ಕಸಾಪಕ್ಕೆ 1 ಕೋಟಿ ಸದಸ್ಯತ್ವ ಗುರಿ : ನಾಡೋಜ ಡಾ.ಮಹೇಶ್ ಜೋಷಿ

Kasapa_Programme
Published on

ತುಮಕೂರು: ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸುವ ಎಲ್ಲಾ ಕಾರ್ಯಕ್ರಮಗಳನ್ನು ಇನ್ಮುಂದೆ ಸ್ವಂತ ಸಂಪನ್ಮೂಲದಿಂದ ನಡೆಸುವ ಉದ್ದೇಶದಿಂದ 1 ಕೋಟಿ ಸದಸ್ಯರನ್ನು ನೊಂದಾಯಿಸುವ ಗುರಿ ಹೊಂದಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಷಿ ಹೇಳಿದರು.

ನಗರದ ಕನ್ನಡ ಭವನದಲ್ಲಿ ಶನಿವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ಪ್ರೊ.ಸಿ.ಎಚ್.ಮರಿದೇವರು ದತ್ತಿ ಪ್ರಶಸ್ತಿ ಪ್ರದಾನ ಮತ್ತು ಕಸಾಪ ಸದಸ್ಯತ್ವ ಅಭಿಯಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಒಂದು ಕೋಟಿ ಸದಸ್ಯರ ವಂತಿಗೆ ಹಣ ಸುಮಾರು 250 ಕೋಟಿ ರೂ.,ಗಳಾಗಲಿದೆ. ಈ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ರೂಪದಲ್ಲಿ ಇಟ್ಟರೆ, ಅದಕ್ಕೆ ಬರುವ ಬಡ್ಡಿ ಹಣದಲ್ಲೇ ವರ್ಷವಿಡೀ ನಡೆಯುವ ಕನ್ನಡ ಕಾರ್ಯಕ್ರಮಗಳಿಗೆ ಅನುದಾನಕ್ಕೆ ಸರ್ಕಾರದ ಮುಂದೆ ಕೈಕಟ್ಟಿ ನಿಲ್ಲುವುದು ತಪ್ಪಲಿದೆ ಎಂದರು.

ಶೇ.40 ಭಾಷೆಗಳು ಅಳಿವಿನಂಚಿಗೆ !: ಜಗತ್ತಿನ 7588 ಭಾಷೆಗಳಲ್ಲಿ ಶೇ.40ರಷ್ಟು ಭಾಷೆಗಳು ಬಳಕೆ ಮಾಡುವವರಿಲ್ಲದೆ ಅಳಿವಿನ ಅಂಚಿಗೆ ಸೇರಿವೆ. ದ್ರಾವಿಡ ಭಾಷೆಗಳೆಂದು ಕರೆಯುವ ದಕ್ಷಿಣ ಭಾರತದ ಭಾಷೆಗಳಲ್ಲಿಯೇ ಕನ್ನಡ ಅತ್ಯಂತ ಪರಿಪೂರ್ಣ ಭಾಷೆ ಎನಿಸಿದೆ. ಹಿಂದಿ, ಇಂಗ್ಲೀಷ್ ಆಗಲಿ ಸಮೀಕ್ಷೆಯ ಪ್ರಕಾರ ಪರಿಪೂರ್ಣ ಭಾಷೆಯಲ್ಲ ಎಂದು ಮಹೇಶ್ ಜೋಷಿ ಹೇಳಿದರು.

ನಮ್ಮ ಯುವಜನರಲ್ಲಿ ಕನ್ನಡದ ಬಗ್ಗೆ ಅಭಿಮಾನ ಕ್ಷೀಣಿಸುತ್ತಿರುವ ಪರಿಣಾಮ ನಮ್ಮ ನಾಡಲ್ಲೇ ಕನ್ನಡ ಮಾತನಾಡುವವರ ಸಂಖ್ಯೆ ಶೇ.64ರಷ್ಟಿದೆ. ಪ್ರತಿಷ್ಟೆ, ಕೀಳರಿಮೆಯಿಂದ ಕನ್ನಡ ಮಾತನಾಡುವವರ ಸಂಖ್ಯೆ ಕ್ಷೀಣಿಸಿದೆ. ಮಾತೃಭಾಷೆಯನ್ನು ಯುವಜನರು ಹೆಚ್ಚು ಹೆಚ್ಚು ಬಳಸುವಂತಾಗಬೇಕು ಎಂದರು.

