ನೀರಿನ ಭರ ನೀಗಿಸಿದ ಕಣ್ವ ಕೆರೆ!

Rmgm-Ph-0001 - Pete Kuruubarahaalli Gramayana Story Photo- 27-7-2025
Published on

* ಪ್ರಕೃತಿ ಶ್ರೀಮಂತಿಕೆಗೆ ಪೇಟೆ ಕುರುಬರಹಳ್ಳಿ ಹೆಸರುವಾಸಿ

* ಬ್ರಿಟಿಷರ ಕಾಲದಲ್ಲೇ ಗುರುತಿಸಿಕೊಂಡಿದ್ದ ಗ್ರಾಮ

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ಒಂದು ಕಾಲದಲ್ಲಿ ಜೀವಜಲಕ್ಕೆ ಪರದಾಡುತ್ತಿದ್ದ ಗ್ರಾಮದಲ್ಲಿಗ ಸಮೃಧ್ಧ ನೀರಿದ್ದು, ಅಭಿವೃದ್ಧಿಯತ್ತ ಮುನ್ನುಗ್ಗುತ್ತಿರುವ ಇಂದಿನ ಪೇಟೆ ಕುರುಬರಹಳ್ಳಿ ಇತಿಹಾಸವೇ ವಿಶಿಷ್ಟವಾಗಿದೆ.

ಸುತ್ತಮುತ್ತಲೂ ಇಳಿಜಾರು ಪ್ರದೇಶ. ಎತ್ತರ ಪ್ರದೇಶದಲ್ಲಿ ಮಾವು, ತೆಂಗು ಹಸಿರು ಮರಗಿಡಗಳ ಮಧ್ಯೆ ಮಿನಿ ನಗರದಂತೆ ಕಾಣುವ ಸುಂದರ ಗ್ರಾಮ ಪೇಟೆ ಕುರುಬರಹಳ್ಳಿ ರಾಮನಗರ ತಾಲೂಕಿನ ಕಸಬಾ ಹೋಬಳಿಯ ಪ್ರಮುಖ ಗ್ರಾಮವಾಗಿದ್ದು, ಪ್ರಕೃತಿ ಶ್ರೀಮಂತಿಕೆಯಿಂದಲೇ ಗಮನ ಸೆಳೆಯುತ್ತಿದೆ.

ಪಾಳೇಗಾರರು, ಮೈಸೂರು ಮಹಾರಾಜರ ಆಳ್ವಿಕೆ ಬ್ರಿಟಿಷರ ಕಾಲದಲ್ಲೇ ಪ್ರಮುಖ ಗ್ರಾಮವಾಗಿ ಗುರುತಿಸಿಕೊಂಡಿದ್ದ ಈ ಗ್ರಾಮ ಈಗ ಧಾರ್ಮಿಕ, ರಾಜಕೀಯ ಹಾಗೂ ಕೃಷಿ ಪ್ರಧಾನವಾಗಿ ಜಿಲ್ಲೆಯಲ್ಲೇ ಪ್ರಮುಖ ಗ್ರಾಮವಾಗಿ ಗುರುತಿಸಿಕೊಂಡಿದೆ.

ಕೃಷಿಕರೇ ಹೆಚ್ಚಿರುವ ಪೇಟೆ ಕುರುಬರಹಳ್ಳಿ ರಾಮನಗರ ಮತ್ತು ಜಾಲಮಂಗಲ, ಮಾಗಡಿ ಮಾರ್ಗದ ಮುಖ್ಯ ರಸ್ತೆ ಮತ್ತು ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್​ ಹೈವೇಗೆ ಹೊಂದಿಕೊಂಡಂತೆ ಸರ್ವ ಜನರ ಸಹಬಾಳ್ವೆಗೆ ಸಾಯಾಗಿದೆ. ಜಿಲ್ಲಾ ಕೇಂದ್ರದಿಂದ 5 ಕಿಮೀ ಬೆಂಗಳೂರು & ಮೈಸೂರು ಎಕ್ಸ್​ಪ್ರೆಸ್​ ಹೈವೇಯಿಂದ 1 ಕಿಮೀ ಅಂತರದಲ್ಲಿದ್ದು ಸುಮಾರು 1500 ಜನಸಂಖ್ಯೆ ಇದ್ದು, 950 ಮತದಾರರಿದ್ದಾರೆ. ಈ ಮೊದಲು ಗರಿ ಶೆಡ್​, ನಾಡ ಹೆಂಚು ಮನೆಗಳು, ಮಣ್ಣಿನ ಬೀದಿ ರಸ್ತೆಗಳಿಂದ ಕಂಡಿದ್ದ ಗ್ರಾಮ ಅಭಿವೃದ್ಧಿಯತ್ತ ಮುನ್ನುಗ್ಗಿ ಇಂದು ಕಾಂಕ್ರೀಟ್​ ಮನೆಗಳು, ಗ್ರಾಮದ ಪ್ರತಿ ಬೀದಿಗಳು ಕಾಂಕ್ರೀಟ್​ಗಳಾಗಿವೆ.

