ಬೃಹತ್ ‘ವೀರಗಲ್ಲು’ ನಿರ್ಮಿಸಿರುವ ಏಕೈಕ ರಾಜ್ಯ ಕರ್ನಾಟಕ. ಭಾರತೀಯ ಸೇನೆಯ ವೀರರಂತೆಯೇ ಅಚಲ, ದೃಢ, ಅಮರ ಮತ್ತು ಎಲ್ಲ ನೈಸರ್ಗಿಕ ತಾಪಗಳನ್ನು ತಡೆದುಕೊಳ್ಳಬಲ್ಲ ಈ ಬೃಹತ್ ಏಕಶಿಲೆಯ ಸ್ತಂಭವನ್ನು ಸಿದ್ಧಪಡಿಸಿದ ಶಿಲ್ಪಿ ಅಶೋಕ್ ಗುಡಿಗಾರ್ ಮತ್ತು ಮಾಜಿ ಸೇನಾಧಿಕಾರಿ ಏರ್ ಕಮೊಡೊರ್ ಎಂ.ಕೆ.ಚಂದ್ರಶೇಖರ್ ಅವರನ್ನು ಸಿಎಂ ಅಭಿನಂದಿಸಿದರು.
ಗೃಹ ಸಚಿವ ಡಾ.ಜಿ. ಪರಮೇಶ್ವರ್, ವಸತಿ ಮತ್ತು ವಕ್ಫ್, ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಮತ್ತು ನಿರೀಕ್ಷಕ ಡಾ.ಎಂ.ಎ. ಸಲೀಂ, ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ತುಷಾರ್ ಗಿರಿನಾಥ್, ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ನಮನ ಸಲ್ಲಿಸಿದ ವಿದ್ಯಾರ್ಥಿಗಳು:
ಸಮಾರಂಭದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಮಾಜಿ ಯೋಧರು, ಸ್ಥಳೀಯ ನಾಗರಿಕರು ಪಾಲ್ಗೊಂಡು ವೀರಯೋಧರ ಸ್ಮರಣಾರ್ಥ ಸ್ಥಾಪನೆಯಾಗಿರುವ ವೀರಗಲ್ಲಿಗೆ ನಮನ ಸಲ್ಲಿಸಿದರು. ಇದೇ ವೇಳೆ ವಿದ್ಯಾರ್ಥಿಗಳು ಕರ್ನಾಟಕ ಮತ್ತು ಕೇರಳ ಉಪ ವಲಯ ಮೇಜರ್ ಜನರಲ್ ವಿಟಿ ಮ್ಯಾಥ್ಯೂ ಅವರಿಗೆ ವೀರ ಸೈನಿಕರೊಂದಿಗೆ ಒಗ್ಗಟ್ಟು ಪ್ರದರ್ಶಿಸುವ ಕೈಬರಹದ ಪತ್ರಗಳನ್ನು ಹಸ್ತಾಂತರಿಸಿದರು.
ಕೋಟ್:
ದೇಶದ ಹಾಗೂ ಜನರ ರಕ್ಷಣೆಗಾಗಿ ಭಾರತೀಯ ಯೋಧರು ತಮ್ಮ ಜೀವವನ್ನೇ ಮುಡಿಪಾಗಿಟ್ಟಿದ್ದಾರೆ. ಈ ವೀರಗಲ್ಲು ದೇಶದ ವೀರರನ್ನು ಪ್ರತಿನಿಧಿಸುತ್ತದೆ. ಯಾವುದೇ ಯುದ್ಧವಿರಲಿ, ಅದರಲ್ಲಿ ಹುತಾತ್ಮರಾದವರ ಸ್ಮರಣೆ ನಮ್ಮೆಲ್ಲರ ಕರ್ತವ್ಯ. ನಮಗಾಗಿ ಜೀವಿಸಿ, ಮರಣ ಹೊಂದಿದ ವೀರರನ್ನು ನೋಡಲು ಸಾಧ್ಯವಿಲ್ಲ. ಆದರೆ ಈ ರೀತಿಯ ವೀರಗಲ್ಲು ಹಾಗೂ ಸ್ಮಾರಕಗಳ ನಿರ್ಮಾಣದಿಂದ ನಮ್ಮ ನಡುವೆ ಅವರನ್ನು ಸದಾ ಜೀವಂತವಾಗಿಸಬಹುದಾಗಿದೆ. ಅವರ ತ್ಯಾಗ- ಬಲಿದಾನವನ್ನು ಮುಂದಿನ ಪೀಳಿಗೆಗೆ ತಿಳಿಸಲು ಈ ವೀರಗಲ್ಲು ಸಾಕ್ಷಿಯಾಗಲಿದೆ.
-ಎಂ.ಕೆ. ಚಂದ್ರಶೇಖರ್, ಮಾಜಿ ಸೇನಾಧಿಕಾರಿ