ರಾಜೀ ಮಾಡಿಕೊಳ್ಳದ ಸ್ವಭಾವ: ಸಿ.ಹೆಚ್.ಮರಿದೇವರು ಮತ್ತು ನಾನು ಒಂದೇ ತಾಲೂಕಿನವರು. ಅವರ ನೇರ ಮತ್ತು ನಿಷ್ಠೂರ ನಡೆ ವ್ಯಕ್ತಿತ್ವದವರು. ಯಾವುದಕ್ಕೂ ರಾಜೀ ಮಾಡಿಕೊಳ್ಳದ ಅವರ ಸ್ವಭಾವ ನನಗೆ ಬಹಳ ಇಷ್ಟ. ಕನ್ನಡ ಭವನ ಕಟ್ಟಬೇಕೆಂಬ ಅವರ ಒತ್ತಾಸೆಯ ಫಲವಾಗಿ 2001ರಲ್ಲಿ ನಡೆದ 69ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರಿ ನೌಕರರು ನೀಡಿದ ದೇಣಿಗೆಯಲ್ಲಿ ಸ್ವಂತ ನಿವೇಶನ ಖರೀದಿಸಿ, ಕನ್ನಡ ಭವನ ನಿರ್ಮಿಸಲಾಗಿದೆ. ಕನ್ನಡ ಕಟ್ಟುವ ಕೆಲಸದಲ್ಲಿ ನಿರಂತರವಾಗಿ ಕಸಾಪ ಜೊತೆ ಕೈಜೋಡಿಸುವುದಾಗಿ ದೆಹಲಿ ವಿಶೇಷ ಪ್ರತಿನಿಧಿ, ಶಾಸಕ ಟಿ.ಬಿ.ಜಯಚಂದ್ರ ಭರವಸೆ ನೀಡಿದರು.

ಕನ್ನಡ ಎಂಬುದು ಜನಸಾಮಾನ್ಯರ ಭಾಷೆ. ಆದರೆ ಇಂದಿನ ಯುವಜನತೆ ಉದ್ಯೋಗ ಮತ್ತಿತರರ ಕಾರಣಗಳಿಗಾಗಿ ಬೇರೆ ಭಾಷೆಗಳನ್ನು ಕಲಿಯಲು ಆಸಕ್ತಿ ತೋರುತ್ತಿರುವುದರ ಪರಿಣಾಮ ಕನ್ನಡಕ್ಕೆ ಕೊಂಚ ಹಿನ್ನೆಡೆಯಾಗಿದೆ ಎನ್ನಬಹುದು. ಕನ್ನಡ ಪ್ರಾಥಮಿಕ ಭಾಷೆಯಾಗಬೇಕು. ಸದಸ್ಯತ್ವ ಅಭಿಯಾನಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಕೇಂದ್ರ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳಾದ ನೇ.ಭ.ರಾಮಲಿಂಗಶೆಟ್ಟಿ,ಡಾ.ಪದ್ಮಿನಿ ನಾಗರಾಜು, ಗೌರವ ಕೋಶಾಧ್ಯಕ್ಷ ಬಿ.ಎಂ.ಪಟೇಲ್ ಪಾಂಡು, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಮಹದೇವಪ್ಪ, ಉಮಾಮಹೇಶ್, ರಾಣಿ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.

ದತ್ತಿ ಪ್ರಶಸ್ತಿ ಪುರಸ್ಕೃತರು 2022ನೇ ಸಾಲಿನ ಪ್ರೊ.ಸಿ.ಹೆಚ್.ಮರಿದೇವರು ದತ್ತಿ ಪ್ರಶಸ್ತಿಯನ್ನು ಸಾಹಿತ್ಯ ಕ್ಷೇತ್ರದಲ್ಲಿ ಡಾ.ಡಿ.ಎನ್. ಯೋಗೀಶ್ವರಪ್ಪ, ಕ್ರೀಡಾ ಕ್ಷೇತ್ರದಿಂದ ಥ್ರೋಬಾಲ್ ಆಟಗಾರ ಎಂ.ಸಾಗರ್, ಕನ್ನಡ ಸೇವೆಗೆ ಸುಶೀಲಾ ಸದಾಶಿವಯ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಧಾರವಾಡದ ಕೆ.ಇ. ಬೋರ್ಡ್ ಶಿಕ್ಷಣ ಸಂಸ್ಥೆಯ ಗೋವಿಂದರೆಡ್ಡಿ ಅವರಿಗೆ ನೀಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net