

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ನೀಡುವ 2024ನೇ ಸಾಲಿನ ‘ಡಾ. ಟಿ.ವಿ. ವೆಂಕಟಾಚಲ ಶಾಸಿ ವಿದ್ವತ್ ದತ್ತಿ ಪ್ರಶಸ್ತಿ’ಗೆ ಹಿರಿಯ ಸಂಶೋಧಕ ಡಾ. ಪಿ. ಶ್ರೀಕೃಷ್ಣಭಟ್ ಭಾಜನರಾಗಿದ್ದಾರೆ. ವೆಂಕಟಾಚಲ ಶಾಸ್ತ್ರಿಗಳ ಬಂಧು-ಮಿತ್ರರು ಈ ದತ್ತಿಯನ್ನು ಸ್ಥಾಪಿಸಿದ್ದಾರೆ.
ಹಳಗನ್ನಡ ಸಾಹಿತ್ಯ, ಛಂದಸ್ಸು, ನಿಘಂಟು ರಚನೆ, ಗ್ರಂಥ ಸಂಪಾದನೆ, ಅನುವಾದ, ಭಾಷಾಶಾಸ್ತ್ರ ಮೊದಲಾದ ಶಾಸ್ತ್ರ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಈ ಪುರಸ್ಕಾರ ನೀಡಲಾಗುತ್ತದೆ. ಕಾಸರಗೋಡು ಮೂಲದ ಡಾ. ಪಿ. ಶ್ರೀಕೃಷ್ಣಭಟ್, ‘ಕನ್ನಡ ವ್ಯಾಕರಣ ಪರಂಪರೆ ಮೇಲೆ ಸಂಸ್ಕೃತದ ಪ್ರಭಾವ’ ಎಂಬ ವಿಷಯದಲ್ಲಿ ಸಂಶೋಧನೆ ನಡೆಸಿ ಡಾಕ್ಟರೇಟ್ ಪಡೆದಿದ್ದಾರೆ.
ಕಾಸರಗೋಡಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿ ಕನ್ನಡ ಪ್ರಾಧ್ಯಾಪಕ ಮತ್ತು ವಿಭಾಗದ ಮುಖ್ಯಸ್ಥರಾಗಿ ಮತ್ತು ಕಣ್ಣೂರು ವಿಶ್ವವಿದ್ಯಾಲಯದ ಭಾರತೀಯ ಭಾಷಾ ಅಧ್ಯಯನಾಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಗಡಿ ಭಾಗದಲ್ಲಿ ಕನ್ನಡ ಭಾಷೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.