ಚೈತ್ರ ಪೌರ್ಣಮಿಯ ಬೆಳದಿಂಗಳ ಬೆಳಕಿನಲ್ಲಿ ‘ಕರಗ ಶಕ್ತ್ಯೋತ್ಸವ’

Karaga
Published on

ಬೆಂಗಳೂರು: ಆಧುನಿಕತೆಯ ನಡುವೆಯೂ ಸಾಂಪ್ರದಾಯಿಕ ವಿಧಿವಿಧಾನಳನ್ನು ಹಾಗೇ ಉಳಿಸಿಕೊಂಡು ಬಂದಿರುವ ಭಾವೈಕ್ಯತೆಯ ಪ್ರತೀಕವಾದ ಕರಗ ಉತ್ಸವ ಈ ಬಾರಿ ಅದ್ದೂರಿಯಾಗಿ ಆಚರಣೆಗೊಳ್ಳುತ್ತಿದೆ. ಮಂಗಳವಾರ ರಾತ್ರಿ ‘ಕರಗ ಶಕ್ತ್ಯೋತ್ಸವ’(ಹೂವಿನ ಕರಗ) ಹಾಗೂ ಶ್ರೀ ಧರ್ಮರಾಯಸ್ವಾಮಿ ಮಹಾರಥೋತ್ಸವ ನಡೆಯಲಿದ್ದು, ಅರ್ಚಕ ವಿ. ಜ್ಞಾನೇಂದ್ರ ಕರಗ ಉತ್ಸವ ನಡೆಸಿಕೊಡಲಿದ್ದಾರೆ.

ಚೈತ್ರ ಶುದ್ಧ ಪೌರ್ಣಿಮೆಯ ಬೆಳದಿಂಗಳ ಬೆಳಕಿನಲ್ಲಿ ಮಲ್ಲಿಗೆ ಪರಿಮಳ ಚೆಲ್ಲುತ್ತ ಧರ್ಮರಾಯ ದೇವಸ್ಥಾನದಿಂದ ಹೊರಡುವ ಹೂವಿನ ಕರಗಕ್ಕೆ ಇಂದು ಮಧ್ಯರಾತ್ರಿ 12.30ಕ್ಕೆ ಚಾಲನೆ ದೊರೆಯಲಿದ್ದು,ಮುಂಜಾನೆಯಿಂದಲೇ ಶ್ರೀ ಧರ್ಮರಾಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ, ಅಭಿಷೇಕ, ಮಹಾಮಂಗಳಾರತಿ ನಡೆಯಲಿವೆ. ಬೆಳಗ್ಗೆ 10.30ಕ್ಕೆ ಕರಗ ನಡೆಸಿಕೊಡುವ ಪೂಜಾರಿ ಅರಿಶಿನ ಬಣ್ಣದ ಸೀರೆ ಉಟ್ಟು, ಬಳೆ ತೊಟ್ಟು ಕಬ್ಬನ್ ಪಾರ್ಕ್‌ನ ಕರಗದ ಕುಂಟೆಯಲ್ಲಿ ದ್ರೌಪದಿ ದೇವಿಗೆ ಗಂಗೆ ಪೂಜೆ ಸಲ್ಲಿಸಲಿದ್ದಾರೆ. ಅಲ್ಲಿಂದ ಹಸಿಕರಗವನ್ನು ಮಂಟಪಕ್ಕೆ ಹೊತ್ತು ತಂದು ವಿಶೇಷ ಪೂಜೆ ನೆರವೇರಿಸಿ ದೇವಾಲಯಕ್ಕೆ ತೆರಳಲಿದ್ದಾರೆ. ರಾತ್ರಿ ಹೂವಿನ ಕರಗೋತ್ಸವ ನಡೆಯಲಿದೆ.

