ಕಸಾಪ ಕಾಸರಗೋಡು ಜಿಲ್ಲಾಧ್ಯಕ್ಷ ಎಸ್.ವಿ ಭಟ್ ಇನ್ನಿಲ್ಲ

ಎಸ್.ವಿ ಭಟ್
ಎಸ್.ವಿ ಭಟ್
Published on

ಕಾಸರಗೋಡು: ಬೀರಂತಬೈಲ್ ನಿವಾಸಿ, ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ ಭಟ್ ಎಂದೇ ಪರಿಚಿತರಾಗಿರುವ ಸುಬ್ರಹ್ಮಣ್ಯ ವೆಂಕಟ್ರಮಣ ಭಟ್(72)ಭಾನುವಾರ ಹೃದಯಾಘಾತದಿಂದ ನಿಧನರಾದರು. ಬದಿಯಡ್ಕ ಸನಿಹ ವಳಮಲೆಯಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಎದೆನೋವಿನಿಂದ ಕುಸಿದು ಬಿದ್ದಿದ್ದು, ತಕ್ಷಣ ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ.

ಸತತ ಮೂರು ಬಾರಿ ಕಾಸರಗೋಡು ಜಿಲ್ಲಾ ಕಸಾಪ ಅಧ್ಯಕ್ಷರಾಗಿದ್ದರು. ಮೂಲತಃ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ಸಾಲಕೋಡು ನಿವಾಸಿಯಾಗಿರುವ ಅವರು, 1975ರಲ್ಲಿ ಕಾಸರಗೋಡಿಗೆ ಆಗಮಿಸಿದ್ದರು. ಧಾರವಾಡ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದು, ಕುಮಟಾದಲ್ಲಿ ಬಿ.ಇಡಿ ಶಿಕ್ಷಣ ಪೂರೈಸಿರುವ ಅವರು ಕಾಸರಗೋಡಿನ ವಿವಿಧ ಶಾಲೆಗಳಲ್ಲಿ ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ, ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು, ನಂತರ ತಮ್ಮ ಸಂಪೂರ್ಣ ಕಾಲಾವಧಿಯನ್ನು ಕನ್ನಡಪರ ಚಟುವಟಿಕೆಗಳಿಗೆ ಮೀಸಲಿರಿಸಿದ್ದರು. ಜಿಲ್ಲಾ ಕಸಾಪ ವತಿಯಿಂದ ಹಲವಾರು ಜಿಲ್ಲಾ ಸಮ್ಮೇಳನವನ್ನು ನಡೆಸಿಕೊಟ್ಟಿದ್ದರು.

ಪಠ್ಯಪುಸ್ತಕ, ಆಧಾರಗ್ರಂಥ, ಸಹಾಯ ಕೈಪಿಡಿ ರಚನೆಯಲ್ಲಿ ಅವರು ತೊಡಗಿಸಿಕೊಂಡಿದ್ದರು. ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ, ಕೇರಳ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಪದಾಧಿಕಾರಿ, ಕಾಸರಗೋಡು ಹವ್ಯಕ ಸಭಾ ಕಾರ್ಯದರ್ಶಿಯಾಗಿದ್ದರು.ಯಕ್ಷಗಾನ ವೇಷಧಾರಿ ಹಾಗೂ ಅರ್ಥಧಾರಿಯಾಗಿ ಗಮನಸೆಳೆದಿದ್ದರು. ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಸೋಮವಾರ ಬೀರಂತಬೈಲಿನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net