ನಾಡಿನ ಪ್ರಸಿದ್ಧ ಸ್ಥಳಗಳನ್ನು ಗುರುತಿಸಲು ಸಮಿತಿ ರಚಿಸಲು ಕಸಾಪ ಮನವಿ

Kasapa
Published on

ಬೆಂಗಳೂರು: ಕರ್ನಾಟಕದ ಅನೇಕ ಸ್ಥಳಗಳು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರಲು ಅರ್ಹವಾಗಿದ್ದು, ಅವುಗಳನ್ನು ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳಲು ಪುರಾತತ್ವ ಇಲಾಖೆ ನೇತೃತ್ವದಲ್ಲಿ ಸಮಿತಿ ರಚಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಹೊಯ್ಸಳರು ರೂಪಿಸಿದ ಬೇಲೂರು, ಹಳೇಬೀಡು ಮತ್ತು ಸೋಮನಾಥಪುರದ ವಾಸ್ತಶಿಲ್ಪ ವಿಶ್ವ ಪಾರಂಪರಿಕ ಕಟ್ಟಡಗಳ ಪಟ್ಟಿಯಲ್ಲಿ ಸೇರಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಅವರು, ಕನ್ನಡಿಗರ ಸ್ವಾಭಿಮಾನವನ್ನು ಎತ್ತಿ ಹಿಡಿಯಲೆಂದೇ ರೂಪುಗೊಂಡಂತಹ ಹೊಯ್ಸಳ ರಾಜಮನೆತನ ಕನ್ನಡ ರಾಜ್ಯದ ವ್ಯಾಪ್ತಿ ಮತ್ತು ಪರಿಕಲ್ಪನೆಯನ್ನು ಗಮನಾರ್ಹವಾಗಿ ಹಿಗ್ಗಿಸಿತ್ತು. ಈ ರಾಜ ಮನೆತನದ ಆಳ್ವಿಕೆಯಲ್ಲಿ ಕನ್ನಡದ ಕಲೆ ಮತ್ತು ಸಂಸ್ಕೃತಿಗೆ ವಿಶೇಷ ಪ್ರೋತ್ಸಾಹ ದೊರಕಿತ್ತು ಎಂದು ಸ್ಮರಿಸಿದ್ದಾರೆ.

ಈವರೆಗೆ ಕರ್ನಾಟಕದ ಹಂಪಿ ಮತ್ತು ಪಟ್ಟದಕಲ್ಲು ಮಾತ್ರ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದವು. ಈಗ ಹೊಯ್ಸಳ ವಾಸ್ತುಶಿಲ್ಪ ಈ ಪಟ್ಟಿ ಸೇರಿದೆ. 2012ರಿಂದ ಪಶ್ಚಿಮ ಘಟ್ಟಗಳು ಪಾರಂಪರಿಕ ನೈಸರ್ಗಿಕ ತಾಣಗಳ ಪಟ್ಟಿಯಲ್ಲಿ, 2014ರಿಂದ ಶ್ರೀರಂಗಪಟ್ಟಣ ಮತ್ತು ಬಹುಮನಿ ವಾಸ್ತುಶಿಲ್ಪ ವಿಶ್ವ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಯಲ್ಲಿವೆ. ಅವುಗಳ ಪರಿಶೀಲನೆಯೂ ಶೀಘ್ರ ನಡೆದು, ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆಯುವಂತಾಗಬೇಕು. ಈ ಬಗ್ಗೆ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net