ಋತುವಿನಲ್ಲಿ 23 ಕಂಬಳ ಪ್ರಸ್ತಾಪ

kambala
ಅವಿಭಜಿತ ದಕ್ಷಿಣ ಕನ್ನಡ ಕಂಬಳ ಜಿಲ್ಲಾ ಕಂಬಳ ಸಮಿತಿಯ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಬೆಳಪು ದೇವಿಪ್ರಸಾದ್ ಶೆಟ್ಟಿ, ನಿರ್ಗಮಿತ ಅಧ್ಯಕ್ಷ ಏರ್ಮಾಳ್ ರೋಹಿತ್ ಹೆಗ್ಡೆ, ಉಪ್ಪಿನಂಗಡಿ ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ, ಸಮಿತಿಯ ಮಾಜಿ ಅಧ್ಯಕ್ಷರಾದ ಪಿ.ಆರ್ ಶೆಟ್ಟಿ ಮೊದಲಾದವರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಕಳೆದ ವರ್ಷ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 18 ಕಂಬಳಗಳು ನಡೆದಿದ್ದು, ಈ ಬಾರಿ ಹೊಸ ಕಂಬಳಗಳೂ ಸೇರಿ 23 ಕಂಬಳ ನಡೆಸುವ ವಿಷಯದ ಬಗ್ಗೆ ಭಾನುವಾರ ನಡೆದ ಜಿಲ್ಲಾ ಕಂಬಳ ಸಮಿತಿಯ ಮಹಾಸಭೆಯಲ್ಲಿ ಪ್ರಸ್ತಾಪವಾಯಿತು. ಸೆಪ್ಟೆಂಬರ್ 18ರಂದು ಮೂಡುಬಿದಿರೆಯಲ್ಲಿ ಜಿಲ್ಲಾ ಕಂಬಳ ಸಮಿತಿಯ ಸಭೆ ನಡೆಸಿ, ಈ ಋತುವಿನ ವೇಳಾಪಟ್ಟಿ ಬಿಡುಗಡೆ ಮಾಡಲು ತೀರ್ಮಾನಿಸಲಾಯಿತು. ಕಳೆದ ವರ್ಷ 18 ಕಂಬಳಗಳು ನಡೆದಿದ್ದು, ಈ ಬಾರಿ ಹೊಸ ಕಂಬಳ ಸಹಿತ 23 ಕಂಬಳಗಳು ನಡೆಯುವ ನಿರೀಕ್ಷೆ ಇದೆ ಎಂದು ಪ್ರಸ್ತಾಪಿಸಲಾಯಿತು.

ನಿರ್ಗಮಿತ ಅಧ್ಯಕ್ಷ ಎರ್ಮಾಳ್ ರೋಹಿತ್ ಹೆಗ್ಡೆ ಅಧ್ಯಕ್ಷತೆಯಲ್ಲಿ ಭಾನುವಾರ ಮೂಡುಬಿದಿರೆ ಒಂಟಿಕಟ್ಟೆಯಲ್ಲಿ ನಡೆದ ಸಮಿತಿಯ ಮಹಾಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯೂ ನಡೆಯಿತು. ಅವಿಭಜಿತ ದ.ಕ. ಜಿಲ್ಲಾ ಕಂಬಳ ಸಮಿತಿಯ ನೂತನ ಅಧ್ಯಕ್ಷರಾಗಿ ಬೆಳಪು ದೇವಿಪ್ರಸಾದ್ ಶೆಟ್ಟಿ ಅವರನ್ನು ಅವಿರೋಧವಾಗು ಆಯ್ಕೆ ಮಾಡಲಾಯಿತು. ಕಾರ್ಯಾಧ್ಯಕ್ಷರಾಗಿ ಗುಣಪಾಲ ಕಡಂಬ, ಪ್ರಧಾನ ಕಾರ್ಯದರ್ಶಿ ಮುಚ್ಚೂರು ಕಲ್ಕುಡ ಲೋಕೇಶ್ ಶೆಟ್ಟಿಯವರನ್ನು ಮುಂದಿನ ಎರಡು ವರ್ಷಗಳ ಅವಧಿಗೆ ಆಯ್ಕೆ ಮಾಡಲಾಗಿದೆ. ಎರ್ಮಾಳ್ ರೋಹಿತ್ ಹೆಗ್ಡೆ( ಗೌರವಾಧ್ಯಕ್ಷರು), ಚಂದ್ರಹಾಸ ಸನಿಲ್(ಕೋಶಾಧಿಕಾರಿ), ರಕ್ಷಿತ್ ಶೆಟ್ಟಿ, ಶಕ್ತಿಪ್ರಸಾದ್ ಶೆಟ್ಟಿ (ಉಪಾಧ್ಯಕ್ಷರು), ವಿದ್ಯಾಧರ್ ಜೈನ್(ಉಪ ಕಾರ್ಯದರ್ಶಿ) ಹಾಗೂ ತೀರ್ಪುಗಾರರ ಸಂಚಾಲಕರಾಗಿ ವಿಜಯಕುಮಾರ್ ಕಂಗಿನಮನೆ ಆಯ್ಕೆಯಾಗಿದ್ದಾರೆ.

ನವೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಆಯೋಜನೆ

ಪುತ್ತೂರು ಶಾಸಕ, ಉಪ್ಪಿನಂಗಡಿ ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ಮಾತನಾಡಿ, ನವೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಕಂಬಳ ಆಯೋಜನೆಯ ತಯಾರಿ ನಡೆಯುತ್ತಿದೆ. ಜಿಲ್ಲಾ ಕಂಬಳ ಸಮಿತಿ ಹಾಗೂ ಇತರ ಕಂಬಳ ಸಮಿತಿಗಳ ಸಹಕಾರದ ನಿರೀಕ್ಷೆಯಲ್ಲಿದ್ದೇವೆ. ಒಂದು ಲಕ್ಷಕ್ಕೂ ಅಧಿಕ ಮಂದಿ ಕಂಬಳ ವೀಕ್ಷಣೆ ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ. ಭಾಗವಹಿಸುವವರಿಗೆ ಆನ್‌ಲೈನ್ ಮುಖಾಂತರ ಪಾಸ್ ಒದಗಿಸಲಾಗುವುದು. ನೇರಪ್ರಸಾರಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದ ಎರಡು ಸ್ಪೋರ್ಟ್ಸ್ ಚಾನೆಲ್‌ಗಳು ಸಂಪರ್ಕಿಸಿವೆ ಎಂದು ಹೇಳಿದರು.

ಬೆಳಪು ದೇವಿಪ್ರಸಾದ್ ಶೆಟ್ಟಿ, ಸಮಿತಿ ಮಾಜಿ ಅಧ್ಯಕ್ಷರಾದ ಪಿ.ಆರ್.ಶೆಟ್ಟಿ, ಭಾಸ್ಕರ್ ಎಸ್.ಕೋಟ್ಯಾನ್, ಶಾಂತಾರಾಮ ಶೆಟ್ಟಿ ಬಾರ್ಕೂರು, ಮೂಲ್ಕಿ ಸೀಮೆಯ ದುಗ್ಗಣ್ಣ ಸಾಮಂತ, ಕಂಬಳ ಅಕಾಡೆಮಿ ಸಂಚಾಲಕ ಗುಣಪಾಲ ಕಡಂಬ, ನಿರ್ಗಮನ ಕಾರ್ಯದರ್ಶಿ ರಕ್ಷಿತ್ ಜೈನ್, ಪ್ರಮುಖರಾದ ಶ್ರೀಕಾಂತ್ ಭಟ್ ನಂದಳಿಕೆ, ಇರುವೈಲ್ ಸತೀಶ್ಚಂದ್ರ ಸಾಲ್ಯಾನ್, ಬೆಳ್ಳಿಪಾಡಿ ಕೈಪ ಕೇಶವ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.

ಕಂಬಳ ಕ್ಷೇತ್ರದ ಹಿರಿಯರ ಮಾರ್ಗದರ್ಶನ, ಕಿರಿಯರ ಸಹಕಾರದಿಂದ ಸಮಿತಿಯನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುತ್ತೇನೆ. ಯಾವುದೇ ಸಮಸ್ಯೆ ಬಂದಾಗ ಕಂಬಳ ಕ್ಷೇತ್ರದ ಅನುಭವಿಗಳ ಸಲಹೆ, ಸೂಚನೆ ಪಡೆದು ಪರಿಹರಿಸೋಣ. ಗುಂಪುಗಾರಿಕೆಗೆ ಅವಕಾಶ ನೀಡುವುದು ಬೇಡ. ಸಕಾರಾತ್ಮಕ ಕಂಬಳ ಮಾಡೋಣ. ಭಾಸ್ಕರ್ ಕೋಟ್ಯಾನ್ ನೇತೃತ್ವದ ಕಂಬಳ ಶಿಸ್ತು ಸಮಿತಿಗೆ ಮತ್ತಷ್ಟು ಬಲ ನೀಡಿ, ಅಚ್ಚುಕಟ್ಟಾಗಿ ಕಂಬಳ ಹಾಗೂ ಸಮಿತಿ ಕಾರ್ಯನಿರ್ವಹಿಸಲಿದೆ. - ಬೆಳಪು ದೇವಿಪ್ರಸಾದ್ ಶೆಟ್ಟಿಅವಿಭಜಿತ ದ.ಕ ಜಿಲ್ಲಾ ಕಂಬಳ ಸಮಿತಿ ನೂತನ ಅಧ್ಯಕ್ಷ https://www.vijayavani.net/zone-level-high-school-division-throwball-tournament https://www.vijayavani.net/anniversary-unveiling-of-new-book

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net