ಏಳು ಅಂಕಣದ ತೇರು: ‘ತೇರು ಕಟ್ಟುವ ಮನೆಯವರು’ ಇಂದು ಮುಂಜಾನೆಯಿಂದಲೇ ಏಳು ಅಂಕಣದ ತೇರನ್ನು ಬಣ್ಣಬಣ್ಣದ ವಸಗಳೊಂದಿಗೆ ಸಿಂಗಾರಗೊಳಿಸುವ ಕಾಯಕದಲ್ಲಿ ನಿರತರಾಗುತ್ತಾರೆ. ತೇರಿನ ಮೇಲೆ, ಕಲಶದ ಕೆಳಗೆ ಅರ್ಜುನ-ದ್ರೌಪದಿಯರ ಮೂರ್ತಿಗಳೊಂದಿಗೆ ವೀರ ಹನುಮಂತನ ಮೂರ್ತಿಯನ್ನೂ ವಿಶೇಷವಾಗಿ ಅಲಂಕರಿಸಲಾಗುತ್ತದೆ. ಉತ್ಸವಕರ್ತರು ಮತ್ತು ವೀರಕುಮಾರರು ಪೂಜಾರಿಗಳೊಂದಿಗೆ ಸಾಗುವ ಮೆರವಣಿಗೆಯಲ್ಲಿ ಛತ್ರಿ, ಚಾಮರ, ಧ್ವಜ ಮತ್ತು ನಾದಸ್ವರ ಇರುತ್ತವೆ. ಅಲ್ಲಿಂದ ವಾಪಸ್ ಬರುವಾಗ ವೀರಕುಮಾರರು ಹೊಂಗೆಹೂವ ತೊಂಗಲನ್ನು ಕಿತ್ತುಕೊಂಡು ಬಂದು, ದೇವಸ್ಥಾನದಲ್ಲಿ ಮಂಟಪವನ್ನು ನಿರ್ಮಿಸುತ್ತಾರೆ. ಬಳಿಕ ಅರ್ಜುನ-ದ್ರೌಪದಿಯರ ವಿವಾಹ ಮಹೋತ್ಸವವು ಕ್ರಮಬದ್ಧವಾಗಿ ನೆರವೇರುತ್ತದೆ.

ಕರಗ ಶಕ್ತ್ಯೋತ್ಸವ: ಕರಗ ಶಕ್ತ್ಯೋತ್ಸವ ಎಂದರೆ ಶಕ್ತಿ ದೇವತೆಯಾದ ದ್ರೌಪದಿ ಕರಗ. ಕುಂಭದಲ್ಲಿ ದುರ್ಗೆ (ದ್ರೌಪದಿ)ಯನ್ನು ಆವಾಹಿಸಿ, ಪೂಜಿಸಿ, ಹೂವಿನಿಂದ ಅಲಂಕಾರಗೊಂಡ ಕರಗಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ನಂತರ ಶ್ರೀ ಧರ್ಮರಾಯ ದೇವಸ್ಥಾನದ ಗಣಾಚಾರಿ, ಗಂಟೆ ಪೂಜಾರಿಯ ಉಸ್ತುವಾರಿಯಲ್ಲಿ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿ ಅರ್ಚಕ ಜ್ಞಾನೇಂದ್ರ ಕತ್ತಿ ಹಿಡಿದ ವೀರಕುಮಾರರ ನಡುವೆ ತಲೆಯ ಮೇಲೆ ಕರಗ ಹೊತ್ತು ಸಾಗಲಿದ್ದಾರೆ. ಹೀಗೆ ಮಧ್ಯರಾತ್ರಿ ದೇವಾಲಯದಿಂದ ಬಿಜಯ ಮಾಡಿಸಿ ಸಾಗುವ ಕರಗ ಶಕ್ತ್ಯೋತ್ಸವ ಹಳೇ ಬೆಂಗಳೂರಿನ ಹಲವು ಪೇಟೆ ಬೀದಿಗಳಲ್ಲಿ ಸಂಚರಿಸಿ ದೇವಾಲಯಗಳು ಹಾಗೂ ಕುಲಪುರೋಹಿತರ ಮತ್ತು ಭಕ್ತರ ಮನೆಗಳಲ್ಲಿ ಪೂಜೆ ಸ್ವೀಕರಿಸಿ ಸೂರ್ಯೋದಯದ ವೇಳೆಗೆ ದೇವಾಲಯ ಸೇರಲಿದೆ.

