

ಬೆಂಗಳೂರು: ಮಹಾರಾಷ್ಟ್ರದಲ್ಲಿನ ಕನ್ನಡ ಶಾಲೆಗಳಿಗೆ ಮರಾಠಿ ಅಧ್ಯಾಪಕರ ನೇಮಕ ಮಾಡಿರುವ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಆತಂಕ ವ್ಯಕ್ತಪಡಿಸಿದ್ದಾರೆ.
ಇದು ಗಡಿ ಭಾಗದಲ್ಲಿ ಕನ್ನಡವನ್ನು ಕ್ರಮೇಣ ಅಳಿಸುವ ಹುನ್ನಾರವಾಗಿದೆ. ಇಂತಹದೇ ಪರಿಸ್ಥಿತಿ ಕೇರಳದ ಕಾಸರಗೋಡಿನಲ್ಲಿ ನಿರ್ಮಾಣವಾಗಿತ್ತು. ಈಗ ಮಹಾರಾಷ್ಟ್ರಕ್ಕೂ ವ್ಯಾಪಿಸಿದೆ. ಈ ಕ್ರಮ ಕನ್ನಡಿಗರು ಎಚ್ಚೆತ್ತು ಕೊಳ್ಳ ಬೇಕಾದ ಅನಿವಾರ್ಯತೆಯನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ಸರ್ಕಾರವು ಅಲ್ಲಿನ ಜತ್ ತಾಲೂಕಿನ 11 ಮತ್ತು ಸೊಲ್ಲಾಪುರ ಜಿಲ್ಲೆಯಗಡಿ ಭಾಗದ ಸರ್ಕಾರಿ ಶಾಲೆಗಳಿಗೆ 13 ಸೇರಿ ಒಟ್ಟು 24 ಶಿಕ್ಷಕರನ್ನು ನೇಮಕ ಮಾಡಿದೆ. ಇವರಲ್ಲಿ ಕೇವಲ 7 ಮಂದಿ ಮತ್ರ ಕನ್ನಡ ಕಲಿತವರು. ಅದೇ ರೀತಿ ಸಾಂಗ್ಲಿ ಜಿಲ್ಲಾ ಪಂಚಾಯಿತಿ ಕನ್ನಡ ಶಾಲೆಗಳಿಗೆ ನೇಮಕ ಮಾಡಿರುವ 24 ಶಿಕ್ಷಕರಲ್ಲಿ ಕನ್ನಡಿಗರು ಕೇವಲ ನಾಲ್ಕು ಮಂದಿ ಮಾತ್ರ. ಈ ಭಾಗದಲ್ಲಿ ಕನ್ನಡ ಡಿ.ಎಡ್ ಮಾಡಿದ ನೂರಾರು ಶಿಕ್ಷಕರಿದ್ದರೂ, ಸರ್ಕಾರದ ಈ ಕ್ರಮ ಮುಂದಿನ ಪೀಳಿಗೆ ಕನ್ನಡ ಕಲಿಯದೆ ಆ ಭಾಗದಲ್ಲಿ ಕನ್ನಡ ಸಂಪೂರ್ಣ ಅಳಿಸಿ ಹೋಗುವಂತೆ ಮಾಡುವ ಸಂಚು ಎಂದು ಆತಂಕ ವ್ಯಕ್ತಪಡಿಸಿರುವ ಅವರು, ಸರ್ಕಾರದ ದೋರಣೆಯನ್ನು ಖಂಡಿಸಿದ್ದಾರೆ.
ಈ ಕುರಿತು ಅಲ್ಲಿನ ಕನ್ನಡ ಹೋರಾಟಗಾರರು ಮತ್ತು ಕನ್ನಡ ಸಂಘಗಳು ರೂಪಿಸಿರುವ ಹೋರಾಟಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಸಂಪೂರ್ಣ ಬೆಂಬಲ ನೀಡಲಿದ್ದು, ಈ ಕುರಿತು ಸಮಗ್ರ ಅಧ್ಯಯನ ನಡೆದು ಗಡಿ ಭಾಗದಲ್ಲಿನ ಶಿಕ್ಷಕರ ನೇಮಕದ ಕುರಿತು ಸ್ಪಷ್ಟ ಶಾಸನಾತ್ಮಕ ನಿರ್ಣಯವನ್ನು ರಾಜ್ಯ ಸರ್ಕಾರ ಕೈಗೊಳ್ಳಬೇಕೆಂದು ನಾಡೋಜ ಡಾ.ಮಹೇಶ ಜೋಶಿಯವರು ಆಗ್ರಹಿಸಿದ್ದಾರೆ.