ಕನ್ನಡ ಸಾಹಿತ್ಯಕ್ಕೆ ಭದ್ರ ಬುನಾದಿ ಹಾಕಿದವರು ಜೈನರು: ಮಹೇಶ ಜೋಶಿ

Kasapa - award programme
Published on

ಬೆಂಗಳೂರು: ಕನ್ನಡ ಸಾಹಿತ್ಯಕ್ಕೆ ಭದ್ರ ಬುನಾದಿ ಹಾಕಿಕೊಟ್ಟವರು ಜೈನರು. ಅದರ ಅಡಿಪಾಯದ ಮೇಲೆ ಇಂದು ಭವ್ಯ ಸಾಹಿತ್ಯ ಸೌಧ ನಿರ್ಮಾಣಗೊಂಡಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಹೇಳಿದರು.

ಪರಿಷತ್ತಿನ ಆವರಣದಲ್ಲಿನ ಶ್ರೀ ಕೃಷ್ಣರಾಜ ಪರಿಷತ್ತು ಮಂದಿರದಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಕನಕಗಿರಿ ಕ್ಷೇತ್ರದ ಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಡಾ. ಪ್ರೀತಿ ಶುಭಚಂದ್ರ ಅವರಿಗೆ ‘ಚಾವುಂಡರಾಯ ದತ್ತಿ ಪ್ರಶಸ್ತಿ ಪ್ರದಾನ’ ಮಾಡಿದರು.

ನಂತರ ಜೋಶಿ ಅವರು, ಇಂದು ಜೈನರ ಒಟ್ಟು ಜನಸಂಖ್ಯೆಯ ಪ್ರಮಾಣ ಶೇ. 1ಕ್ಕಿಂತ ಕಡಮೆ ಇರಬಹುದು. ಆದರೆ ಪ್ರಾಚೀನ ಕನ್ನಡ ಸಾಹಿತ್ಯದ ಆರಂಭದಿಂದ ತೊಡಗಿ ನಡುಗನ್ನಡವನ್ನೂ ಸೇರಿಸಿಕೊಂಡರೆ ಅವರ ಕೊಡುಗೆ ಸಂಖ್ಯೆಯಲ್ಲಿ ಮಾತ್ರ ಅಲ್ಲ ಗುಣಮಟ್ಟದಲ್ಲೂ ಕನ್ನಡ ಸಾಹಿತ್ಯದ ಅರ್ಧಭಾಗವನ್ನು ಗಾಢವಾಗಿ ಆವರಿಸುತ್ತದೆ ಎಂದರು.

ಒಂದು ಅಂದಾಜಿನ ಪ್ರಕಾರ ಸುಮಾರು 450 ಜೈನ ಕವಿಗಳು 520 ಕ್ಕೂ ಹೆಚ್ಚಿನ ಕನ್ನಡ ಕೃತಿಗಳನ್ನು ರಚಿಸಿದ್ದಾರೆ. ಪುರಾಣ, ಮಹಾಕಾವ್ಯ, ಜನಪದ ಕಥೆ, ಕಾವ್ಯಶಾಸ್ತ್ರ, ಛಂದಸ್ಸು, ವ್ಯಾಕರಣ, ಸೂಪಶಾಸ್ತ್ರ, ಗಣಿತಶಾಸ್ತ್ರ, ಚಂಪೂ, ಗದ್ಯ, ಸಾಂಗತ್ಯ, ಮುಕ್ತಕ ಹೀಗೆ ಹಲವು ಪ್ರಕಾರಗಳಲ್ಲಿ ಹಲವು ಪ್ರಬೇಧಗಳಲ್ಲಿ ಕನ್ನಡ ಜೈನ ಸಾಹಿತ್ಯದ ಹರಹು ಚಾಚಿಕೊಂಡಿದೆ ಎಂದು ಜೈನರ ಕೊಡುಗೆಯನ್ನು ಬಣ್ಣಿಸಿದರು.