ಹೈನುಗಾರಿಕೆಯಲ್ಲಿ ಮುಂದೆ

ಗ್ರಾಮ ಎತ್ತರದ ಪ್ರದೇಶದಲ್ಲಿದ್ದರೂ ಶೇ.60 ಜನ ಹೈನುಗಾರಿಕೆ ಅವಲಂಬಿಸಿದ್ದಾರೆ. ಬೆಂಗಳೂರು ಹಾಲು ಒಕ್ಕೂಟ ವ್ಯಾಪ್ತಿಯಲ್ಲಿ ಈ ಗ್ರಾಮ ಪ್ರತಿದಿನ ಸುಮಾರು 650 ಲೀ. ಹಾಲು ಉತ್ಪಾದಿಸುತ್ತದೆ. ಕೆಲವು ರೈತರು ರೇಷ್ಮೆ, ಮಾವು ಬೆಳೆಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ.

ವರದಾನವಾದ ಕಣ್ವ ಕೆರೆ

1983 ರಿಂದ ಗ್ರಾಮದಲ್ಲಿ ಬೋರ್​ವೆಲ್​ ಕೊರೆದ ಕಾರಣ ಗ್ರಾಮದ ಸುತ್ತಮುತ್ತಲಿನಲ್ಲಿ 46 ಬೋರ್​ವೆಲ್​ಗಳು ನೀರಿನ ಭರ ನೀಗಿಸಿದವು. ಆದರೆ, ಮತ್ತೆ 2012 ರಿಂದ 2020ರ ವರೆಗೆ 8 ವರ್ಷ ಎಲ್ಲ ಬೋರ್​ವೆಲ್​ಗಳು ನೀರಿಲ್ಲದೆ ನಿಶ್ಯಬ್ದವಾದವು. ಗ್ರಾಮದಿಂದ ಸುಮಾರು 6&7 ಕಿಮೀ ದೂರದ ಕಣ್ವ ಕೆರೆ ತುಂಬಿದ ಪರಿಣಾಮ ಇದ್ದಕ್ಕಿದ್ದಂತೆ ನಿಂತ ಎಲ್ಲ ಬೋರ್​ವೆಲ್​ಗಳು ಚಾಲನೆಗೊಂಡವು. ಇದುವರೆಗೂ ನೀರಿನ ಅಭಾವ ಕಂಡಿಲ್ಲ.

ನೇರಳೆ ಮರದಲ್ಲಿ ಆಂಜನೇಯ

ಗ್ರಾಮದ ಪಕ್ಕದ ಗುಂಡು ತೋಪಿನಲ್ಲಿ 2005ರಲ್ಲಿ ನೇರಳೆ ಮರದಲ್ಲಿ ಆಂಜನೇಯಮೂರ್ತಿ ಆಕಾರದಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅಲ್ಲಿ ಪೂಜೆ ಆರಂಭಿಸಿದರು. ನಂತರ ಅದರಿಂದ ಗ್ರಾಮಕ್ಕೆ ಮತ್ತಷ್ಟೂ ಹೆಸರು ಹೆಚ್ಚಿತು. ನಂತರ ಸುಮಾರು 12 ಅಡಿ ಕಪ್ಪು ಶಿಲೆಯ ಏಕಶಿಲೆಯಲ್ಲಿ ಆಂಜನೇಯಮೂರ್ತಿ ಕೆತ್ತಿಸಿ ಪ್ರತಿಷ್ಠಾಪಿಸಲಾಗಿದೆ. ಪ್ರತಿ ಹನುಮಜಯಂತಿ, ಹಬ್ಬ ಹರಿದಿನಗಳಲ್ಲಿ ಇಲ್ಲಿ ಅನ್ನಸಂತರ್ಪಣೆ ನಡೆಯುತ್ತದೆ.

ಊರ ಹಬ್ಬಕ್ಕೆ ಹೆಸರುವಾಸಿ

ಗ್ರಾಮದಲ್ಲಿ ಬಸವೇಶ್ವರ, ಆಂಜನೇಯ, ಲಕ್ಷ್ಮೀ ವೆಂಕಟೇಶ್ವರ ದೇವಾಲಯಗಳಿವೆ. ಯುಗಾದಿ ಹಬ್ಬ ಮುಗಿದ 15 ದಿನಗಳ ನಂತರ ಗ್ರಾಮದಲ್ಲಿ ಬಸವೇಶ್ವರನ ಅಗ್ನಿಕೊಂಡ ಮತ್ತು ಊರ ಹಬ್ಬ ವಿಶಿಷ್ಟವಾಗಿ ಆಚರಿಸಲಾಗುವುದು.