ಕರಗ ಸಂಚಾರ ಮಾರ್ಗ: ಮಧ್ಯರಾತ್ರಿ 12ರ ವೇಳೆಗೆ ಧರ್ಮರಾಯಸ್ವಾಮಿ ದೇವಾಲಯದಿಂದ ಬಿಜಯ ಮಾಡಿಸಿ ಹೊರಡುವ ಕರಗ ಶಕ್ತ್ಯೋತ್ಸವ ಹಲಸೂರು ಪೇಟೆಯ ಆಂಜನೇಯಸ್ವಾಮಿ, ಶ್ರೀ ರಾಮ ದೇವಾಲಯದಲ್ಲಿ ಪೂಜೆ ಸ್ವೀಕರಿಸಿ, ನಗರ್ತಪೇಟೆ, ಸಿದ್ದಣ್ಣ ಗಲ್ಲಿ, ಕಬ್ಬನ್‌ಪೇಟೆ, ಗಾಣಿಗರ ಪೇಟೆ, ದೊಡ್ಡಪೇಟೆಯಿಂದ ಶ್ರೀಕೃಷ್ಣರಾಜೇಂದ್ರ ಮಾರುಕಟ್ಟೆ ತಲುಪಲಿದ್ದಿ, ಈ ಮಾರ್ಗಗಳಲ್ಲಿನ ಎಲ್ಲಾ ದೇವಾಲಯಗಳಲ್ಲಿ ಪೂಜೆ ಸ್ವೀಕರಿಸಿ ನಂತರ ಮಸ್ತಾನ್ ಸಾಹೇಬರ ದರ್ಗಾಕ್ಕೆ ಭೇಟಿ ನೀಡಿ ಅಲ್ಲಿಂದ ಬಳೇಪೇಟೆ ಹಳೇಗರಡಿ, ಅಣ್ಣಮ್ಮನ ದೇವಾಲಯಕ್ಕೆ ತೆರಳಲಿದೆ. ಬಳಿಕ ಕಿಲಾರಿ ರಸ್ತೆ, ಯಲಹಂಕ ಗೇಟ್, ಅವೆನ್ಯೂ ರಸ್ತೆ, ಕುಂಬಾರಪೇಟೆ, ಗೊಲ್ಲರಪೇಟೆ, ತಿಗಳರ ಪೇಟೆಗಳಲ್ಲಿರುವ ಕುಲಬಾಂಧವರ ಮನೆಗಳಲ್ಲಿ ಮತ್ತು ಭಕ್ತರಿಂದ ಪೂಜೆ ಮಾಡಿಸಿಕೊಂಡು ಹಾಲುಬೀದಿ, ಕಬ್ಬನ್‌ಪೇಟೆ, ಸುಣ್ಣಕಲ್ ಪೇಟೆ ಮಾರ್ಗವಾಗಿ ಕುಲಪುರೋಹಿತರ ಮನೆಗಳಲ್ಲಿ ಪೂಜೆ ಸ್ವೀಕರಿಸಿ, ನರಸಿಂಹ ಜೋಯಿಸ್‌ಗಲ್ಲಿ ಮೂರ್ಗವಾಗಿ ಸೂರ್ಯೋದಯದ ವೇಳೆಗೆ ದೇವಾಲಯವನ್ನು ತಲುಪಲಿದೆ.

ವಿಶೇಷ ಸೂಚನೆ: ಕರಗ ಸಾಗುವ ವೇಳೆ ದಾರಿಯುದ್ದರೂ ಭಕ್ತರು ‘ಬಿಡಿ ಮಲ್ಲಿಗೆ ಹೂ’ ಬಳಸುವಂತೆ ಕೋರಲಾಗಿದೆ. ಗಂಧದ ಪುಡಿ, ಅರಿಶಿನ, ಕುಂಕುಮ, ಕಲ್ಯಾಣಸೇವೆ, ಬಾಳೆಹಣ್ಣು, ದವನ ಸೇರಿದಂತೆ ಯಾವುದೇ ಬಗೆಯ ಸಾಮಗ್ರಿಗಳನ್ನು ಕರಗದ ಮೇಲೆ ಎಸೆಯುವಂತಿಲ್ಲ. ಕರಗ ಶಕ್ತ್ಯೋತ್ಸವ ಸಾಗುವ ವೇಳೆ ದೂರದಿಂದಲೇ ವಂದಿಸುವ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಕರಗ ಸಂಚರಿಸುವ ರಸ್ತೆಗಳನ್ನು ಸ್ವಚ್ಛವಾಗಿಡಬೇಕು. ಯಾವುದೇ ತೊಂದರೆಯಾಗದ ರೀತಿಯಲ್ಲಿ ವಿದ್ಯುತ್ ತಂತಿ ಹಾಗೂ ತೋರಣಗಳನ್ನು ಕಟ್ಟುವಂತೆ ದೇವಸ್ಥಾನದ ಸಮಿತಿ ಅಧ್ಯಕ್ಷ ಸತೀಶ್ ಭಕ್ತರಲ್ಲಿ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net