

ಬೇಲೂರು: ಭಾರತದ ರಾಜಕೀಯ ವಲಯದಲ್ಲಿ ಅನೇಕ ಆವಿಷ್ಕಾರಗಳ ಮೂಲಕ ತಲ್ಲಣ ಸೃಷ್ಟಿಸಿದವರು ಕಾನ್ಶಿರಾಂ ಎಂದು ಬಿಎಸ್‌ಪಿ ರಾಜ್ಯ ಉಪಾಧ್ಯಕ್ಷ ಗಂಗಾಧರ್ ಬಹುಜನ್ ಹೇಳಿದರು.
ಬಿಎಸ್‌ಪಿ ಸಂಸ್ಥಾಪಕ ಕಾನ್ಶಿರಾಂ ಅವರ 17ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಬೇಲೂರು ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ಬಹುಜನ ಸಂಕಲ್ಪ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾನ್ಶಿರಾಂ ಅವರ ಬದುಕು ಮತ್ತು ಹೋರಾಟ ಇಂದಿನ ರಾಜಕೀಯ ವಲಯದಲ್ಲಿರುವ ಪ್ರತಿಯೊಬ್ಬರಿಗೂ ಆದರ್ಶವಾಗಿದೆ. ಭಾರತದ ರಕ್ಷಣಾ ಇಲಾಖೆಯಲ್ಲಿ ವಿಜ್ಞಾನಿಯಾಗಿದ್ದವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ, ತಮ್ಮ ಕುಟುಂಬದಿಂದ ದೂರವಾಗಿ ಅಂಬೇಡ್ಕರ್ ಅವರ ಚಳವಳಿ ಮುನ್ನಡೆಸುತ್ತ್ತಾ ಸಾಮಾಜಿಕ ವ್ಯವಸ್ಥೆಯಲ್ಲಿ ಎಲ್ಲ ಸಮುದಾಯವನ್ನು ಒಗ್ಗೂಡಿಸಿ, ಅವರಲ್ಲಿ ರಾಜಕೀಯ ಪರಿಕಲ್ಪನೆ ಮೂಡಿಸಿದರು. ಸಾವಿರಾರು ವರ್ಷಗಳಿಂದ ಶೋಷಣೆಗೊಳಗಾಗಿದ್ದ ತಳ ಸಮುದಾಯಗಳನ್ನು ಮುನ್ನೆಲೆಗೆ ತಂದರು. ಉತ್ತರ ಪ್ರದೇಶದಲ್ಲಿ ಮಾಯಾವತಿಯನ್ನು ರಾಜಕೀಯಕ್ಕೆ ಕರೆತಂದು ಮೂರು ಬಾರಿ ಮುಖ್ಯಮಂತ್ರಿ ಮಾಡಿದರು ಎಂದರು.
ಜತೆಗೆ ರಾಜಕೀಯ ಅಧಿಕಾರ ಬೇಡಿ ಪಡೆಯುವುದಲ್ಲ ಸ್ವಂತ ಶಕ್ತಿ ಮತ್ತು ಹೋರಾಟದಿಂದ ಅಧಿಕಾರ ಪಡೆಯಲು ಸಾಧ್ಯ ಎಂಬುದನ್ನು ತೋರಿಸಿದರು. ತಾವು ಕಟ್ಟಿದ ಪಕ್ಷವನ್ನು ದೇಶದ ಮೂರನೇ ದೊಡ್ಡ ರಾಷ್ಟ್ರೀಯ ಪಕ್ಷವಾಗಿ ಮುನ್ನಡೆಸಿದವರು. ಅಂಬೇಡ್ಕರ್ ಅವರನ್ನು ಜಗತ್ತಿಗೆ ಅರ್ಥೈಸಿದ ಕೀರ್ತಿ ಕಾನ್ಶಿರಾಂ ಅವರಿಗೆ ಸಲ್ಲುತ್ತದೆ. ಆದ್ದರಿಂದ ಅವರು ಹಾಕಿ ಕೊಟ್ಟ ದಾರಿಯಲ್ಲಿ ನಡೆದು ಡಾ.ಅಂಬೇಡ್ಕರ್ ಮತ್ತು ಕಾನ್ಶಿರಾಂ ಅವರ ಪ್ರಬುದ್ಧ ಭಾರತ ನಿರ್ಮಾಣದ ಕನಸನ್ನು ನನಸು ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಬಿಎಸ್‌ಪಿ ಜಿಲ್ಲಾ ಕಾರ್ಯದರ್ಶಿ ರಾಜು ಬೆಳ್ಳೊಟ್ಟೆ, ತಾಲೂಕು ಅಧ್ಯಕ್ಷ ಪ್ರಕಾಶ್, ಸಂಯೋಜಕ ಉಮೇಶ್, ಪ್ರಧಾನ ಕಾರ್ಯದರ್ಶಿ ಮಂಜುನಾಥ, ಕಾರ್ಯಾಕಾರಿ ಸಮಿತಿ ಸದಸ್ಯರಾದ ನೀಲಾವತಿ, ಹೇಮಲತಾ, ವಕೀಲ ರಾಜೇಶ್, ಮುಖಂಡರಾದ ಹೊನ್ನಯ್ಯ, ಅನಿಲ್, ಸುರೇಶ್, ದ್ಯಾವಪ್ಪ, ಕಾಂತರಾಜು, ತಿಮ್ಮರಾಜು, ಹೇಮಂತ್, ಸುನೀಲ್ ಇತರರಿದ್ದರು.