ಕನ್ನಡ ನಮ್ಮ ಹೃದಯದ ಭಾಷೆಯಾಗಲಿ: ಪ್ರಗತಿಪರ ಕೃಷಿಕ ಎನ್.ಕರುಣಾಕರ ಗೋಗಟೆ ಆಶಯ

New Project (3)
Published on

ವಿಜಯವಾಣಿ ಸುದ್ದಿಜಾಲ ಕಡಬ

ಕನ್ನಡದಲ್ಲಿ ನಮ್ಮ ಮಣ್ಣಿನ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ ಎಲ್ಲವೂ ಮಿಳಿತವಾಗಿದೆ. ನಾಡಿನ ಭಾಷೆ ಅರಿಯದೆ, ಉಳಿಸದೆ ಹೋದರೆ ಇವೆಲ್ಲವೂ ನಾಶವಾಗಬಹುದು. ಹಾಗಾಗಿ ಕನ್ನಡವನ್ನು ನಮ್ಮ ಹೃದಯದದ ಭಾಷೆಯನ್ನಾಗಿಸಬೇಕು. ಕನ್ನಡವನ್ನು ಉಳಿಸುವ ಕನ್ನಡ ಸರ್ಕಾರಿ ಶಾಲೆಗಳ ಅಭಿವೃದ್ಧಿಯಾಗಬೇಕು ಎಂದು ಪ್ರಗತಿಪರ ಕೃಷಿಕ ಎನ್.ಕರುಣಾಕರ ಗೋಗಟೆ ಹೇಳಿದರು.

ಕಡಬ ತಾಲೂಕು ಕುಂತೂರುಪದವು ಸಂತ ಜಾರ್ಜ್ ಅನುದಾನಿತ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಶನಿವಾರ ಜಿಲ್ಲಾ ಕನ್ನಡ ಸಾಹಿತ್ಯ ಸಾಹಿತ್ಯ ಪರಿಷತ್‌ನ ಕಡಬ ತಾಲೂಕು ಘಟಕದ ವತಿಯಿಂದ ನಡೆದ 4ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.

ಕವಿ ಹಾಗೂ ಸಾಹಿತಿ ಡಾ.ವಸಂತ ಕುಮಾರ್ ಪೆರ್ಲ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ನಮ್ಮ ಮಣ್ಣಿನ ಭಾಷೆ ಕನ್ನಡ ಯಾವಾಗಲೂ ಹೃದಯದ ಭಾಷೆಯಾಗಿರುತ್ತದೆ. ಅದನ್ನು ಪೋಷಿಸುವ ಕೆಲಸವಾಗಬೇಕು. ಕನ್ನಡ ಶಾಲೆಗಳನ್ನು ಬೆಳೆಸಿದಾಗ ಕನ್ನಡ ನಾಡು ನುಡಿ, ಸಾಹಿತ್ಯವನ್ನು ಸಂರಕ್ಷಿಸಿದಂತೆ. ಸರ್ಕಾರ ಬಜೆಟ್‌ನ ಶೇ.5ರಷ್ಟು ಭಾಗವನ್ನು ಕನ್ನಡದ ಅಭಿವೃದ್ಧಿಗೆ ಮೀಸಲಿಡಬೇಕು ಎಂದರು.

ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಕೆ.ಸೀತಾರಾಮ ರೈ ಸಮ್ಮೇಳನದ ದೀಪಪ್ರಜ್ವಲನೆ ಮಾಡಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರೆ.ಫಾ.ನಿತಿನ್ ಮ್ಯಾಥ್ಯೂ ಆಶೀರ್ವಚನ ನೀಡಿದರು. ಕಲಾ ಪ್ರದರ್ಶನವನ್ನು ಕಡಬ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು, ಪುಸ್ತಕ ಪ್ರದರ್ಶನ ಮಳಿಗೆಯನ್ನು ಕಡಬ ಕನ್ನಡ ಸಾಹಿತ್ಯ ಪರಿಷತ್ ಸಮಿತಿ ಸದಸ್ಯ ಮಹಮ್ಮದ್ ಕುಂಞಿ, ವಿಜ್ಞಾನ ಪ್ರದರ್ಶನವನ್ನು ಕುಂತೂರು ಪದವು ಸಂತ ಜಾರ್ಜ್ ಅನುದಾನಿತ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮಾಜಿ ಸಂಚಾಲಕ ರಾಯ್ ಅಬ್ರಹಾಂ, ಪ್ರಾಚ್ಯವಸ್ತು ಪ್ರದರ್ಶನ ಮಳಿಗೆಯನ್ನು , ಸ್ವಾಗತ ಸಮಿತಿ ಅಧ್ಯಕ್ಷ ಗುರುರಾಜ್ ರೈ ಉದ್ಘಾಟಿಸಿದರು.

