ಕಾವೇರಿಗಾಗಿ ಕರವೇ ಪ್ರತಿಭಟನೆ

Karave workers protest at Ramangara Ijooru circle For Cauvery issure
Published on

ರಾಮನಗರ : ರಾಜ್ಯದ ಅಣೆಕಟ್ಟೆಗಳಲ್ಲಿ ನೀರಿಲ್ಲದಿದ್ದರೂ ತಮಿಳುನಾಡು ಬೆಳೆಗಳಿಗೆ ನೀರು ಹರಿಸುತ್ತಿರುವ ಸರ್ಕಾರದ ನಿರ್ಧಾರ ಸರಿಯಿಲ್ಲ ಕೂಡಲೇ ನೀರು ನಿಲ್ಲಿಸಿ ರಾಜ್ಯದ ರೈತರ ಹಿತ ಕಾಪಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಕಬ್ಬಾಳೇಗೌಡ ತಿಳಿಸಿದರು.

ರಾಮನಗರದ ಐಜೂರು ಸರ್ಕಲ್‌ನಲ್ಲಿ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟಿಸಿ ಮಾತನಾಡಿದರು. ರಾಜ್ಯದಲ್ಲಿ ಎಂದೂ ಕಾಣದ ಜಲಕ್ಷಾಮ ಇಂದು ತಲೆದೋರಿದೆ. ರಾಜ್ಯದ 192 ತಾಲ್ಲೂಕುಗಳು ಬರಪೀಡಿತ ಪಟ್ಟಿಗೆ ಸೇರಿವೆ. ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ನೀರಿಲ್ಲದೆ ರೈತರು ಬೆಳೆ ಬೆಳೆಯಲು ಆಗುತ್ತಿಲ್ಲ.

ಬೆಂಗಳೂರು, ಮಹಾನಗರಕ್ಕೆ ಮಂಡ್ಯ, ಮೈಸೂರು, ರಾಮನಗರ ಜಿಲ್ಲೆಯ ಜನರಿಗೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಕೊರತೆ ಕಾಣಲಿದೆ. ಸನ್ನಿವೇಶ ಬಹಳ ಕ್ಲಿಷ್ಟಕರವಾಗಿದ್ದರೂ ಕಾವೇರಿ ನಿರ್ವಹಣಾ ಪ್ರಾಧಿಕಾರ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಬಿಡಲು ಆದೇಶಿಸಿರುವುದು ಸರಿಯಲ್ಲ.

ಕೂಡಲೇ ರಾಜ್ಯ ಸರ್ಕಾರ ನೀರು ನಿಲ್ಲಿಸಬೇಕು. ಕಾವೇರಿ ನಿರ್ವಹಣಾ ಪ್ರಾಧಿಕಾರಕ್ಕೆ ಸುಪ್ರೀಂಕೋರ್ಟಿಗೆ ರಾಜ್ಯದ ರೈತರ, ಕುಡಿಯುವ ನೀರಿನ ಸಮಸ್ಯೆ ಗಮನಕ್ಕೆ ತರಬೇಕು. ನೀರಿಗಾಗಿ ರಾಜ್ಯದ ಜನತೆ ಮುಂದೆ ಬಹಳಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ.

ಬಂಗಾರಪ್ಪ ಸರ್ಕಾರ ಆಗಿನ ಸಮಯದಲ್ಲಿ ತೆಗೆದುಕೊಂಡ ಕಠಿಣ ನಿರ್ಧಾರದಂತೆ ಇಂದಿನ ಸರ್ಕಾರ ತೆಗೆದುಕೊಳ್ಳಬೇಕು. ಹೀಗೇ ನೀರು ತಮಿಳುನಾಡಿಗೆ ಹರಿಯುತ್ತಿದ್ದರೆ ಕರ್ನಾಟಕ ರಕ್ಷಣಾ ವೇದಿಕೆ ಉಗ್ರ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ.

ದೆಹಲಿಯಲ್ಲಿ ರಾಜ್ಯದ ಸಂಸದರು ಧರಣಿ ನಡೆಸಬೇಕು. ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಆಗ್ರಹಿಸಿದರು.

ದಹನಕ್ಕೆ ಪೊಲೀಸರ ತಡೆ

ಕಾವೇರಿ ನಿರ್ವಹಣಾ ಪ್ರಾಧಿಕಾರ ಭೂತ ದಹನ ಮಾಡಲು ಬೆಂಕಿ ಹಚ್ಚಲು ಮುಂದಾದರು, ಇದನ್ನು ತಡೆದ ಪೋಲೀಸರು ಭೂತ ದಹನಕ್ಕೆ ಅವಕಾಶ ನೀಡಲಿಲ್ಲ. ಕೆರಳಿದ ಕಾರ್ಯಕರ್ತರು ಪೋಲೀಸರ ವಿರುದ್ಧ ಕೆಲಕಾಲ ಘೋಷಣೆ ಕೂಗಿ ಕಿಡಿ ಕಾರಿದರು. ನಂತರ ಜಿಲ್ಲಾಧಿಕಾರಿ ಕಛೇರಿಗೆ ತೆರಳಿ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಂ.ಎನ್. ಸತ್ಯನಾರಾಯಣ್, ರಾಮನಗರ ತಾಲ್ಲೂಕು ಅಧ್ಯಕ್ಷ ದೇವರಾಜು, ಮುಖಂಡರುಗಳಾದ ಸಾಗರ್, ಶಂಭೂಗೌಡ, ಚನ್ನಕೇಶವ, ಶ್ರೀನಿವಾಸ, ಜಯಕುಮಾರ್, ಅರುಣ್‌ಕುಮಾರ್, ನರಸಿಂಹಯ್ಯ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net