ಜಮ್ಮು ನೇರಳೆಮರ

ಗ್ರಾಮದ ಪಕ್ಕದಲ್ಲಿ ಗುಂಡುತೋಪಿದ್ದು ಪೂರ್ವಿಕರ ಕಾಲದಿಂದಲೂ ಸುಮಾರು 300&400 ವರ್ಷಗಳ ಕಾಲಕ್ಕೂ ಹಳೆಯದಾದ 50ಕ್ಕೂ ಹೆಚ್ಚು ಜಮ್ಮುನೇರಳೆ ಮಾವಿನ ಮರಗಳಿದ್ದವು. ಕೆಲವು ಮರಗಳು ನಶಿಸಿದ್ದು, ಈಗ 5&6 ಹಳೇ ಜಮ್ಮುನೇರಳೆ ಮರಗಳಿವೆ.

ಗ್ರಾಮ ಇತಿಹಾಸ

ಗ್ರಾಮದ ಹಿಂದಿನ ಹೆಸರು ಕೇಶವಪುರ. ಅದು ಕಂದಾಯ ದಾಖಲಾತಿಯಲ್ಲಿ ಈಗಲೂ ಪ್ರಚಲಿತದಲ್ಲಿದೆ. ಕುರುಬರಹಳ್ಳಿ ಸುತ್ತಮುತ್ತಲಿನ ಕೇಶವಪುರ, ಹಳೇವೂರು ಸೇರಿ ಒಂದೆರಡು ಗ್ರಾಮಗಳು ಆಗಿನ ಗ್ರಾಮಗಳನ್ನು ತೊರೆದು ಈಗಿನ ಕುರುಬರಹಳ್ಳಿಯಲ್ಲಿ ನೆಲೆ ಕಂಡುಕೊಂಡರಂತೆ. ಆದರೆ, ಗ್ರಾಮದಲ್ಲಿ ಒಂದೆರಡು ಕುರುಬ ಕುಟುಂಬಗಳು ಇಲ್ಲ. ಹಿಂದೆ ಗ್ರಾಮದ ಜನರು ಕುರಿ ಸಾಕುತ್ತಿದ್ದರಂತೆ. ಮೈಸೂರು ಸಂಸ್ಥಾನ ಬ್ರಿಟಿಷರ ಕಾಲದಲ್ಲಿ ಕುರಿ ಸಾಕಣೆಗೆ ಹೆಚ್ಚು ಸಾಕುತ್ತಿದ್ದ ಗ್ರಾಮಗಳನ್ನು ಕುರುಬರಹಳ್ಳಿ ಎಂದು ಕರೆದ ಪರಿಣಾಮ ಆ ಹೆಸರೇ ಉಳಿದು ಕೊಂಡಿದೆ ಎನ್ನಲಾಗಿದೆ. ಇನ್ನೂ ಕುರುಬರಹಳ್ಳಿ ಎನ್ನುವ ಹೆಸರಿನ ಗ್ರಾಮ ತಾಲೂಕಿನಲ್ಲಿ 2&3 ಇವೆ. ರಾಮನಗರಕ್ಕೆ ಹತ್ತಿರವಾಗಿದ್ದ ಕಾರಣ ಇತ್ತೀಚೆಗೆ ಇದು ಪೇಟೆ ಕುರುಬರಹಳ್ಳಿ ಹೆಸರಿನಲ್ಲಿ ಪ್ರಚಲಿತವಾಗಿದೆ.

ಪೇಟೆ ಕುರುಬರಹಳ್ಳಿ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ೇತ್ರಗಳಲ್ಲಿ ಮುಂದಿದೆ. ಎತ್ತರದ ಪ್ರದೇಶವಾದರೂ ಸುತ್ತಲೂ ಹಚ್ಚ ಹಸಿರಿನ ಮಧ್ಯೆ ಸುಂದರ ಪರಿಸರದಲ್ಲಿರುವ ಗ್ರಾಮವಾಗಿದೆ. ಪ್ರತಿ ಮನೆಯಲ್ಲಿಯೂ ಶಿಕ್ಷಣ ಪಡೆದವರಿದ್ದು, ಯಾವುದೇ ದ್ವೇಷ ಅಸೂಯೆ ಇಲ್ಲದೆ ಗ್ರಾಮ ಒಗ್ಗಟ್ಟಿನ ಜೀವನಕ್ಕೆ ಸಾಯಾಗಿದೆ. ಇಂತಹ ಹಿರಿಯರು ಕಟ್ಟಿ ಬೆಳೆಸಿದ ಗ್ರಾಮದಲ್ಲಿ ಜನಿಸಿರುವ ನಾವೇ ಧನ್ಯರು.> ಪುಟ್ಟಸಿದ್ದೇಗೌಡ, ಗ್ರಾಮದ ಯಜಮಾನ, ಪೇಟೆ ಕುರುಬರಹಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net