

ಬೆಂಗಳೂರು: ಬಳ್ಳಾರಿಯಲ್ಲಿ ಡಿಸೆಂಬರ್‌ನಲ್ಲಿ ಆಯೋಜಿತವಾಗಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಹಿರಿಯ ಲೇಖಕಿ ಮತ್ತು ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಆಯ್ಕೆಗೆ ನಾಡಿನಾದ್ಯಂತ ಸ್ವಾಗತ ವ್ಯಕ್ತವಾಗುತ್ತಿದೆ.
ಇತ್ತೀಚೆಗೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಯು.ನಿಸಾರ್ ಅಹಮದ್ ಅವರು ಈ ಆಯ್ಕೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಕಾಡಾ ತುಂಗಭದ್ರಾ ಯೋಜನೆ ಅಧ್ಯಕ್ಷ ಹಾಗೂ ಕುಷ್ಟಗಿಯ ಮಾಜಿ ಶಾಸಕ ಹಸನಸಾಬ ದೋಟಿಹಾಳ ಅವರು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಿಗೆ ಪತ್ರ ಬರೆದು ಬಾನು ಮುಷ್ಕಾಕ್ ಆಯ್ಕೆಯನ್ನು ಸ್ವಾಗತಿಸಿದ್ದಾರೆ. ಈವರೆಗೂ ನಡೆದಿರುವ 87 ಸಾಹಿತ್ಯ ಸಮ್ಮೇಳನಗಳ ಇತಿಹಾಸದಲ್ಲಿ ಕೇವಲ ನಾಲ್ವರು ಮಹಿಳೆಯರಿಗೆ ಮಾತ್ರ ಸಮ್ಮೇಳನದ ಅಧ್ಯಕ್ಷರಾಗಿದ್ದಾರೆ. ಈಗ ಆಯ್ಕೆಯಾಗಿರುವ ಬಾನು ಮುಷ್ತಾಕ್ ಅವರು 5ನೇ ಮಹಿಳೆ ಆಗಿದ್ದಾರೆ. ಈ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ನಡೆಯುವ ಮೂಲಕ ಚರಿತ್ರೆ ನಿರ್ಮಿಸಲಿ ಎಂದು ಆಶಿಸಿದ್ದಾರೆ ಎಂದು ಪರಿಷತ್ತು ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.