

ಬೆಂಗಳೂರು: 66ನೇ ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 'ಕನ್ನಡಕ್ಕಾಗಿ ನಾವು' ವಿಶೇಷ ಅಭಿಯಾನವನ್ನು ಹಮ್ಮಿಕೊಂಡಿದ್ದು, ಈ ಅಭಿಯಾನದ ಅಂಗವಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ 'ಮಾತಾಡ್ ಮಾತಾಡ್ ಕನ್ನಡ' ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ಸಚಿವ ವಿ.ಸುನೀಲ್ ಕುಮಾರ್ ಚಾಲನೆ ನೀಡಿದರು.
ಕನ್ನಡ ಭಾಷೆ ಬಳಕೆ ಮಾಡಲು ಕೀಳರಿಮೆ ಬೇಡ. ಇದು ನಮ್ಮ ಭಾಷೆ ಎಂಬ ಅಭಿಮಾನ ಇರಬೇಕು. ಜನರು ಸಾಧ್ಯವಾದಷ್ಟು ಕಡೆ ಕನ್ನಡ ಭಾಷೆಯನ್ನೇ ಹೆಚ್ಚಾಗಿ ಬಳಸಬೇಕು. ಆ ಮೂಲಕ ಕನ್ನಡ ಭಾಷೆ ಬೆಳವಣಿಗೆಗೆ ಸಹಕರಿಸಿ ಎಂದು ಸಚಿವರು ಕರೆ ನೀಡಿದರು.
ಅ.28ರಂದು ರಾಜ್ಯಾದ್ಯಂತ ಒಂದು ಲಕ್ಷ ಕಂಠಗಳಲ್ಲಿ ಮೂರು ಕನ್ನಡ ಗೀತೆಗಳ ಗಾಯನ ಇರಲಿದೆ. ಕನ್ನಡ ಅಭಿಮಾನಿಗಳು ಒಂದೆಡೆ ಸೇರಿ ಆ ಮೂರು ಗೀತೆಗಳನ್ನು ಹಾಡುವ ಮೂಲಕ ತಮ್ಮಲ್ಲಿರುವ ಕನ್ನಡಾಭಿಮಾನವನ್ನು ತೋರಿಸಬೇಕೆಂದು ಮನವಿ ಮಾಡಿದರು.
ಅಭಿಯಾನದ ಹಿನ್ನೆಲೆಯಲ್ಲಿ ತಯಾರಿಸಲಾದ ಭಿತ್ತಿ ಪತ್ರಗಳ ಮತ್ತು ವಿಡಿಯೋಗಳ ಅನಾವರಣ ಮಾಡಿದರು. ಮೈಸೂರಿನ ರಂಗಾಯಣ ಹಮ್ಮಿಕೊಂಡಿರುವ ಡಾ.ಎಸ್.ಎಲ್.ಭೈರಪ್ಪ ಅವರ ಕಾದಂಬರಿ ಆಧಾರಿತ 'ಪರ್ವ' ನಾಟಕಕ್ಕೆ ಚಾಲನೆ ನೀಡಿದರು. ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್.ರಂಗಪ್ಪ ಇತರರು ಇದ್ದರು.