ಸಿಎಂ ಭೇಟಿ ಮಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ನಿಯೋಗ

Kasapa- CM
Published on

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ನೇತೃತ್ವದ ನಿಯೋಗವು ಕಾವೇರಿ ನಿವಾಸದಲ್ಲಿನ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಪರಿಷತ್ತು ಆವರಣದಲ್ಲಿ ಆದಿಕವಿ ಪಂಪ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.

ಈ ವೇಳೆ ಪರಿಷತ್ತಿನ ಕಾರ್ಯ ಚಟುವಟಿಕೆಗಳ ಬಗ್ಗೆ ಸಿಎಂ ಗೆ ವಿವರಣೆ ನೀಡಿದರು. ಗಡಿನಾಡು ಬಳ್ಳಾರಿಯಲ್ಲಿ ಈ ವರ್ಷಾಂತ್ಯದಲ್ಲಿ ನಡೆಯಬೇಕಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳದ ದಿನಾಂಕ ಶೀಘ್ರ ಅಂತಿಮಗೊಳಿಸಿ ಪ್ರಕಟಿಸುವ ಮೂಲಕ ಪೂರ್ವ ಸಿದ್ಧತೆಗೆ ಅನುವು ಮಾಡಿಕೊಡುವಂತೆ ಮನವಿ ಮಾಡಿದರು.

ಇದೇ ವೇಳೆ ಪರಿಷತ್ತಿನ ಕಾರ್ಯ ಚಟುವಟಿಕೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಕೆಲವು ಪೂರ್ವಗ್ರಹ ಪೀಡಿತರು ಅನಗತ್ಯವಾಗಿ ಅಪ ಪ್ರಚಾರ ಮಾಡುತ್ತ, ಬೇಡದ ವಿಚಾರ ಮುಂದಿಟ್ಟು ಗೊಂದಲ ಸೃಷ್ಟಿಸುತ್ತಿರುವ ಬಗ್ಗೆಯೂ ಮುಖ್ಯಮಂತ್ರಿ ಅವರ ಗಮನಕ್ಕೆ ತಂದು, ಅನೇಕ ವಾಸ್ತವಿಕ ಸಂಗತಿಗಳನ್ನು ದಾಖಲೆಗಳ ಸಹಿತ ತೋರಿಸಿ ಮನವರಿಕೆ ಮಾಡಿಕೊಡಲಾಯಿತು.ಎಲ್ಲವನ್ನು ಸಮಾಧಾನದಿಂದ ಆಲಿಸಿದ ಮುಖ್ಯಮಂತ್ರಿ ಅವರು, ಸಾಹಿತ್ಯ ಸಮ್ಮೇಳನ ದಿನಾಂಕ ನಿಗದಿ ಕುರಿತು ಸಂಬಂಧಪಟ್ಟವರಿಗೆ ನಿರ್ದೇಶನ ನೀಡುವುದಾಗಿ ತಿಳಿಸಿದರು.

ಮುಖ್ಯಮಂತ್ರಿಗಳ ಭೇಟಿ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಬಿ.ಎಂ.ಪಟೇಲ್ ಪಾಂಡು ಮತ್ತು ಎಚ್.ಬಿ.ಮದನಗೌಡ, ತುಮಕೂರು ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಲಿಂಗಪ್ಪ, ಹಾಸನ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net