

ಕುರುಬ ಸಮುದಾಯವೇ ಹೆಚ್ಚು ವಾಸಿಸುತ್ತಿದ್ದ ಗ್ರಾಮ
ಕುಂತಿದೇವಿ ಆರಾಧ್ಯ ದೈವ
ಚೇತನ್ ಚಕ್ಕೆರೆ ಬಿಡದಿ
ಒಂದು ಗ್ರಾಮ ಇದೆ ಎಂದ ಮೇಲೆ ಆ ಗ್ರಾಮಕ್ಕೊಂದು ಇತಿಹಾಸ ಇದ್ದೆ ಇರುತ್ತದೆ. ಆ ಗ್ರಾಮದಲ್ಲಿ ನಡೆದಿರುವ ಘಟನೆಯ ಆಧಾರದಲ್ಲೇ ಹೆಸರು ನಾಮಕರಣವಾಗಿರುತ್ತದೆ. ಅದೇ ರೀತಿ ಬಿಡದಿಯ ಕುರುಬರ ಕರೇನಹಳ್ಳಿ ಗ್ರಾಮದ ಉದಯದ ಹಿಂದೆ ರೋಚಕ ಕಥೆ ಇದೆ.
ನೂರಾರು ವರ್ಷಗಳಿಂದ ಕರೇನಹಳ್ಳಿ ಗ್ರಾಮ ಇದ್ದು, ಇದರ ಇತಿಹಾಸವೆ ರೋಚಕವಾಗಿದೆ. ಕರೇನಹಳ್ಳಿ ಕಾಲಕ್ರಮೇಣ ಕುರುಬರ ಕರೇನಹಳ್ಳಿಯಾಗಿ ಬದಲಾಗಲು ಆ ಗ್ರಾಮದ ಮಹಿಳೆಯರ ಪೂಜೆಯಿಂದ ಎಂಬುದು ಕುತೂಹಲಕಾರಿಯಾದ ಸಂಗತಿಯಾಗಿದೆ.
ಸುಮಾರು 300-400 ವರ್ಷಗಳ ಹಿಂದೆ ಕರೇನಹಳ್ಳಿಯಲ್ಲಿ ಸುತ್ತಮುತ್ತಲು ಮುಸ್ಲಿಂ ರಾಜರ ಆಳ್ವಿಕೆಯಲ್ಲಿತ್ತು. ಗ್ರಾಮದಲ್ಲಿ ಪಟೇಲರು ಹಾಗೂ ಶಾನಭೋಗರು ಇದ್ದರು. ಇವರು ಗ್ರಾಮದಲ್ಲಿ ನಡೆಯುವ ಗಲಾಟೆ ಸೇರಿ ಇತರ ವಿಚಾರಗಳನ್ನು ಪ್ರತಿ ದಿನ ಗ್ರಾಮದ ಸಮಾಚಾರ ತಿಳಿಯಲು ಕುದುರೆ ಮೇಲೆ ಬರುತ್ತಿದ್ದ ಸೈನಿಕರಿಗೆ ಹೇಳುತ್ತಿದ್ದರು. ಗ್ರಾಮಗಳಲ್ಲಿ ರೈತರ ಬೆಳೆ ಕಳವಾಗದ ಹಾಗೆ ಸೈನಿಕರು ಕುದುರೆ ಮೇಲೆ ಪ್ರತಿದಿನ ಬಂದು ಕಾವಲು ಕಾಯುತ್ತಿದ್ದರು.
