ಕನ್ನಡ ಸಾಹಿತ್ಯದ ವಿಶಿಷ್ಟ ಧ್ವನಿ ನಿರಂಜನ: ಡಾ. ಮಹೇಶ ಜೋಶಿ

Kasapa
Published on

ಬೆಂಗಳೂರು: ಆಕ್ರೋಶದ ಅಭಿವ್ಯಕ್ತಿಯಲ್ಲಿಯೂ ಸೂಕ್ಷ್ಮತೆಯನ್ನು ಪರಿಚಯಿಸಿದ, ಅಂಕಣ ಬರಹಗಳಿಗೆ ಘನತೆ ತಂದುಕೊಟ್ಟ ಕನ್ನಡದ ವಿಶಿಷ್ಟ ಬರಹಗಾರ ನಿರಂಜನ ಎಂದು ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಹೇಳಿದರು.

ಬರಹಗಾರ ನಿರಂಜನ ಅವರ ಜನ್ಮದಿನದ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶನಿವಾರ ನಡೆಸ ಸರಳ ಸಮಾರಂಭದಲ್ಲಿ ನಿರಂಜನರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಸಾಹಿತ್ಯದಲ್ಲಿ ತಾತ್ವಿಕತೆಯನ್ನು ತಂದಾಗಲೂ ಸೃಜನಶೀಲತೆಯ ಕುಶಲತೆ ಮುಕ್ಕಾಗದಂತೆ ನೋಡಿ ಕೊಂಡವರು. ಕಿರಿಯರ ವಿಶ್ವಕೋಶ ಮತ್ತು ವಿಶ್ವಕಥಾಕೋಶಗಳ ಮೂಲಕ ವಿಶ್ವಕೋಶದ ಸಾಧ್ಯತೆಗಳನ್ನು ಕನ್ನಡಕ್ಕೆ ಸಮರ್ಥವಾಗಿ ಪರಿಚಯಿಸಿದವರು. ಹೀಗೆ ನಿರಂಜನ ಅವರ ಸಾಕಷ್ಟು ಅನನ್ಯತೆಗಳನ್ನು ಹೊಂದಿದ್ದಂತಹವರು ಎಂದು ಬಣ್ಣಸಿದರು.

2024 ನಿರಂಜನ ಅವರ ಜನ್ಮ ಶತಮಾನೋತ್ಸವದ ವರ್ಷ ಕೂಡ ಆಗಿರುವುದರಿಂದ ಮಂಡ್ಯದಲ್ಲಿ ನಡೆಯಲಿರುವ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಿರಂಜನರೂ ಸೇರಿ ಈ ವರ್ಷ ಜನ್ಮ ಶತಮಾನೋತ್ಸವ ಆಚರಿಸುತ್ತಿರುವ ಬರಹಗಾರರ ಕುರಿತು ವಿಶೇಷ ಗೋಷ್ಠಿ ಏರ್ಪಡಿಸಲಾಗುವುದು ತಿಳಿಸಿದರು.

ನಿರಂಜನರದು ಹೋರಾಟದ ಬದುಕು, ಹದಿನೇಳನೇ ವಯಸ್ಸಿನಲ್ಲೇ ಪತ್ರಿಕೋದ್ಯಮದ ಕಡೆಗೆ ಬಂದ ಅವರು, ಹಲವು ಪತ್ರಿಕೆಗಳಲ್ಲಿ ಕೆಲಸ ಮಾಡಿದರು. ಬಳಿಕ ತಮ್ಮ ಬರಹಗಳ ಮೂಲಕ ಸಾಹಿತ್ಯ ಪ್ರಪಂಚದಲ್ಲಿ ಪ್ರಸಿದ್ಧಿ ಪಡೆದರು ಎಂದು ಸ್ಮರಿಸಿದರು.

ಈ ವೇಳೆ ಕಸಾಪ ಪ್ರಕಟಣಾ ವಿಭಾಗದ ಸಂಚಾಲಕ ಎನ್.ಎಸ್. ಶ್ರೀಧರ ಮೂರ್ತಿ, ಕಾರ್ಯದರ್ಶಿ ನೇ.ಭ.ರಾಮಲಿಂಗಶೆಟ್ಟಿ, ಕೋಶಾಧ್ಯಕ್ಷ ಬಿ.ಎಂ.ಪಟೇಲ್ ಪಾಂಡು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net