ಪಂಪನ ಪುತ್ಥಳಿ ಸ್ಥಾಪನೆ: ಆದಿ ಕವಿ ಪಂಪ ಕನ್ನಡ ಸಾಹಿತ್ಯಕ್ಕೆ ಬಹು ದೊಡ್ಡ ಕೊಡುಗೆ ನೀಡಿದ್ದಾರೆ. ಅವರ ಗೌರವಾರ್ಥ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಪಂಪನ ಪುತ್ಥಳಿ ಸ್ಥಾಪಿಸಲಾಗುವುದು. ಅಲ್ಲದೆ ಪರಿಷತ್ತು ಪಂಪ ಮಹಾಕವಿ ರಸ್ತೆಯಲ್ಲಿ ಇರುವುದು ಮತ್ತೊಂದು ವೈಶಿಷ್ಟ್ಯವಾಗಿದೆ. ಈ ರಸ್ತೆಯನ್ನು ಸಂಪೂರ್ಣ ಕನ್ನಡಮಯವಾಗಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿದೆ ಎಂದು ಡಾ. ಮಹೇಶ ಜೋಶಿ ತಿಳಿಸಿದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಷನ್ ಸೊಸೈಟಿ ಉಜಿರೆಯ ಉಪಾಧ್ಯಕ್ಷ ಧರ್ಮಸ್ಥಳ ಸುರೇಂದ್ರ ಕುಮಾರ್ ಅವರು ಮಾತನಾಡಿ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ಐವತ್ತು ವರ್ಷಗಳಲ್ಲಿ ಐದುನೂರು ವರ್ಷಗಳಿಗಾಗುವಷ್ಟು ಕೆಲಸವನ್ನು ಮಾಡಿದ್ದಾರೆ. ಅದನ್ನು ಮುಂದುವರೆಸಿಕೊಂಡು ಹೋಗುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

ಸಾಹಿತಿ ಡಾ. ಹಂಪ ನಾಗರಾಜಯ್ಯ ಮಾತನಾಡಿ, ಜೈನರಿಗೆ ಅಂತರಿಕ ಶೋಧದಷ್ಟೇ ಸಾಮಾಜಿಕ ಮುಖಗಳೂ ಮುಖ್ಯ. ಈ ಪುರಸ್ಕಾರ ಅದರ ಭಾಗವಾಗಿದ್ದು, ತಮ್ಮ ವಿದ್ಯಾರ್ಥಿನಿ ಡಾ.ಪ್ರೀತಿ ಶುಭಚಂದ್ರ ಅವರಿಗೆ ಈ ಪುರಸ್ಕಾರ ದೊರಕಿರುವುದು ತಮಗೆ ಇನ್ನೊಮ್ಮೆ ದೊರೆದ ಭಾವ ಮೂಡಿಸಿದೆ ಎಂದರು.

ಕಾರ್ಯಕ್ರಮದಲ್ಲಿ ನ್ಯೂಜರ್ಸಿಯ ಬೃಂದಾವನ ಕನ್ನಡ ಕೂಟದ ಸ್ಥಾಪಕ ಅಧ್ಯಕ್ಷರಾದ ಪ್ರಸನ್ನ ಕುಮಾರ್, ಪರಿಷತ್ತಿನ ಗೌರವ ಕಾರ್ಯದರ್ಶಿ ನೇ.ಭ.ರಾಮಲಿಂಗ ಶೆಟ್ಟಿ, ಗೌರವ ಕೋಶಾಧ್ಯಕ್ಷ ಬಿ.ಎಂ.ಪಟೇಲ್ ಪಾಂಡು ಇತರರು ಇದ್ದರು.

ಕೋಟ್

‘‘ಪಂಪ, ರತ್ನಕಾರವರ್ಣಿ ಕಾವ್ಯದಲ್ಲಿ ಚಿತ್ರಿಸಿದ ಬಾಹುಬಲಿಯನ್ನು ಚಾವುಂಡ ರಾಯರು ಮೂರ್ತಿರೂಪಕ್ಕೆ ತಂದವರು. ಅವರ ಹೆಸರಿನಲ್ಲಿನ ಪ್ರಶಸ್ತಿ ಪಡೆದಿರುವುದು ಧನ್ಯತೆ ಮೂಡಿಸಿದೆ. ಈ ಪ್ರಶಸ್ತಿಯನ್ನು ಇತ್ತೀಚೆಗೆ ಅಗಲಿದ ಸಾಹಿತಿ ಡಾ.ಕಮಲಾ ಹಂಪನಾ ಅವರಿಗೆ ಅರ್ಪಿಸುವೆ.’ -

ಪ್ರಶಸ್ತಿ ಪುರಸ್ಕೃತೆ ಡಾ. ಪ್ರೀತಿ ಶುಭಚಂದ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net