ಹೀಗೆ ಕಾವಲು ಕಾಯಲು ಬರುತ್ತಿದ ಸೈನಿಕರಿಗೆ ಪ್ರತಿದಿನ ಮಹಿಳೆಯರು ದೇವಾಲಯದ ಮುಂದೆ ನಿಂತು ಪ್ರಾರ್ಥನೆ ಮಾಡುತ್ತಿರುವುದನ್ನು ಗಮನಿಸಿದ್ದರು. ಈ ಬಗ್ಗೆ ಗ್ರಾಮದ ಪಟೇಲರ ಬಳಿ ವಿಚಾರಣೆ ಮಾಡಿದಾಗ ಗ್ರಾಮದಲ್ಲಿ ಶಕ್ತಿ ದೇವತೆ ಕುಂತಿದೇವಿ ಇದ್ದಾಳೆ. ಇದರ ಉತ್ಸವ ಒಂದು ವಾರ ನಡೆಯುತ್ತದೆ. ಹಾಗಾಗಿ ಮಹಿಳೆಯರು ಪ್ರಾರ್ಥನೆ ಸಲ್ಲಿಸಲು ಹೀಗೆ ನಿಂತಿರುತ್ತಾರೆ ಎಂದು ತಿಳಿಸಿದರು. ಕುಂತಿದೇವಿ ಕುರುಬ ಜನಾಂಗದ ಆರಾಧ್ಯ ದೈವ. ಹಾಗಾಗಿ ಗ್ರಾಮದಲ್ಲಿ ಕುರುಬ ಸಮಾಜದವರು ಹೆಚ್ಚಾಗಿ ಇರುವುದನ್ನು ಕೇಳಿಕೊಂಡು ಅಂದಿನ ರಾಜರು ಕರೇನಹಳ್ಳಿ ಹೆಸರನ್ನು ಕುರುಬರ ಕರೇನಹಳ್ಳಿ ಎಂದು ನಾಮಕರಣ ಮಾಡಿದರು ಎಂಬುದು ಇತಿಹಾಸ.
ಕರೇನಹಳ್ಳಿಯ ಜಗನ್ಮಾತೆ ಕುಂತಿದೇವಿಯ ಇತಿಹಾಸ ದೊಡ್ಡದಿದೆ. ಪ್ರತಿ ವರ್ಷ ಸಂಕ್ರಾಂತಿ ಹಬ್ಬ ಮುಗಿದ 9 ದಿನಕ್ಕೆ ಕುಂತಿದೇವಿ ಹಬ್ಬ ಪ್ರಾರಂಭವಾಗುತ್ತದೆ. ಈ ಹಬ್ಬ ಬಹಳ ವಿಜೃಂಭಣೆಯಿಂದ 7 ದಿನ ಶ್ರದ್ಧಾಭಕ್ತಿಯಿಂದ ಆಚರಣೆ ಮಾಡಲಾಗುತ್ತದೆ. ಈ ದೇವರ ಬಗ್ಗೆ ಅಪಹಾಸ್ಯ ಮಾಡುವುದು ಸೇರಿ ಇನ್ನಿತರ ವಿಘ್ನ ಮಾಡಲು ಬಂದವರಿಗೆ ಕೆಡಕಾಗಿದೆ. ಸುತ್ತಮುತ್ತಲಿನ ಗ್ರಾಮದ ಜನರು ದೇವಾಲಯಕ್ಕೆ ಬಂದು ಇಷ್ಟಾರ್ಥ ಸಿದ್ಧಿಮಾಡಿಕೊಂಡಿರುವ ಉದಾಹರಣೆಗಳಿವೆ. ಕುಂತಿದೇವಿ ಸಂತಾನ ಭಾಗ್ಯ ಕರುಣಿಸುವ ದೇವರೆಂದೇ ಹೆಸರು ವಾಸಿಯಾಗಿದೆ. ಮಕ್ಕಳಿಲ್ಲದವರು ಈ ಸನ್ನಿಧಿಗೆ ಬಂದು ವಿಶೇಷ ಪೂಜೆ ಸಲ್ಲಿಸಿ ಇಲ್ಲಿ ನೀಡುವ ಹಾಲನ್ನು ಸೇವನೆ ಮಾಡಿದರೆ ಸಂತಾನಭಾಗ್ಯ ಕಂಡಿರುವ ನಿದರ್ಶನಗಳಿವೆ. ಮಕ್ಕಳಿಗಾಗಿ ಭಕ್ತಿಯಿಂದ ನಮಿಸಿದವರು ವರ್ಷದ ಹಬ್ಬಕ್ಕೆ ಮಗುವಿನ ಜತೆಗೆ ಬಂದು ಪೂಜೆ ಸಲ್ಲಿಸುವುದನ್ನು ಇಲ್ಲಿ ಕಾಣಬಹುದಾಗಿದೆ.