ಕೆಕೆಎಂಎಫ್ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ಕ.ಸಾ.ಪ ಜಿಲ್ಲಾಧ್ಯಕ್ಷ ಡಾ.ಎಂ.ಪಿ ಶ್ರೀನಾಥ ಆಶಯ ನುಡಿಗಳ್ಳನ್ನಾಡಿದರು. ಜಿಪಂ ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ಸಮ್ಮೇಳನದ ಆರ್ಥಿಕ ಸಮಿತಿ ಸಂಚಾಲಕ ವಿ.ಐ.ಅಬ್ರಾಹಂ, ಕ.ಸಾ.ಪ ಕಡಬ ಹೋಬಳಿ ಅಧ್ಯಕ್ಷ ಪದ್ಮಪ್ಪ ಗೌಡ, ಗೌರವ ಕಾರ್ಯದರ್ಶಿ ನಾಗರಾಜ್ ಎನ್.ಕೆ., ಆಲಂಕಾರು ಗ್ರಾ.ಪಂ ಅಧ್ಯಕ್ಷೆ ಸುಶೀಲ, ಕೊಲ ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ಸುಭಾಶ್ ಶೆಟ್ಟಿ, ರಾಮಕುಂಜ ಗ್ರಾ.ಪಂ ಅಧ್ಯಕ್ಷೆ ಸುಚೇತಾ, ಸಿ ಆರ್ ಪಿ.ಮಹೇಶ್, ನಿಕಪೂರ್ವ ಸಮ್ಮೇಳನಾಧ್ಯಕ್ಷ ಗಣರಾಜ ಕುಂಬ್ಳೆ ಇದ್ದರು.

ಕುಂತೂರು ಪದವು ಸಂತ ಜಾರ್ಜ್ ಅನುದಾನಿತ ಕನ್ನಡ ಮಾದ್ಯಮ ಪ್ರೌಢಶಾಲಾ ಮುಖ್ಯ ಶಿಕ್ಷಕ ಹರಿಶ್ಚಂದ್ರ ಕೆ.ಸ್ವಾಗತಿಸಿದರು. ಬಾಲಚಂದ್ರ ಮುಚ್ಚಿಂತಾಯ ವಂದಿಸಿದರು. ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಚಂದ್ರಶೇಖರ ಕೆದ್ದೋಟೆ, ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲಾ ಶಿಕ್ಷಕಿ ಸರಿತಾ ಜನಾರ್ದನ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಟಿ.ನಾರಾಯಣ ಭಟ್, ಕೊಂಡಾಡಿಕೊಪ್ಪ ಸರ್ಕಾರಿ ಶಾಲಾಶಿಕ್ಷಕ ಜಯಂತ ವೈ.ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ವಿಚಾರಗೋಷ್ಠಿ, ಕೃತಿ ಬಿಡುಗಡೆ, ಸಾಂಸ್ಕೃತಿಕ ಕಾರ್ಯಕ್ರಮ, ಕವಿಗೋಷ್ಠಿ, ಸಮ್ಮೇಳಾಧ್ಯಕ್ಷರೊಂದಿಗೆ ಸಂವಾದ, ಸಾಧಕರಿಗೆ ಸನ್ಮಾನ ನಡೆಯಿತು.

ಕನ್ನಡ ಭುವನೇಶ್ವರಿಯ ಮೆರವಣಿಗೆ

ಸಮ್ಮೇಳನದ ಉದ್ಘಾಟನೆಗೆ ಮೊದಲು ಕನ್ನಡ ಭುವನೇಶ್ವರಿಯ ವೈಭವದ ಮೆರವಣಿಗೆ ನಡೆಯಿತು. ಪದವು ಸಂತ ಜಾರ್ಜ್ ಆರ್ಥೋಡಾಕ್ಸ್ ಚರ್ಚ್‌ನ ಮುಂಭಾಗದಿಂದ ಸಮ್ಮೇಳನದ ವೇದಿಕೆ ತನಕ ಮೆರವಣಿಗೆ ನಡೆಯಿತು. ಕಲಶ ಹೊತ್ತ ಮಹಿಳೆಯರು, ಚೆಂಡೆ ಸದ್ದು, ಗೊಂಬೆ ಕುಣಿತ ಮೆರವಣಿಗೆಗೆ ಮೆರುಗು ನೀಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net