ಕರಗ ಮಹೋತ್ಸವ ರಾಮನಗರದ ಅಸ್ಮಿತೆ

FotoJet
Published on

 ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಹೇಳಿಕೆ

ರಾಮನಗರ: ಕರಗ ಮಹೋತ್ಸವ ಪ್ರಯುಕ್ತ ಏರ್ಪಡಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಾಡಿನ ಸಂಸ್ಕೃತಿಗೆ ಸಾಕ್ಷಿಯಾಗಲಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ತಿಳಿಸಿದರು.

ನಗರದ ಮಂಡಿಪೇಟೆಯಲ್ಲಿ ಬನ್ನಿಮಹಾಂಕಾಳಿ ಅಮ್ಮನವರ ಕರಗ ಮಹೋತ್ಸವ ಪ್ರಯುಕ್ತ ಮಂಡಿಪೇಟೆ ಗೆಳೆಯರ ಬಳಗದಿಂದ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಭಜನೆಗೆ ಚಾಲನೆ ನೀಡಿ ಮಾತನಾಡಿದರು.

ದೇವತಾ ಕಾರ್ಯಗಳು ಮನುಷ್ಯನ ಬದುಕಿನ ಮೇಲೆ ಸಾಕಷ್ಟು ಪರಿಣಾಮ ಬೀರುತ್ತವೆ. ಯುವಕರಲ್ಲಿ ಜಾಗೃತಿ ಹಾಗೂ ಒಗ್ಗಟ್ಟು ಮೂಡಿಸಲಿದೆ. ಕರಗ ಮಹೋತ್ಸವ ರಾಮನಗರದ ಅಸ್ಮಿತೆಯಾಗಿದೆ. ಶೀಘ್ರದಲ್ಲಿ ರಾಮನಗರ ಶಕ್ತಿ ದೇವತೆಗಳ ಕರಗ ನಡೆಯಲಿದೆ. ಹಾಗಾಗಿ ಕರಗ ಸಂಚರಿಸುವ ರಸ್ತೆಗಳನ್ನು ದುರಸ್ತಿ ಮಾಡಲಾಗುತ್ತಿದೆ ಎಂದರು.

14ನೇ ವಾರ್ಡ್ ನಗರಸಭೆ ಸದಸ್ಯ ನಿಜಾಮುದ್ದೀನ್ ಷರೀಫ್ ಮಾತನಾಡಿ, ಕರಗ ಮಹೋತ್ಸವ ಭಾವೈಕ್ಯಕ್ಕೆ ಸಾಕ್ಷಿಯಾಗಿದೆ ಎಂದರು.

ನಗರದ ಶ್ರೀಲಕ್ಷ್ಮೀ ಭಜನಾ ಮಂಡಳಿ ಸದಸ್ಯರು ದೇವಾಲಯದಲ್ಲಿ ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು. ರಾಮನಗರದ ನೃತ್ಯಶಾಲೆ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಇದೇ ವೇಳೆ ಶ್ರೀನಿವಾಸ ಕಲ್ಯಾಣ ಕಥಾ ಪ್ರಸಂಗದ ನೃತ್ಯ ನಾಟಕ ಪ್ರದರ್ಶನವನ್ನು ನೃತ್ಯಶಾಲೆ ಮಕ್ಕಳು ಮನೋಜ್ಞವಾಗಿ ನಡೆಸಿ ನೋಡುಗರ ಮೆಚ್ಚುಗೆಗೆ ಪಾತ್ರವಾದರು.

ಬನ್ನಿಮಹಾಂಕಾಳಿ ಅಮ್ಮನವರ ಕರಗಧಾರಕ ಯೋಗೇಶ್ ಚಾಮುಂಡೇಶ್ವರಿ ಅಮ್ಮನವರ ಕರಗಧಾರಕ ದೇವಿಪ್ರಸಾದ್ ಸಿಂಗ್, ನಗರಸಭಾ ಅಧ್ಯಕ್ಷ ಕೆ.ಶೇಷಾದ್ರಿ ಅವರನ್ನು ಗೆಳೆಯರ ಬಳಗದಿಂದ ಸನ್ಮಾನಿಸಲಾಯಿತು.

ಮಂಡಿಪೇಟೆ ಗೆಳೆಯರ ಬಳಗದ ಪದಾಧಿಕಾರಿಗಳಾದ ರವಿಕಿರಣ್, ದೀಪಕ್, ಮಧುಸೂಧನ್, ಮಣಿಕಂಠ, ರಾಗಿ ಮಿಷಿನ್ ದೀಪು, ಮಂಜುನಾಥ್, ತರುಣ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net