ಗ್ರಾಮ ಚಿಕ್ಕದಾದರೂ ಗ್ರಾಮದಲ್ಲಿ ‘ಕ್ತಿಗೇನು ಕಡಿಮೆ ಇಲ್ಲ. ಇಲ್ಲಿ ಯಾವ ದೇವಾಲಯ ಇಲ್ಲ ಅನ್ನುವ ಹಾಗಿಲ್ಲ. ಸಾಕಷ್ಟು ದೇವಾಲಯಗಳಿದ್ದು, ಹಲವು ದೇವರು ಇಲ್ಲಿ ನೆಲೆ ಕಂಡು ಕೊಂಡಿವೆ. ಕುಂತಿದೇವಿ, ಕೋಟೆ ಮಾರಮ್ಮ, ಕುಂದಳಮ್ಮ ದೇವಾಲಯ, ಲಕ್ಷ್ಮೀ ದೇವಿ ದೇವಾಲಯ, ಆಂಜನೇಯ ದೇವಸ್ಥಾನ, ಮಹದೇಶ್ವರ ದೇವಾಲಯ, ಪವಾಡ ಪುರುಷ ರಾಮಪ್ಪನ ಮಠ ಇದೆ.
ಬಹಳ ವರ್ಷಗಳ ಹಿಂದೆ ಕಾಲರಾ, ಪ್ಲೇಗ್‌ನಂತಹ ಮಹಾ ಮಾರಿ ರೋಗಗಳು ಬಂದರೆ ಸಾಕಷ್ಟು ಸಾವು ನೋವುಗಳು ಸಂಭವಿಸುತ್ತಿದ್ದವು. ಅಲ್ಲದೆ, ಊರಿಗೆ ಊರೆ ಖಾಲಿಮಾಡಿಕೊಂಡು ಗುಳೆ ಹೋಗುತ್ತಿದ್ದ ಪರಿಸ್ಥಿತಿ ಇತ್ತು. ಇಂತಹ ಕಾಲಘಟ್ಟದಲ್ಲಿ ರಾಮಪ್ಪ ಎಂಬ ಪವಾಡ ಪುರುಷ ಗ್ರಾಮಕ್ಕೆ ಬಂದು ಗ್ರಾಮದಲ್ಲಿ ಹಲವು ಪವಾಡಗಳನ್ನು ಸೃಷ್ಟಿ ಮಾಡಿದ್ದರು. ಗ್ರಾಮದ ಸುತ್ತ ದಿಗ್ಬಂಧನ ಹಾಕಿ ಗ್ರಾಮದ ಯಾವುದೇ ಜನರಿಗೂ ಮಹಾಮಾರಿ ಕಾಯಿಲೆಗಳು ಬಾರದೆ ಹಾಗೆ ನೋಡಿಕೊಂಡಿದ್ದರು. ಗ್ರಾಮದ ಪಕ್ಕದಲ್ಲಿ ಇದ್ದ ಕಲ್ಯಾಣಿ ನೀರನ್ನು ಮೈಗೆ ಹಾಕಿಕೊಂಡರೆ ಯಾವುದೇ ರೋಗ ರುಜಿನಗಳು ಇದ್ದರೂ ವಾಸಿಯಾಗುತ್ತಿದ್ದವು ಎಂದು ಗ್ರಾಮದ ಹಿರಿಯರು ಹೇಳುತ್ತಾರೆ.