ಕಸಾಪ ವಿಚಾರದಲ್ಲಿ ರಾಜಕೀಯಕ್ಕೆ ಅವಕಾಶವಿಲ್ಲ: ಡಾ. ಮಹೇಶ ಜೋಶಿ ಹೇಳಿಕೆ

Kasapa
Published on

ಬೆಂಗಳೂರು:ಕನ್ನಡ ಸಾಹಿತ್ಯ ಪರಿಷತ್ತಿಗೆ (ಕಸಾಪ) ಸಂಬಂಧಿಸಿದ ವಿಚಾರಗಳಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ. ಪರಿಷತ್ತಿನ ಕಾರ್ಯಚಟುವಟಿಕೆಗಳ ಕುರಿತು ಭಿನ್ನಾಭಿಪ್ರಾಯಗಳಿದ್ದರೆ ಚರ್ಚೆಯ ಮೂಲಕ ಬಗೆಹರಿಸಲು ಸಾಧ್ಯವಿದೆ ಎಂದು ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ ಹೇಳಿದ್ದಾರೆ.

ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ.ಎಸ್. ಪಾಚ್ಚಾಪುರೆ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ನಿಬಂಧನೆ ತಿದ್ದುಪಡಿ ಸಲಹಾ ಉಪಸಮಿತಿಯ ಶಿಫಾರಸಿನ ಅನುಸಾರ ಈಗ ಬೈಲಾ ತಿದ್ದುಪಡಿ ಮಾಡಲಾಗುತ್ತಿದೆ. ಪರಿಷತ್ತಿನ ಘನತೆ- ಗೌರವಗಳನ್ನು ಎತ್ತಿ ಹಿಡಿಯುವ ಜೊತೆಗೆ, ಸಮಕಾಲೀನ ಸವಾಲುಗಳಿಗೆ ಸ್ಪಂದಿಸುವ ಉದ್ದೇಶ ಇದರ ಹಿಂದೆ ಇದೆ. ಸರ್ವಾಧಿಕಾರಿಯಾಗಲು, ಪರಮಾಧಿಕಾರ ಪಡೆಯಲು ಈ ಕೆಲಸ ಮಾಡುತ್ತಿಲ್ಲ. ಈ ಕುರಿತು ಕೆಲವರು ಮಾಡುತ್ತಿರುವ ಆರೋಪಗಳಲ್ಲಿ ಹುರುಳಿಲ್ಲ. ಪರಿಷತ್ತಿನ ವಿಚಾರದಲ್ಲಿ ರಾಜಕೀಯ ಹಸ್ತಕ್ಷೇಪ ಮಾಡಿದರೆ, ಕಾರ್ಯಕಾರಿ ಸಮಿತಿ ಜತೆಗೆ ಚರ್ಚಿಸಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

ಸಮಾನಮನಸ್ಕರ ವೇದಿಕೆಯಡಿ ಉದ್ದೇಶಪೂರ್ವಕ ಹಾಗೂ ಪೂರ್ವಾಗ್ರಹಪೀಡಿತರಾಗಿ ಕಸಾಪ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತ, ಪರಿಷತ್ತಿನ ವಿರುದ್ಧ ಪ್ರತಿಭಟನಾ ಸಭೆ ನಡೆಸಲಾಗುತ್ತಿದೆ. ಈ ವೇದಿಕೆಯ ಪ್ರತಿಭಟನಾ ಸಭೆಯಲ್ಲಿ ವಿಧಾನಪರಿಷತ್ ಮಾಜಿ ಸದಸ್ಯಕೆ.ಟಿ. ಶ್ರೀಕಂಠೇಗೌಡ ಕೂಡ ಪಾಲ್ಗೊಂಡಿದ್ದರು. ರಾಜಕಾರಣಿಯಾದ ಅವರು ಈ ರೀತಿ ಪರಿಷತ್ತಿನ ವಿಚಾರದಲ್ಲಿ ಹಸ್ತಕ್ಷೇಪ ಮಾಡಿದ್ದು ಸರಿಯಲ್ಲ ಎಂದರು.

