

ಕುಂದಾಪುರ: ವಿವಿಧತೆಯಲ್ಲಿ ಏಕತೆ ಕನ್ನಡ ನೆಲದ ಹಿರಿಮೆ. ಕೆಲವೊಂದು ಕಾರಣಕ್ಕೆ ಸಾಮಾಜಿಕ ವಾತಾವರಣ ಕಲುಷಿತಗೊಂಡಿದೆ. ಇದನ್ನು ನಿರ್ಮೂಲನೆ ಮಾಡಿ ಸೌಹಾರ್ದತೆ ಮೂಡಿಸುವ ನೆಲೆಯಲ್ಲಿ ಅ.31ರಂದು ಕುಂದಾಪುರದಲ್ಲಿ ಕಲಾಕ್ಷೇತ್ರ ಸಂಸ್ಥೆ ನೇತೃತ್ವದಲ್ಲಿ ಕನ್ನಡ ರಥೋತ್ಸವ ಆಯೋಜಿಸಲಾಗಿದೆ ಎಂದು ಕುಂದಾಪುರ ಕಲಾಕ್ಷೇತ್ರ ಸಂಸ್ಥೆ ಅಧ್ಯಕ್ಷ ಕಿಶೋರ್ ಕುಮಾರ್ ಬಿ.ಹೇಳಿದರು.
ಸೋಮವಾರ ಕುಂದಾಪುರದಲ್ಲಿ ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಅಂದು ಮಧ್ಯಾಹ್ನ 3ಕ್ಕೆ ಉಡುಪಿ ಜಿಲ್ಲಾಧಿಕಾರಿ ರಥೋತ್ಸವಕ್ಕೆ ಚಾಲನೆ ನೀಡುವರು ಎಂದು ತಿಳಿಸಿದರು. ರಾಜೇಶ್ ಕಾವೇರಿ ಪ್ರಾಸ್ತಾವಿಕ ಮಾತನಾಡಿದರು. 7 ದಿನದ ಉತ್ಸವ ಅರ್ಥಪೂರ್ಣವಾಗಿಸುವ ನಿಟ್ಟಿನಲ್ಲಿ ಚರ್ಚೆ ನಡೆಯಿತು. ಸಭೆಯಲ್ಲಿ ಕನ್ನಡ ಉತ್ಸವ ಹಾಗೂ ಕನ್ನಡ ರಥೋತ್ಸವದ ಆಮಂತ್ರಣ ಬಿಡುಗಡೆಗೊಳಿಸಲಾಯಿತು.
ಪುರಸಭೆ ಉಪಾಧ್ಯಕ್ಷೆ ವನಿತಾ ಬಿಲ್ಲವ, ಬಿಲ್ಲವ ಮಹಿಳಾ ಸಂಘ ಅಧ್ಯಕ್ಷೆ ಗಿರಿಜಾ ಮಾಣಿಗೋಪಾಲ್, ಪುರಸಭೆ ಸದಸ್ಯೆ ದೇವಕಿ ಪಿ.ಸಣ್ಣಯ್ಯ, ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ, ಮೂಡ್ಲಕಟ್ಟೆ ಎಂಐಜೆ ಇನ್‌ಸ್ಟಿಟ್ಯೂಟ್ ಅಧ್ಯಕ್ಷ ಸಿದ್ದಾರ್ಥ ಜೆ.ಶೆಟ್ಟಿ ಉಡುಪಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಪುರಸಭೆ ಸದಸ್ಯ ಅಬು ಮಹಮ್ಮದ್, ಬಿಜೆಪಿ ಕುಂದಾಪುರ ಮಂಡಲ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ ಉಪಸ್ಥಿತರಿದ್ದರು.