

ಬೆಂಗಳೂರು: ವಚನ ಸಾಹಿತ್ಯದ ವಿರಾಟ್ ಸ್ವರೂಪವನ್ನು ಪರಿಚಯಿಸಿಕೊಟ್ಟ ಫ.ಗು. ಹಳಕಟ್ಟಿಯವರು ಸಹಜವಾಗಿಯೇ ವಚನ ಪಿತಾಮಹ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಮಹೇಶ ಜೋಶಿ ಬಣ್ಣಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಯೋಜಿಸಿದ್ದ .ಗು. ಹಳಕಟ್ಟಿ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ತಾಳೆಯೋಲೆಗಳನ್ನು ಸಂಗ್ರಹಿಸುವುದಕ್ಕೆ ಮೊದಲು ಕವಿ ಚರಿತ್ರೆಕಾರರು ಗುರುತಿಸಿದ್ದು ಕೇವಲ 50 ವಚನಕಾರರನ್ನು. ಫ.ಗು. ಹಳಕಟ್ಟಿ ತಮ್ಮ ಸಂಶೋಧನೆಯ ಮೂಲಕ 250ಕ್ಕೂ ಹೆಚ್ಚು ವಚನಕಾರರನ್ನು ಬೆಳಕಿಗೆ ತಂದರು. ಜತೆಗೆ ಹರಿಹರನ 42 ರಗಳೆಗಳನ್ನು ಸಂಶೋಧಿಸಿ ಪ್ರಕಟಿಸಿದರು.
ಬಸವಣ್ಣನವರ ವಚನಗಳನ್ನು ಇಂಗ್ಲಿಷ್‌ಗೆ ಅನುವಾದಿಸಿ ‘ಇಂಡಿಯನ್ ಆಂಟಿಕ್ವರಿ’ಯಲ್ಲಿ ಪ್ರಕಟಿಸಿದರು. ವಚನಗಳ ಗಾಯನಕ್ಕೂ ವ್ಯವಸ್ಥೆ ಮಾಡಿದರು ಎಂದು ಸ್ಮರಿಸಿದರು.
ದೂರದೃಷ್ಟಿ ಇದ್ದ ಹಳಕಟ್ಟಿಯವರು ಸಾಹಿತ್ಯ ಮತ್ತು ಪತ್ರಿಕೋದ್ಯಮದ ಜತೆ ಜತೆಗೆ ಸಂಘಟನೆ, ಬ್ಯಾಂಕಿಂಗ್, ಕಷಿ, ನೇಕಾರಿಕೆ, ಸಹಕಾರಿ ಹೀಗೆ ಎಲ್ಲದರಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. 1920ರಲ್ಲಿ ಮುಂಬೈವಿಧಾನ ಪರಿಷತ್ತಿನ ಸದಸ್ಯತ್ವ, 1926ರಲ್ಲಿ ಬಳ್ಳಾರಿಯಲ್ಲಿ ನಡೆದ 12ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, 1928ರಲ್ಲಿ ಜರುಗಿದ 3ನೇ ಕರ್ನಾಟಕ ಏಕೀಕರಣ ಪರಿಷತ್ತಿನ ಅಧ್ಯಕ್ಷತೆ ಸೇರಿ ಹಲವು ಗೌರವಗಳಿಗೆ ಪಾತ್ರರಾಗಿದ್ದರು ಎಂದರು.
ಕಾರ್ಯಕ್ರಮದಲ್ಲಿ ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕ ಪ್ರೊ. ಎನ್.ಎಸ್. ಶ್ರೀಧರ ಮೂರ್ತಿ, ಕಾರ್ಯದರ್ಶಿ ನೇ.ಭ. ರಾಮಲಿಂಗಶೆಟ್ಟಿ, ಕೋಶಾಧ್ಯಕ್ಷ ಬಿ.ಎಂ. ಪಟೇಲ್ ಪಾಂಡು ಉಪಸ್ಥಿತರಿದ್ದರು.