ಹಾಸನ ಜಿಲ್ಲೆಯ ಕಸಾಪ ಅಧ್ಯಕ್ಷ ಮಲ್ಲೇಶಗೌಡ, ಬೆಂ.ಗ್ರಾಮಾಂತರ ಕಸಾಪ ಅಧ್ಯಕ್ಷ ಬಿ.ಎನ್. ಕೃಷ್ಣಪ್ಪ, ಸಂಘ ಸಂಸ್ಥೆಗಳ ಪ್ರತಿನಿಧಿ ನಬಿಸಾಬ ಕುಷ್ಟಗಿ, ಹಿಂದುಳಿದ ವರ್ಗಗಳ ಪ್ರತಿನಿಧಿ ಸುನೀಲ್ ಯಳವಾರ, ಪರಿಷತ್ತಿನ ಗೌರವ ಕೋಶಾಧ್ಯಕ್ಷ ಪಟೇಲ್ ಪಾಂಡು ಇತರರಿದ್ದರು.

ಉಪಸಮಿತಿ ರಚನೆ:

ಪರಿಷತ್ತಿನ ಧ್ಯೇಯೋದ್ದೇಶಗಳ ಅನುಷ್ಠಾನಕ್ಕಾಗಿ, ವಿವಿಧ ಕಾರ್ಯಕಲಾಪಗಳನ್ನು ಸುಸೂತ್ರವಾಗಿ ನಡೆಸಲು ಉಪ ಸಮಿತಿಯೊಂದನ್ನು ರಚನೆ ಮಾಡಲಾಗಿದೆ. ನಾಡಿನ ಚಿಂತಕರು, ಕನ್ನಡಿಗರೊಂದಿಗೆ ಸಮಾಲೋಚನೆ ನಡೆಸಲು, ವಾಸ್ತವ ಮನವರಿಕೆ ಮಾಡಲು ಈ ಉಪ ಸಮಿತಿ ಸಹಕಾರಿಯಾಗಲಿದೆ. ಇದರಲ್ಲಿ ಕಸಾಪ ವಿವಿಧ ಜಿಲ್ಲಾ ಘಟಕಗಳ ಅಧ್ಯಕ್ಷರು ಇರಲಿದ್ದು,ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪರಿಷತ್ತಿನ ಬಗ್ಗೆ ನಿಖರ ಮಾಹಿತಿಗಳನ್ನು ತಿಳಿಸಲಾಗುತ್ತದೆ ಎಂದು ಮಹೇಶ ಜೋಶಿ ಹೇಳಿದರು.

ಸೇಡು ತೀರಿಸಿಕೊಳ್ಳುವ ಅಂಶವಿಲ್ಲ

ಪರಿಷತ್ತಿನ ಯಾವುದೇ ನಿಯಮಗಳನ್ನು ಉಲ್ಲಂಸಿಲ್ಲ. ಬದಲಿಗೆ ಪರಿಷತ್ತಿನ ಘನತೆ, ಗೌರವಗಳಿಗೆ ಹಾಗೂ ಧ್ಯೇಯೋದ್ದೇಶಗಳಿಗೆ ವಿರುದ್ಧವಾಗಿ ನಡೆದವರಿಗೆ ವಿವರಣೆ ಕೇಳಲಾಗಿದೆ. ಅದಕ್ಕೆ ಅವರು ನೀಡುವ ಉತ್ತರ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಇದರಲ್ಲಿ ಯಾವುದೇ ಸೇಡು ತೀರಿಸಿಕೊಳ್ಳುವ ಅಂಶವೇ ಇಲ್ಲ ಎಂದು ಜೋಶಿ ಸ್ಪಷ್ಟಪಡಿಸಿದರು. ಇದೇ ವೇಳೆ, ಮಂಡ್ಯದಲ್ಲಿ ನಡೆದ ಸಮ್ಮೇಳನದ ಖರ್ಚುವೆಚ್ಚ ಕುರಿತು ಆಡಿಟ್ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net