ಕಾಪು ಪುರಸಭೆ ಮಿಗತೆ ಬಜೆಟ್ ಮಂಡನೆ

budget
Published on

ಪಡುಬಿದ್ರಿ: ಕಾಪು ಪುರಸಭೆ 2025-26ನೇ ಸಾಲಿನ 11,62,05,996 ರೂ. ಮೊತ್ತದ 6,15,539 ರೂ. ಮಿಗತೆ ಬಜೆಟನ್ನು ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ ಗುರುವಾರ ಮಂಡಿಸಿದರು. ಪ್ರಸ್ತುತ ಸಾಲಿನಲ್ಲಿ ವಿವಿಧ ಅನುದಾನ ಸೇರಿ 10,27,35,702 ಮೊತ್ತ ಸಂಗ್ರಹ ಗುರಿಯೊಂದಿಗೆ ಬಜೆಟ್ ಮಂಡಿಸಲಾಗಿದೆ.

ವಿವಿಧ ಶುಲ್ಕ ಹಾಗೂ ಕರ ಸಂಗ್ರಹದ ಮೂಲಕ 2,64,12,942 ಪುರಸಭೆ ಆದಾಯ ನಿರೀಕ್ಷೆಯೊಂದಿಗೆ ರಾಜ್ಯ ಸರ್ಕಾರದಿಂದ 6,19,95,000 ರೂ. ವಿವಿಧ ಅನುದಾನ ಹಾಗೂ 1,43,27,860 ರೂ.ಗಳ ಅಸಾಮಾನ್ಯ ಆದಾಯ ನಿರೀಕ್ಷೆ ಹೊಂದಲಾಗಿದೆ ಎಂದರು.

ಘನತ್ಯಾಜ್ಯ ವಿಲೇ ಶುಲ್ಕ 30 ಲಕ್ಷ ಹಾಗೂ ಕಾಂಪೋಸ್ಟ್ ಗೊಬ್ಬರ ಮಾರಾಟದಿಂದ ಒಂದು ಲಕ್ಷ ರೂ. ಆದಾಯ ಗುರಿ ಹೊಂದಲಾಗಿದ್ದು, ಪುರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿ ಹಾವಳಿ ಹೆಚ್ಚಾಗಿದ್ದು, ಬಜೆಟ್‌ನಲ್ಲಿ ಬೀದಿನಾಯಿ ಸಂತಾನಶಕ್ತಿಹರಣಕ್ಕೆ 5 ಲಕ್ಷ ರೂ. ಕಾಯ್ದಿರಿಸಲಾಗಿದೆ ಎಂದು ವಿವರಿಸಿದರು.

ಬಜೆಟ್ ಸಭೆಗೆ ಸದಸ್ಯರ ಗೈರು

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿಯಲ್ಲಿ ಹೆಚ್ಚಿನ ಪುರಸಭಾ ಸದಸ್ಯರು ಇರುವ ಕಾರಣ ಬಜೆಟ್ ಸಭೆಯಲ್ಲಿ ಅವರೆಲ್ಲ ಗೈರಾಗಿದ್ದು, ಬಜೆಟ್ ಮೇಲೆ ಯಾವುದೇ ಚರ್ಚೆ ನಡೆಯದೆ ನೀರಸವಾಗಿ ಅನುಮೋದನೆಗೊಂಡಿತು. ಹಿಂದಿನ ಆರ್ಥಿಕ ವರ್ಷದಲ್ಲಿ ಆಡಳಿತಾಧಿಕಾರಿ ಅವಧಿಯಲ್ಲಿ 6,23,100 ರೂ. ಮಿಗತೆ ಬಜೆಟ್‌ಗೆ ಒಪ್ಪಿಗೆ ಪಡೆಯಲಾಗಿತ್ತು. ಅಂದಿನ ಬಜೆಟ್‌ಗೆ ಹೋಲಿಸಿದಲ್ಲಿ 7561 ರೂ. ಕಡಿಮೆ ಮಿಗತೆ ಈ ಬಾರಿಯದಾಗಿದೆ. ಪುರಸಭೆ ಉಪಾಧ್ಯಕ್ಷೆ ಸರಿತಾ ಶಿವಾನಂದ, ಮುಖ್ಯಧಿಕಾರಿ ನಾಗರಾಜ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net